ADVERTISEMENT

ಶಿಡ್ಲಘಟ್ಟ: ಭಾರಿ ಮಳೆಯಿಂದಾಗಿ ತುಂಬಿದ ಅಮ್ಮನಕೆರೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 5:50 IST
Last Updated 20 ನವೆಂಬರ್ 2021, 5:50 IST
ಶಿಡ್ಲಘಟ್ಟದ ಹೊರವಲಯದ ಅಮ್ಮನಕೆರೆ ತುಂಬಿರುವುದು
ಶಿಡ್ಲಘಟ್ಟದ ಹೊರವಲಯದ ಅಮ್ಮನಕೆರೆ ತುಂಬಿರುವುದು   

ಶಿಡ್ಲಘಟ್ಟ: ತಾಲ್ಲೂಕಿನೆಲ್ಲೆಡೆ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಹಳೆಯ ಮನೆಗಳು ಹಲವೆಡೆ ಕುಸಿದಿದ್ದರೆ, ಕೆರೆಗಳು ನೀರು ತುಂಬಿ ನಳನಳಿಸುತ್ತಿವೆ.

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಮೂರು ಮನೆಗಳು ಹಾನಿಯಾಗಿದ್ದರೆ, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 14 ಮನೆಗಳು, ಮೇಲೂರು ಗ್ರಾಮ ಪಂಚಾಯಿತಿಯ ಕಂಬದಹಳ್ಳಿಯಲ್ಲಿ ಒಂದು ಮನೆ, ಮಳಮಾಚನಹಳ್ಳಿಯಲ್ಲಿ ಒಂದು ಮನೆ ಹಾನಿಗೊಳಗಾಗಿದೆ. ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಹಾನಿಗೊಳಗಾದವರಿಗೆ ಪಿಡಿಒಗಳು ಗ್ರಾಮ ಪಂಚಾಯಿತಿಯಿಂದ ನೆರವು ನೀಡಿದ್ದು, ತಾತ್ಕಾಲಿಕವಾಗಿ ವಸತಿ ಏರ್ಪಾಡನ್ನೂ ಮಾಡಿದ್ದಾರೆ.

ನಗರದ ಹೊರವಲಯದ ಅಮ್ಮನಕೆರೆ ಸೇರಿದಂತೆ ತಾಲ್ಲೂಕಿನ ಹಲವಾರು ಕೆರೆಗಳಲ್ಲಿ ನೀರು ತುಂಬಿರುವುದರಿಂದ ಕೆರೆ ಏರಿಯಲ್ಲಿ ಸಂಚಾರಕ್ಕೆ ತೊಂದರೆಯಾಗದ ಹಾಗೆ ಮತ್ತು ಅಡೆತಡೆ ಇಲ್ಲದೆ ಅವಘಡಗಳು ಸಂಭವಿಸುವ ಕಡೆಗಳಿಗೆ ತಹಶೀಲ್ದಾರ್ ರಾಜೀವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಮೇಲೂರು ಬಳಿಯ ಕಟ್ಟು ಕಾಲುವೆಯಲ್ಲಿ ನೀರು ರಭಸದಿಂದ ಹರಿಯುತ್ತಿದೆ. ಕೇಶವಪುರದ ಕೆರೆಗೆ ತೂಬನ್ನು ಸರಿಯಾಗಿ ನಿರ್ಮಿಸದ ಕಾರಣ ನೀರು ಕೆರೆಯಲ್ಲಿ ನಿಲ್ಲದೆ ವ್ಯರ್ಥವಾಗಿ ಹರಿದುಹೋಗುತ್ತಿದೆ.

ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ವ್ಯಾಪ್ತಿಯಲ್ಲಿ 63 ಮನೆಗಳು ಮಳೆಗೆ ಹಾನಿಗೊಳಗಾಗಿವೆ. ಆನೇಮೊಡಗು, ಅಮ್ಮನಕೆರೆ, ಗುಡಿಹಳ್ಳಿ, ದೊಡ್ಡಬಂದರಘಟ್ಟ-ಚಿಕ್ಕಬಂದರಘಟ್ಟ, ಗೋಣಿಮರದಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ ಎಂದರು.

ತಾಲ್ಲೂಕು ಪಂಚಾಯಿತಿ ಇಒ ಚಂದ್ರಕಾಂತ್ ಮಾತನಾಡಿ, ಕನ್ನಪನಹಳ್ಳಿ ಕೆರೆ, ಶೆಟ್ಟಿಕೆರೆ, ತಿಮ್ಮಸಂದ್ರ ಕೆರೆ ಹಾಗೂ ಗುಡಿಹಳ್ಳಿ ಕೆರೆಗಳನ್ನು ವೀಕ್ಷಿಸಿದ್ದೇವೆ. ಶೆಟ್ಟಿಕೆರೆಯನ್ನು ಅಲ್ಲಿಯೇ ಇದ್ದು ರಿಪೇರಿ ಮಾಡಿಸಲಾಗಿದೆ. ಕನಪನಹಳ್ಳಿ ಕೆರೆ ಕಟ್ಟೆ ಜಿನುಗುತ್ತಿದ್ದು, ಎಇಇಗೆ ಸರಿಪಡಿಸುವಂತೆ ಹೇಳಿದ್ದೇನೆ ಎಂದರು.

ಸರ್ಕಲ್ ಇನ್‌ಸ್ಪೆಕ್ಟರ್ ಧರ್ಮೇಗೌಡ ಮಾತನಾಡಿ, ಗುಡಿಹಳ್ಳಿ ಕೆರೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಬ್ಯಾರಿಕೇಡ್ ಹಾಕಲಾಗಿದೆ ಎಂದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.