ಚಿಕ್ಕಬಳ್ಳಾಪುರ: ಸರ್ಕಾರ ಒಂದು ವೈದ್ಯಕೀಯ ಶಿಕ್ಷಣ ಸಂಸ್ಥೆ ಸ್ಥಾಪಿಸಬೇಕಾದರೆ 10 ವರ್ಷ ತೆಗೆದುಕೊಳ್ಳುತ್ತದೆ. ಆದರೆ ಸದ್ಗುರು ಅವರು ಮ್ಯಾಜಿಕ್ ಮಾಡಿದಷ್ಟು ವೇಗವಾಗಿ ನಿರ್ಮಿಸುತ್ತಾರೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದ ಗುರುವಾರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲರೂ ನಗರಗಳನ್ನು ಹುಡುಕಿ ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸುವರು. ಆದರೆ ಸದ್ಗುರು ಅವರು ಕಲಬುರಗಿಯ ಗ್ರಾಮೀಣ ಪ್ರದೇಶದಲ್ಲೂ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ವಿದ್ಯಾ ಸಂಸ್ಥೆ ನಿರ್ಮಿಸಿದ್ದಾರೆ. ಆ ಮೂಲಕ ಬಡವರಿಗೆ ನೆರವಾಗುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸದ್ಗುರು ಮಧುಸೂದನ ಸಾಯಿ ಮಾತನಾಡಿ, ಆರೋಗ್ಯ ಸೇವೆಯನ್ನು ವ್ಯಾಪಾರಕ್ಕೆ ಬಳಸುವುದು ತಪ್ಪು. ಉಚಿತ ವೈದ್ಯಕೀಯ ಸೇವೆ ನೀಡುವ ಮೂಲಕ ನಾವು ಇದರ ವಿರುದ್ಧ ಧರ್ಮಯುದ್ಧವನ್ನು ಮಾಡುತ್ತಿದ್ದೇವೆ. ನಮ್ಮ ಆಸ್ಪತ್ರೆಗೆ ಯಾರೇ ಬಂದರೂ ಅವರ ಆದಾಯ, ಧರ್ಮದ ಹಿನ್ನೆಲೆ ಪರಿಗಣಿಸದೇ ಸೇವೆ ಒದಗಿಸುತ್ತೇವೆ. ಬೆಂಗಳೂರಿನಿಂದ ಕೇವಲ 2 ಗಂಟೆ ಪ್ರಯಾಣದಲ್ಲಿ ನಮ್ಮ ಆಸ್ಪತ್ರೆ ತಲುಪಬಹುದಾಗಿದೆ ಎಂದರು.
ಎಲ್ಲರಿಗೂ ಶಿಕ್ಷಣ ಪಡೆಯುವ ಹಕ್ಕು, ಆರೋಗ್ಯ ಸೇವೆ ಸಿಗುವುದು ಸಹ ಧರ್ಮದ ಭಾಗವಾಗಿದೆ. ಆರ್ಥಿಕ ಸಂಕಷ್ಟಗಳಿಂದಾಗಿ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ಮತ್ತು ಜನರು ಆರೋಗ್ಯ ಸೇವೆಯಿಂದ ವಂಚಿತರಾಗಬಾರದು. ಎಲ್ಲರಿಗೂ ಇವು ಸಿಗುವಂತೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ. ಇದೇ ಧರ್ಮಯುದ್ಧ ಎಂದು ವ್ಯಾಖ್ಯಾನಿಸಿದರು.
ಎಲ್ಲರಿಗೂ ಸಂಪೂರ್ಣ ಉಚಿತವಾಗಿ ಶಿಕ್ಷಣ ಸಿಗುವವರೆಗೆ ನಾವು ಹೋರಾಡುತ್ತೇವೆ. ನಮ್ಮ ಪ್ರಯತ್ನವು ಇತರರಿಗೂ ಪ್ರೇರಣೆಯಾಗಲಿದೆ ಎಂದು ನಾನು ಭಾವಿಸಿದ್ದೇನೆ. ಶಿಕ್ಷಣವು ಜನ್ಮಸಿದ್ಧ ಹಕ್ಕಾಗಿರಬೇಕು. ಅದು ಕೆಲವರ ಸವಲತ್ತಾಗಬಾರದು ಎಂದರು.
ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಹಾಗೂ ಅರ್ಬನ್ ಸಾಯಿ ಸ್ವಾಸ್ಥ್ಯ ಕೇಂದ್ರಗಳಿಗೆ ಔಷಧಗಳ ನೆರವು ನೀಡುತ್ತಿರುವ 'ಬೆಂಗಳೂರು ಫಾರ್ಮಾಸಿಟಿಕಲ್ ಅಂಡ್ ರಿಸರ್ಚ್ ಲ್ಯಾಬೋರೇಟರೀಸ್' (ಬಿಪಿಆರ್‍ಎಲ್) ಸಂಸ್ಥೆಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ‘ ನೀಡಲಾಯಿತು. ಬಿಪಿಆರ್‌ಎಲ್‌ನ ನಿರ್ದೇಶಕರಾದ ಜೈಯಪ್ರಕಾಶ್ ಮಡಿ ಹಾಗೂ ಮಲ್ಲಿಕಾ ಮಡಿ ಪ್ರಶಸ್ತಿ ಸ್ವೀಕರಿಸಿದರು.
ಅಲ್ಜೀರಿಯಾ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಅರಾಫತ್ ಬೆಂಡೌಮ ಅವರಿಗೆ ‘ಒಂದು ಜಗತ್ತು ಒಂದು ಕುಟುಂಬ ಮಾನವೀಯ 2025' ಪುರಸ್ಕಾರ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.