ADVERTISEMENT

ಹಾಸ್ಟೆಲ್‌ನಲ್ಲಿ ಮದ್ಯಪಾನ; ಅಡುಗೆ ಸಿಬ್ಬಂದಿ ಅಮಾನತು

ಚಾಕವೇಲು ಗ್ರಾಮದ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:00 IST
Last Updated 29 ಜನವರಿ 2026, 6:00 IST
ಚಾಕವೇಲು ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ಸರ್ಕಾರಿ ವಿದ್ಯಾರ್ಥಿ ನಿಲಯಕ್ಕೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ತೇಜಾನಂದ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು 
ಚಾಕವೇಲು ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ಸರ್ಕಾರಿ ವಿದ್ಯಾರ್ಥಿ ನಿಲಯಕ್ಕೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ತೇಜಾನಂದ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು    

ಚೇಳೂರು: ತಾಲ್ಲೂಕಿನ ಚಾಕವೇಲು ಗ್ರಾಮದ ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ಮದ್ಯಪಾನ ಮಾಡಿ ಹಾಡು ಹಾಕಿ ನೃತ್ಯ ಮಾಡಿದ ಅಡುಗೆ ಸಿಬ್ಬಂದಿ ಸರೋಜಮ್ಮ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

ಅಡುಗೆ ಸಿಬ್ಬಂದಿ ಸರೋಜಮ್ಮ ವಸತಿ ನಿಲಯದೊಳಗೆ ಮದ್ಯಪಾನ ಮಾಡಿ, ಹಾಡು ಹಾಕಿ ನೃತ್ಯ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. 

ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ತೇಜಾನಂದರೆಡ್ಡಿ, ಸರೋಜಮ್ಮ ಮದ್ಯಪಾನ ಮಾಡಿ ಶಿಸ್ತು ಉಲ್ಲಂಘಿಸಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿದೆ. ಇಂತಹ ಕೃತ್ಯವನ್ನು ಇಲಾಖೆ ಸಹಿಸುವುದಿಲ್ಲ. ಕೂಡಲೇ ಇವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ತೇಜಾನಂದ ರೆಡ್ಡಿ ವಸತಿ ನಿಲಯಕ್ಕೆ ಭೇಟಿ ನೀಡಿದ ವೇಳೆ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಮಂಜುಳಾ, ವ್ಯವಸ್ಥಾಪಕ ನಾಗರಾಜು ಹಾಗೂ ವಸತಿ ನಿಲಯದ ಮೇಲ್ವಿಚಾರಕಿ ಸರಸ್ವತಮ್ಮ ಉಪಸ್ಥಿತರಿದ್ದರು.

ಘಟನೆಯ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳದ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

ವಸತಿ ನಿಲಯದಲ್ಲಿ ಇಷ್ಟೆಲ್ಲಾ ಅನಾಚಾರ ನಡೆಯುತ್ತಿದ್ದರೂ ಅಧಿಕಾರಿಗಳು ಸುಮ್ಮನೆ ಇದ್ದಾರೆ. ಸರಿಯಾದ ರೀತಿಯಲ್ಲಿ ಮೇಲ್ವಿಚಾರಣೆ ನಡೆಸಿ ಅಧಿಕಾರಿಗಳ ಮೇಲೆಯೇ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಸರೋಜಮ್ಮ ಅವರ ಈ ರೀತಿಯ ಕೃತ್ಯಗಳು ಹೊಸದಲ್ಲ. ಈ ಮೊದಲು ಕಾರ್ಯ ನಿರ್ವಹಿಸಿದ ನಲ್ಲಗುಟ್ಲಪಲ್ಲಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಕೂಡಾ ಅಮಾನತಾಗಿದ್ದರು. ಇಲ್ಲಿನ ಹಾಸ್ಟೆಲ್‌ಗೆ ವರ್ಗಾವಣೆಯಾಗಿ ಬಂದಿದ್ದರು. ಇಲ್ಲಿ ಕೂಡಾ ಅವರ ಕೃತ್ಯಗಳು ಮುಂದುವರಿದಿವೆ. ಇಂತಹವರನ್ನು ಕೇವಲ ಅಮಾನತು ಮಾಡುವುದು ಮಾತ್ರವಲ್ಲದೆ ವಸತಿ ನಿಲಯದಲ್ಲಿ ಕಾರ್ಯ ನಿರ್ವಹಿಸದ ರೀತಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಪ್ರಕಾಶ್ ವಿ. ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.