
ಗೌರಿಬಿದನೂರು: ಬೆಂಗಳೂರಿನಿಂದ ಹೈದರಾಬಾದ್‌ಗೆ ನಗರದ ಮೂಲಕ ಹಾದುಹೋಗುವ ರಾಜ್ಯ ಹೆದ್ದಾರಿ ನಿರ್ವಹಣೆ ಕೊರತೆಯಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತಿಪ್ಪಗಾನಹಳ್ಳಿ ಬಳಿ ಟೋಲ್ ನಿರ್ಮಾಣ ಮಾಡಿ, ದಿನಕ್ಕೆ ಕೋಟಿಗಟ್ಟಲೆ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಆದರೆ ಕಾಲಕಾಲಕ್ಕೆ ರಸ್ತೆ ನಿರ್ವಹಣೆ ಮಾತ್ರ ಸರಿಯಾಗಿ ಮಾಡುತ್ತಿಲ್ಲ ಎಂದು ವಾಹನ ಸವಾರರು ಆರೋಪಿಸುತ್ತಿದ್ದಾರೆ.
ನಗರದ ವೇಮನ ವೃತ್ತ, ಮಾದನಹಳ್ಳಿ, ಕಲ್ಲೂಡಿ ಸೇರಿದಂತೆ ಹಲವೆಡೆ ಗುಂಡಿಗಳು ಬಿದ್ದಿವೆ. ತೊಂಡೇಭಾವಿ, ತಾಲ್ಲೂಕು ಕಚೇರಿ ಮುಂಭಾಗ, ಆರ್‌ಎಂಸಿ ಮುಂಭಾಗ, ಪ್ರಶಾಂತ್ ನಗರ ಕಲ್ಲೂಡಿ, ಚಿಕ್ಕಕುರುಗೋಡು ಬಳಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಉಬ್ಬುಗಳ ಪಕ್ಕದಲ್ಲಿ ದೊಡ್ಡ ಗುಂಡಿಗಳು ಬಿದ್ದು ವಾಹನ ಸವಾರರು ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡು ಓಡಾಡುವಂತಾಗಿದೆ.
ಹೆಸರಿಗೆ ರಾಜ್ಯ ಹೆದ್ದಾರಿಯಾಗಿದ್ದರೂ ನಿರ್ವಹಣೆ ಕೊರತೆಯಿಂದ ರಸ್ತೆಯ ಮಧ್ಯದಲ್ಲಿ ಹಲವು ಗುಂಡಿಗಳು ಬಿದ್ದಿವೆ. ಇದರಿಂದ ವಾಹನ ಸವಾರರು ಸಂಚಾರ ಮಾಡುವಾಗ ಗುಂಡಿ ತಪ್ಪಿಸಲು ಹೋಗಿ ಅಪಘಾತ ಸಂಭವಿಸುತ್ತಿವೆ. ಮಾರ್ಗ ಮಧ್ಯದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಉಬ್ಬುಗಳು ವಾಹನ ಸವಾರರ ಪ್ರಾಣಕ್ಕೆ ಕಂಟಕವಾಗಿವೆ.
ಉಬ್ಬುಗಳಿಗೆ, ಕನಿಷ್ಠ ಬಣ್ಣ ಹಚ್ಚುವ ಗೋಜಿಗೆ ಸಂಬಂಧಪಟ್ಟ ಅಧಿಕಾರಿಗಳು ಹೋಗಿಲ್ಲ. ವಾಹನ ಸವಾರರಿಗೆ ಉಬ್ಬುಗಳು ಕಾಣಿಸದೆ ಅಪಘಾತವಾಗುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಉಬ್ಬುಗಳ ಬಳಿ ಲಾರಿಗಳಿಂದ ಜಲ್ಲಿಕಲ್ಲು, ಕಬ್ಬಿಣದ ಮೊಳೆ ಬೀಳುತ್ತಿವೆ. ಜೊತೆಗೆ ಉಬ್ಬುಗಳ ಪಕ್ಕದಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿರುವುದರಿಂದ ವಾಹನ ಸವಾರರ ಸುಗಮ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿದೆ. ಮಳೆಗಾಲದಲ್ಲಿ ಈ ಸಮಸ್ಯೆ ದುಪ್ಪಟ್ಟಾಗುತ್ತದೆ.
ರಸ್ತೆಬದಿ ಪ್ರಯಾಣಿಕರಿಗೋಸ್ಕರ ತಂಗುದಾಣಗಳನ್ನು ಸೂಕ್ತ ಸ್ಥಳಗಳಲ್ಲಿ ನಿರ್ಮಾಣ ಮಾಡದೆ ಇರುವುದರಿಂದ ಪ್ರಯಾಣಿಕರು ಇತ್ತ ಕಡೆ ಮುಖ ಮಾಡುತ್ತಿಲ್ಲ. ಇದರಿಂದ ತಂಗುದಾಣಗಳು ಪಾಳು ಬಿದ್ದು ಅನೈತಿಕ ಚಟುವಟಿಕೆಗಳ ತಾಣಗಳಾಗಿ ಬದಲಾಗುತ್ತಿವೆ.
ಅಧಿಕಾರಿಗಳು ಇವುಗಳ ನಿರ್ವಹಣೆ ಮಾಡುವ ಆಸಕ್ತಿ ತೋರುತ್ತಿಲ್ಲ. ಹೆದ್ದಾರಿ ಬಳಿ ನಿರ್ಮಾಣ ಮಾಡಿರುವ ಪಾದಚಾರಿ ರಸ್ತೆ ಸಹ ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ಹಲವೆಡೆ ಒತ್ತುವರಿಯಾಗಿದೆ. ಈ ಬಗ್ಗೆ ವಾಹನ ಸವಾರರು ಸಮಸ್ಯೆ ಪರಿಹಾರಕ್ಕಾಗಿ ಹೆದ್ದಾರಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟೋಲ್ ವ್ಯವಸ್ಥಾಪಕ ರವಿ ಬಾಬುಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.