ADVERTISEMENT

ಬಾಗೇಪಲ್ಲಿ: ಕೆರೆಗೆ ಹರಿದ ಎಚ್.ಎನ್.ವ್ಯಾಲಿ ನೀರು

ಪಿ.ಎಸ್.ರಾಜೇಶ್
Published 27 ಅಕ್ಟೋಬರ್ 2025, 6:53 IST
Last Updated 27 ಅಕ್ಟೋಬರ್ 2025, 6:53 IST
<div class="paragraphs"><p>ಬಾಗೇಪಲ್ಲಿ ತಾಲ್ಲೂಕಿನ ಆಚೇಪಲ್ಲಿ ಗ್ರಾಮದ ಕೆರೆಗೆ ಎಚ್.ಎನ್ ವ್ಯಾಲಿಯ 2ನೇ ಹಂತದಲ್ಲಿ ಸಂಸ್ಕರಿಸಿದ ನೀರು ಹರಿಯುತ್ತಿರುವುದು</p></div>

ಬಾಗೇಪಲ್ಲಿ ತಾಲ್ಲೂಕಿನ ಆಚೇಪಲ್ಲಿ ಗ್ರಾಮದ ಕೆರೆಗೆ ಎಚ್.ಎನ್ ವ್ಯಾಲಿಯ 2ನೇ ಹಂತದಲ್ಲಿ ಸಂಸ್ಕರಿಸಿದ ನೀರು ಹರಿಯುತ್ತಿರುವುದು

   

ಬಾಗೇಪಲ್ಲಿ: ಹೆಬ್ಬಾಳ-ನಾಗವಾರದಿಂದ ಏತ ನೀರಾವರಿ ಮೂಲಕ ತಾಲ್ಲೂಕಿನ 24 ಗ್ರಾಮಗಳ ಕೆರೆಗಳಿಗೆ ನೀರು ಹರಿಸುವ ಯೋಜನೆಯಿಂದ ಕೆರೆಗಳಲ್ಲಿ ನೀರು ಸಂಗ್ರಹ ಆಗಿರುವುದರಿಂದ ಅಂತರ್ಜಲದ ಮಟ್ಟ ಹೆಚ್ಚಾಗಿದೆ.

ಈ ಹಿಂದೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಾಲ್ಲೂಕಿನ ಮಿಟ್ಟೇಮರಿ ಹೋಬಳಿಯ ಮಲ್ಲಿಗುರ್ಕಿ ಗ್ರಾಮದ ಕೆರೆಯ ಬಳಿ ಎಚ್.ಎನ್.ವ್ಯಾಲಿಯಿಂದ ಏತ ನೀರಾವರಿ ಕಾಮಗಾರಿಗೆ ಭೂಮಿ ಪೂಜೆ ಮಾಡಿದ್ದರು. ತಾಲ್ಲೂಕಿಗೆ ಹೆಬ್ಬಾಳ-ನಾಗವಾರ ವ್ಯಾಲಿಯಿಂದ ಕೆರೆಗಳಿಗೆ ನೀರು ಹರಿಸಬೇಕು, ಇಲ್ಲವಾದರೆ ರಾಜೀನಾಮೆ ನೀಡಲು ಸಿದ್ಧ ಎಂದು ಅಂದಿನ ಕುಮಾರಸ್ವಾಮಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು.

ADVERTISEMENT

ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ₹83 ಕೋಟಿ ಬಿಡುಗಡೆ ಮಾಡಿದ್ದರು. ಇದೀಗ ತಾಲ್ಲೂಕಿನ ಕಸಬಾ, ಮಿಟ್ಟೇಮರಿ ಹಾಗೂ ಗೂಳೂರಿನ 24 ಕೆರೆಗಳಿಗೆ ಎಚ್.ಎನ್.ವ್ಯಾಲಿಯಿಂದ 2ನೇ ಹಂತದಲ್ಲಿ ಸಂಸ್ಕರಿಸಿದ ನೀರು ಹರಿಸಲಾಗುತ್ತಿದೆ. 

ಕುಡಿಯಲು ಹಾಗೂ ಕೃಷಿ ಬಳಕೆಗೆ ಈ ನೀರನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೆರೆಗಳಿಗೆ ನೀರು ತುಂಬಿಸಿ, ಅಂತರ್ಜಲ ಮಟ್ಟ ಹೆಚ್ಚಿಸಲಾಗುತ್ತಿದೆ. ಇದರಿಂದ ತೆರೆದ, ಕೊಳವೆಬಾವಿಗಳಲ್ಲಿ ನೀರು ಸಂಗ್ರಹಕ್ಕೆ ಸಹಕಾರಿ ಆಗಲಿದೆ. 

ಯಾವ ಕೆರೆಗೆ ನೀರು: ತಾಲ್ಲೂಕಿನ ಕೊತ್ತಕೋಟೆ 1 ಮತ್ತು 2, ಕೋಡಿಪಲ್ಲಿ, ಮಲ್ಲಿಗುರ್ಕಿ, ಮೇರುವಪಲ್ಲಿ, ನಲ್ಲಮಲ್ಲೇಪಲ್ಲಿ 1 ಮತ್ತು 2, ಬೂರಗಮಡಗು ಕೆರೆ, ಆಚೇಪಲ್ಲಿ ಕೆರೆ, ಯಲ್ಲಂಪಲ್ಲಿ ಊರ ಮುಂದಿನ ಕೆರೆ, ಪಾಕಮಾಕಲಪಲ್ಲಿ, ಸಂಜೀವ ಕೆರೆ, ಕಾರಕೂರು ಕೆರೆ, ಮರವಪಲ್ಲಿ, ಮಲ್ಲಸಂದ್ರ, ಕೊಂಡಂವಾರಿಪಲ್ಲಿ, ತೀಮಾಕಲಪಲ್ಲಿ, ಬಾಲರೆಡ್ಡಿಪಲ್ಲಿ, ಸಿದ್ದನಪಲ್ಲಿ, ಚರ್ಲೋಪಲ್ಲಿ, ಮೊಟಕಪಲ್ಲಿ 1 ಮತ್ತು 2 ಹಾಗೂ ನಲ್ಲಪರೆಡ್ಡಿಪಲ್ಲಿಯ 24 ಕೆರೆಗಳಿಗೆ ನೀರು ಹರಿಸುವ ಯೋಜನೆ ಆಗಿದೆ.

ತಾಲ್ಲೂಕಿನಲ್ಲಿ ಈಗಾಗಲೇ 10 ಕೆರೆಗಳಿಗೆ ನೀರು ಹರಿದಿದೆ. ಉಳಿದ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಸಿದ್ಧತೆ ನಡೆದಿವೆ. ತಾಲ್ಲೂಕಿನ ಮಲ್ಲಿಗುರ್ಕಿ ಕೆರೆಯಲ್ಲಿ ನೀರು ತುಂಬಿದೆ. ಇದೀಗ ಆಚೇಪಲ್ಲಿ ಗ್ರಾಮದ ಕೆರೆಗೆ ಪೈಪ್‌ ಮೂಲಕ ನೀರು ಸರಬರಾಜು ಆಗುತ್ತಿದೆ. ಆಚೇಪಲ್ಲಿ ಗ್ರಾಮದ ಕೆರೆಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಮುಖಂಡರು ಭೇಟಿ ಮಾಡಿ ಪರಿಶೀಲನೆ ಮಾಡಿದರು. ತುಂಬಿದ ಹಾಗೂ ತುಂಬಬೇಕಾದ ಕೆರೆಗಳ ಮಾಹಿತಿಯನ್ನು ಅಧಿಕಾರಿಗಳಿಂದ ಸಂಗ್ರಹಿಸಿದರು.

ನೀರು ಹರಿಸುವ ಯೋಜನೆ ಪ್ರಗತಿಯಲ್ಲಿ ಇದೆ. ಈ ನೀರು ಅಂತರ್ಜಲ ಮಟ್ಟ ಏರಿಕೆ ಮಾತ್ರ ಬಳಕೆ ಆಗಲಿದೆ. ತೆರೆದಬಾವಿಗಳಲ್ಲಿ, ಕೊಳವೆಬಾವಿಗಳಲ್ಲಿ ನೀರಿನ ಸಂಗ್ರಹಣೆ ಆಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದ್ದು ಶುದ್ಧವಾದ ನೀರು ಸಿಗಲಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

3ನೇ ಹಂತದಲ್ಲಿ ನೀರು ಸಂಸ್ಕರಿಸಿ ಎಂದು ನೀರಾವರಿ ಹೋರಾಟಗಾರರ ಒತ್ತಾಯ ಇದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ, ‘ನಾನು ಸರ್ಕಾರಕ್ಕೆ ಒತ್ತಾಯ ಮಾಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನೀರಾವರಿ ಸಚಿವರ ಬಳಿ ಮತ್ತೊಮ್ಮೆ ಚರ್ಚೆ ಮಾಡುತ್ತೇನೆ. ಕೃಷ್ಣಾ ನದಿಯ ಪಾಲು ಹರಿಸುವ ಯೋಜನೆಯನ್ನು ಸರ್ಕಾರ ಮುಂದಾಗಬೇಕು. ಇದರಿಂದ ಬಯಲುಸೀಮೆ ತಾಲ್ಲೂಕುಗಳಲ್ಲಿ ಶುದ್ಧವಾದ ಕುಡಿಯುವ ನೀರು, ಕೃಷಿ, ತರಕಾರಿ ಬೆಳೆಯಬಹುದು. ಶಾಶ್ವತವಾದ ನೀರಿನಿಂದ ಸಣ್ಣ ಮತ್ತು ಬೃಹತ್ ಕೈಗಾರಿಕೆ ಆರಂಭವಾಗಲಿದೆ’ ಎಂದು ತಿಳಿಸಿದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೀರನ್ನು ಪರಿಶೀಲನೆ ಮಾಡುತ್ತಿರುವುದು. ಕೆಡಿಪಿ ಸದಸ್ಯ ಪಿ.ಮಂಜುನಾಥರೆಡ್ಡಿ ಇದ್ದರು