ADVERTISEMENT

ಮಂಚೇನಹಳ್ಳಿ: ತಗ್ಗು ಪ್ರದೇಶ ಜಲಾವೃತ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 5:14 IST
Last Updated 24 ಅಕ್ಟೋಬರ್ 2021, 5:14 IST
ಶನಿವಾರ ಸುರಿದ ಮಳೆಯಿಂದಾಗಿ ಮಂಚೇನಹಳ್ಳಿ ವ್ಯಾಪ್ತಿಯ ಕೆಲವು ತಗ್ಗುಪ್ರದೇಶ ಜಲಾವೃತವಾಗಿವೆ
ಶನಿವಾರ ಸುರಿದ ಮಳೆಯಿಂದಾಗಿ ಮಂಚೇನಹಳ್ಳಿ ವ್ಯಾಪ್ತಿಯ ಕೆಲವು ತಗ್ಗುಪ್ರದೇಶ ಜಲಾವೃತವಾಗಿವೆ   

ಗೌರಿಬಿದನೂರು: ತಾಲ್ಲೂಕಿನ ಮಂಚೇನಹಳ್ಳಿ ಹಾಗೂ ಡಿ. ಪಾಳ್ಯ ಹೋಬಳಿ‌ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ಉತ್ತಮ‌ ಮಳೆಯಾಗಿದೆ. ಕೆರೆ, ಕುಂಟೆಗಳು ತುಂಬಿ ಹರಿದ ಪರಿಣಾಮ ನದಿ ಹಾಗೂ ಹಳ್ಳ, ಕೊಳ್ಳಗಳಲ್ಲಿ ಮಳೆ ನೀರು ಹರಿದಿದೆ.

ಕಳೆದ 15 ದಿನಗಳಿಂದ ತಾಲ್ಲೂಕಿನ ‌ವಿವಿಧೆಡೆ ಸುರಿದ ಉತ್ತಮ‌ ಮಳೆಯಿಂದಾಗಿ ಬಹುತೇಕ ಕೆರೆ, ಕುಂಟೆಗಳು ತುಂಬಿವೆ. ಈ ಭಾಗದ ಉತ್ತರ ಪಿನಾಕಿನಿ‌ ನದಿಯು ಮೈದುಂಬಿ ಹರಿಯುತ್ತಿದೆ. ಕಳೆದೊಂದು ವಾರದಿಂದ ಮಳೆಯಿಲ್ಲದ ಕಾರಣ ಪಿನಾಕಿನಿ ‌ನದಿಯಲ್ಲಿ‌ ನೀರಿನ ಹರಿವು ಕಡಿಮೆಯಾಗಿತ್ತು. ಶನಿವಾರ ಸುರಿದ ಉತ್ತಮ‌ ಮಳೆಯಿಂದಾಗಿ ಮತ್ತೆ ಜಲಮೂಲಗಳಿಗೆ ಜೀವ ಬಂದಿದೆ.

ಪಿನಾಕಿನಿ ನದಿಯಲ್ಲಿ ಶನಿವಾರ ಸಂಜೆ ನೀರಿನ‌ ಹರಿವು ಹೆಚ್ಚಾಗಿದೆ‌. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಅನಾಹುತ ಸಂಭವಿಸಿದೆ. ಇದರಿಂದಾಗಿ ನದಿ ಪಾತ್ರದಲ್ಲಿನ ರೈತರು‌ ಹಾಗೂ ನಿರಾಶ್ರಿತರಿಗೆ ಆತಂಕ ಎದುರಾಗಿದೆ.

ADVERTISEMENT

ಇತ್ತೀಚೆಗೆ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ತಾಲ್ಲೂಕಿನ ವಿವಿಧೆಡೆ ರೈತರು ಬೆಳೆದಿರುವ ರಾಗಿ, ಮುಸುಕಿನ ಜೋಳ, ನೆಲಗಡಲೆ ಇನ್ನಿತರ ಬೆಳೆಗಳು ನೆಲಕಚ್ಚಿ‌ವೆ. ಮೇವು ಸಹ ಮಳೆ‌ ನೀರಿನಿಂದಾಗಿ ಕಪ್ಪಾಗಿ ಜಾನುವಾರು ಬಳಕೆಗೆ ಯೋಗ್ಯವಿಲ್ಲದಂತಾಗಿದೆ. ಉತ್ತಮ ಮಳೆಯಿಂದ ಸಂತಸಪಡಬೇಕಾದ ರೈತರು ಚಿಂತಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.