ಚಿಕ್ಕಬಳ್ಳಾಪುರ: ನನ್ನ ಮತಕ್ಷೇತ್ರ ಚಿಕ್ಕಬಳ್ಳಾಪುರ ಹಾಗೂ ಸುತ್ತಮುತ್ತಲಿನ ಭಾಗಕ್ಕೆ ಎಚ್.ಎನ್.ವ್ಯಾಲಿ, ಕೆ.ಸಿ.ವ್ಯಾಲಿ ಮೂಲಕ ನೀರು ನೀಡುತ್ತಿದ್ದರೂ, ಅದು ಸಂಪೂರ್ಣ ಶುದ್ಧವಾದ ನೀರಲ್ಲ. ಇದರಿಂದ ಜನರಿಗೆ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಬರುತ್ತಿವೆ. ಮಾಲಿನ್ಯ ನಿಯಂತ್ರಣ ಮಂಡಳಿ ಈ ನೀರನ್ನು ಪರೀಕ್ಷಿಸಿ ಗುಣಮಟ್ಟದ ಬಗ್ಗೆ ಖಾತರಿ ನೀಡಿಲ್ಲ. ಇದರಿಂದಾಗಿ ಜನರು ಅನಿವಾರ್ಯವಾಗಿ ಬೋರ್‌ವೆಲ್ ನೀರು ಅವಲಂಬಿಸಿದ್ದು, ಇದು ಇನ್ನಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ.
–ಇದು ಸಂಸದ ಡಾ.ಕೆ.ಸುಧಾಕರ್, ಕೇಂದ್ರ ಜಲಸಂಪನ್ಮೂಲ ಸಚಿವ ಸಿ.ಆರ್.ಪಾಟೀಲ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಕೋರಿದ ವೇಳೆ ನೀಡಿದ ಮನವಿ ಪತ್ರ. ಸಂಸದರ ಮಾಧ್ಯಮ ಪ್ರತಿನಿಧಿ ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಿದ್ದಾರೆ.
ಈ ಹಿಂದೆ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಎಚ್.ಎನ್.ವ್ಯಾಲಿ ನೀರಾವರಿ ಯೋಜನೆಯು ತಮ್ಮದೇ ಕೊಡುಗೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿದೆ. ಕೊಳವೆ ಬಾವಿಗಳಲ್ಲಿ ಸಮೃದ್ಧವಾಗಿ ನೀರು ದೊರೆಯುತ್ತಿದೆ ಎಂದು ಎಚ್.ಎನ್.ವ್ಯಾಲಿ ನೀರಾವರಿ ಯೋಜನೆಯ ಕ್ರೆಡಿಟ್ ತಮ್ಮದು ಎನ್ನುತ್ತಿದ್ದರು. ಆದರೆ ಈಗ ಎಚ್.ಎನ್.ವ್ಯಾಲಿ, ಕೆ.ಸಿ.ವ್ಯಾಲಿ ನೀರು ಸಂಪೂರ್ಣ ಶುದ್ಧವಲ್ಲ. ಕ್ಯಾನ್ಸರ್‌ನಂತಹ ಮಾರಕ ರೋಗಗಳು ಬರುತ್ತಿವೆ ಎನ್ನುತ್ತಿದ್ದಾರೆ.
ಅಲ್ಲದೆ ಕೆ.ಸಿ.ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ವಿಚಾರವಾಗಿ ಹೋರಾಟ ನಡೆಸಿದ್ದವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಆದರೆ ಈಗ ಡಾ.ಕೆ.ಸುಧಾಕರ್ ನೀರಾವರಿ ಹೋರಾಟಗಾರರ ಮಾತುಗಳನ್ನು ಅನುಮೋದಿಸಿದಂತೆ ಈ ನೀರಿನಿಂದ ಅನಾರೋಗ್ಯ ಎನ್ನುತ್ತಿದ್ದಾರೆ.
ಹೀಗೆ ಅಂದು ಪ್ರಶಂಸೆಯ ಕ್ರೆಡಿಟ್ ಪಡೆದ ಸುಧಾಕರ್, ಈಗ ಇದೇ ಯೋಜನೆಯಿಂದ ಅನಾರೋಗ್ಯ ಎನ್ನುತ್ತಿದ್ದಾರೆ. ಇದು ಜಿಲ್ಲೆಯ ನೀರಾವರಿ ಹೋರಾಟಗಾರರು ಮತ್ತು ನಾಗರಿಕರಲ್ಲಿ ಚರ್ಚೆಗೆ ಕಾರಣವಾಗಿದೆ.
ಭೂಮಿಪೂಜೆ ದಿನ ಶಾಸಕರ ಮಾತು: 2017ರ ಸೆ.18ರಂದು ಎಚ್.ಎನ್.ವ್ಯಾಲಿ ನೀರಾವರಿ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಭೂಮಿಪೂಜೆ ನೆರವೇರಿಸಿದ್ದರು.
ಆಗ ಸಂದರ್ಭದಲ್ಲಿ ಶಾಸಕ ಡಾ.ಕೆ.ಸುಧಾಕರ್, ‘ಇದು ಐತಿಹಾಸಿಕ ಕಾರ್ಯಕ್ರಮ. ಆದರೆ ಈ ನೀರಾವರಿ ಯೋಜನೆ ಬೇಡ ಎಂದು ಕೆಲವರು ಟೀಕೆ, ಪ್ರತಿಭಟನೆ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಹಿಂದೆ ಅಧಿಕಾರದಲ್ಲಿದ್ದವರು ನೀರಾವರಿ ಯೋಜನೆಗಳಿಗೆ ಒಂದೇ ಒಂದು ನಯಾ ಪೈಸೆ ತರುವ ಪ್ರಯತ್ನ ಮಾಡಿಲ್ಲ. ಆದರೆ ಇವತ್ತು ಅವರು ಯಾಕೆ ವಿರೋಧ ಮಾಡುತ್ತಿದ್ದಾರೆ? ಕಳೆದ ನಾಲ್ಕೂವರೆ ವರ್ಷದಲ್ಲಿ ಎರಡು ಬೃಹತ್ ನೀರಾವರಿ ಯೋಜನೆಗಳನ್ನು ನಾವು ಅನುಷ್ಠಾನಕ್ಕೆ ತಂದಿದ್ದೇವೆ. ಅದಕ್ಕೆ ಇವರಿಗೆ ಹೊಟ್ಟೆಕಿಚ್ಚಾ’ ಎಂದು ಪ್ರಶ್ನಿಸಿದ್ದರು.
ಸಿ.ಎಂ ಪ್ರಶಂಸೆ: ಎಚ್.ಎನ್.ವ್ಯಾಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಪಾತಾಳಕ್ಕೆ ಕುಸಿದ ಜಿಲ್ಲೆಯ ಅಂತರ್ಜಲ ವೃದ್ಧಿಸಲು ನಾವು ಕೊಳಚೆ ನೀರು ಸಂಸ್ಕರಿಸಿ ಕೆರೆಗಳನ್ನು ತುಂಬಿಸಲು ಹೊರಟರೆ ಕೆಲ ಅಭಿವೃದ್ಧಿ ವಿರೋಧಿಗಳು ಈ ನೀರು ಹಾನಿಕಾರಕ, ಇದರಿಂದ ಆರೋಗ್ಯಕ್ಕೆ ತೊಂದರೆ ಆಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅಧಿಕಾರವಿದ್ದಾಗ ಇಂತಹ ಜನಪರ ಚಿಂತನೆ ಮಾಡದಿದ್ದವರು ಇವತ್ತು ಹೊಟ್ಟೆಕಿಚ್ಚಿನಿಂದ ಅಪಪ್ರಚಾರ ಮಾಡುತ್ತಿದ್ದಾಯೇ ವಿನಾ ಅದರಲ್ಲಿ ಸತ್ಯಾಂಶವಿಲ್ಲ’ ಎಂದಿದ್ದರು.
ಎಚ್.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ನೀರು ಶುದ್ಧವಿಲ್ಲ. ಬೆಂಗಳೂರಿನ ಈ ಕೊಳಚೆ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಿ ಕೆರೆಗಳಿಗೆ ಹರಿಸಬೇಕು. ಮೂರು ಹಂತದಲ್ಲಿ ನೀರು ಶುದ್ಧೀಕರಿಸದಿದ್ದರೆ ಭವಿಷ್ಯದಲ್ಲಿ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಆಪತ್ತು ಎಂದು ಅವಳಿ ಜಿಲ್ಲೆಯ ನೀರಾವರಿ ಹೋರಾಟಗಾರರು, ರೈತ ಸಂಘದ ಮುಖಂಡರು ಯೋಜನೆ ಆರಂಭದಿಂದ ಇಂದಿನವರೆಗೂ ಹೇಳುತ್ತಿದ್ದಾರೆ. ಮೂರು ಹಂತದಲ್ಲಿ ನೀರು ಶುದ್ಧೀಕರಿಸಬೇಕು ಎಂದು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಇಂದಿಗೂ ಅವರ ಕೂಗು ಸರ್ಕಾರವನ್ನು ಮುಟ್ಟಿಲ್ಲ.
ಡಾ.ಕೆ.ಸುಧಾಕರ್ ಅವರು ಕೇಂದ್ರ ಸರ್ಕಾರದ ಮಟ್ಟದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿರುವುದು ಆಶಾದಾಯಕ ಬೆಳವಣಿಗೆ ಎನ್ನುತ್ತಾರೆ ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟಗಾರರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ವೇಳೆ ಮಂಡಿಸಿದ ತಮ್ಮ ಕೊನೆಯ ಬಜೆಟ್‌ನಲ್ಲಿ ಎರಡು ಹಂತದಲ್ಲಿ ಶುದ್ಧೀಕರಣವಾಗುತ್ತಿರುವ ಕೊಳಚೆ ನೀರನ್ನು ಮೂರು ಹಂತದಲ್ಲಿ ಸಂಸ್ಕರಿಸುವುದಾಗಿ ಘೋಷಿಸಿದ್ದರು. ಅಷ್ಟರಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು.
ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ಹರಿಸಿದ ವೇಳೆ ಅಂದಿನ ಸಚಿವರು ಶಾಸಕರು ಎರಡು ಹಂತದಲ್ಲಿ ಶುದ್ಧೀಕರಿಸಿದ ಕೊಳಚೆ ನೀರು ಕುಡಿದಿದ್ದರು. ಈ ನೀರಿನಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಭರವಸೆ ಮೂಡಿಸಲು ಯತ್ನಿಸಿದ್ದರು. ಯೋಜನೆ ಜಾರಿ ತಮ್ಮದು ಎನ್ನುವ ಕ್ರೆಡಿಟ್ ಪಡೆದಿದ್ದರು.
ಡಾ.ಕೆ.ಸುಧಾಕರ್ ಈ ಹಿಂದೆ ರಾಜ್ಯದಲ್ಲಿ ಪ್ರಭಾವಿ ಸಚಿವರಾಗಿದ್ದರು. ಆಗ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ತಂದು ಮೂರು ಹಂತದ ಶುದ್ಧೀಕರಣಕ್ಕೆ ಮನಸ್ಸು ಮಾಡಬಹುದಿತ್ತು. ಶುದ್ಧೀಕರಣ ಘಟಕಗಳ ಉನ್ನತಿಗೆ ಅನುದಾನ ದೊರಕಿಸಿಕೊಡಬಹುದಿತ್ತು. ಆದರೆ ಆ ಕೆಲಸ ಮಾಡಲಿಲ್ಲ. ಈಗ ಎಚ್.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ನೀರಿನ ಪರಿಣಾಮಗಳ ಬಗ್ಗೆ ಜ್ಞಾನೋದಯವಾಗಿದೆ. ಇದು ಅವಳಿ ಜಿಲ್ಲೆಗಳ ಜನರಿಗೆ ಒಳಿತು’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ತಿಳಿಸಿದರು.
ಕೊಳಚೆ ನೀರಿನ ವಿರುದ್ಧ ಹೋರಾಟಗಾರರು ಕಾನೂನು ಹೋರಾಟ ಸಹ ಮಾಡಲು ಮುಂದಾಗಿದ್ದರು. ಆಗ ಒಮ್ಮೆಯಾದರೂ ಕರೆದು ಸಮಸ್ಯೆಗಳ ಬಗ್ಗೆ ತಿಳಿಯಬಹುದಿತ್ತು. ಆದರೆ ಹೋರಾಟಗಾರರ ತೇಜೋವಧೆ ಮಾಡುವ ಕೆಲಸವನ್ನು ಸುಧಾಕರ್ ಮಾಡಿದರು ಎಂದು ಹೇಳಿದರು. ಈಗ ಅವರಿಗೆ ಜ್ಞಾನೋದಯವಾಗಿರುವುದು ಅವಳಿ ಜಿಲ್ಲೆಯ ಜನರ ಪಾಲಿಗೆ ಆಶಾದಾಯಕ ಬೆಳವಣಿಗೆ. ವೈಜ್ಞಾನಿಕ ಅಂಕಿ ಅಂಶಗಳು ಕೇಂದ್ರ ಸರ್ಕಾರದ ಸಂಸ್ಥೆಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಮೂರು ಹಂತದಲ್ಲಿ ಶುದ್ಧೀಕರಣಕ್ಕೆ ಮುಂದಾಗಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.