ಶಿಡ್ಲಘಟ್ಟ: ತಾಲ್ಲೂಕಿನ ಮಿತ್ತನಹಳ್ಳಿ ಗ್ರಾಮದಲ್ಲಿ ಕ್ರಿ.ಶ 1338ರ ಕಾಲದ ಹೊಯ್ಸಳರ ದೊರೆ ವೀರಬಲ್ಲಾಳನ ಆಳ್ವಿಕೆಗೆ ಸಂಬಂಧಿಸಿದ ಶಾಸನವನ್ನು ಶಾಸನ ತಜ್ಞ ಕೆ.ಧನಪಾಲ್, ಅಪ್ಪೆಗೌಡನಹಳ್ಳಿಯ ತ್ಯಾಗರಾಜ್, ಡಿ.ಎನ್.ಸುದರ್ಶನರೆಡ್ಡಿ, ಚಂದ್ರಶೇಖರ್ ಅವರ ತಂಡ ಭಾನುವಾರ ಪತ್ತೆಹಚ್ಚಿದೆ.
ಐದು ಅಡಿ ಎತ್ತರ, ಎರಡುವರೆ ಅಡಿ ಅಗಲವಿರುವ ಚಪ್ಪಡಿ ಕಲ್ಲಿನ ಮೇಲೆ ಕನ್ನಡ ಭಾಷೆ ಹಾಗೂ ಕನ್ನಡ ಲಿಪಿಯಲ್ಲಿ ಒಂದು ಬದಿಯಲ್ಲಿ ಶಾಸನವನ್ನು ಕೆತ್ತಿದ್ದರೆ ಮತ್ತೊಂದು ಬದಿಯಲ್ಲಿ ಸೂರ್ಯ, ಚಂದ್ರ ಮತ್ತು ನಂದಿಯ ಚಿತ್ರಗಳಿವೆ. ನಂದಿಯ ಚಿತ್ರವು ಇದು ದಾನಶಾಸನವೆಂಬುದನ್ನು ಸೂಚಿಸುತ್ತದೆ.
ಮಹಾಸಾಮಂತಾಧಿಪತಿ ಮಂಜಯ್ಯನಾಯಕನ ಪ್ರಸ್ತಾಪ ಈ ಶಾಸನದಲ್ಲಿ ಇರುವುದರಿಂದ ಇದಕ್ಕೆ ಬಹಳ ಮಹತ್ವ ಇದೆ. ಆ ಸಮಯದಲ್ಲಿ ಇದು ನಿಗಿರಿಲಿ ಚೋಳ ಮಂಡಲಕ್ಕೆ ಸೇರಿದ ಅಂಬಡಕ್ಕಿನಾಡು ಆಗಿತ್ತು. ಮಂಜಯ್ಯನಾಯಕ ಹೊಯ್ಸಳ ರಾಮನಾಥನ ಮಗನಾಗಿದ್ದು ರಾಮನಾಥನ ನಂತರ ವೀರಬಲ್ಲಾಳನ ಕಾಲದಲ್ಲಿಯೂ ಅಂಬಡಕ್ಕಿ ನಾಡಿನ ರಾಜ್ಯಪಾಲನಾಗಿ ಮುಂದುವರೆದಿದ್ದಾನೆ. ಅದೂ ಅಲ್ಲದೆ ಈತನ ವಂಶಿಕರಾದ ತಮ್ಮಯ್ಯನಾಯಕ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿಯೂ ಅದೇ ಹುದ್ದೆಯಲ್ಲಿ ಮುಂದುವರಿಯುತ್ತಾರೆ.
ಹೊಯ್ಸಳ ಸಾಮ್ರಾಜ್ಯದ ಕಡೆಯ ಸಾಮ್ರಾಟ ಮೂರನೇ ವೀರಬಲ್ಲಾಳದೇವನು ಮುಸಲ್ಮಾನ ದಾಳಿಕೋರರ ದಾಳಿಗಳನ್ನು ಹಿಮ್ಮೆಟ್ಟಿಸುತ್ತಾ ತಿರುವಣ್ಣಾಮಲೆ ಪಟ್ಟಣದಲ್ಲಿ ಇದ್ದುಕೊಂಡು ಹಿಂದೂ ಸಾಮ್ರಾಜ್ಯದ ಪುನಃ ಸ್ಥಾಪನೆಯ ಪ್ರಯತ್ನದಲ್ಲಿ ಇರುತ್ತಾನೆ. ಆ ಸಮಯದಲ್ಲಿ ಆತ ರಾಜ್ಯದ ಅಭಿವೃದ್ಧಿ ನೋಡಿಕೊಳ್ಳಲು ಹಲವು ಪ್ರಾಂತ್ಯಗಳಿಗೆ ಹಲವು ದಂಡನಾಯಕರನ್ನು ನೇಮಿಸಿರುತ್ತಾನೆ. ಆರೀತಿಯಲ್ಲಿ ಈ ಪ್ರಾಂತ್ಯವು ಮಹಾಸಾಮಂತಾಧಿಪತಿ ಮಂಜಯ್ಯನಾಯಕನ ಮಗ ಸೊಣ್ಣಯ್ಯ ನಾಯಕನ ಅಧೀನದಲ್ಲಿ ಇರುತ್ತದೆ. ಆಗ ಹಡಪದ ಮಾಚಯ್ಯ ಎಂಬ ಶೈವಗುರುವಿಗೆ ಮೂರು ಊರುಗಳನ್ನು ಕೊಡುಗೆಯಾಗಿ ಕೊಟ್ಟ ವಿವರಗಳು ಈ ಶಾಸನದಲ್ಲಿ ಇವೆ.
ಹೊಯ್ಸಳ ಮೂರನೇ ವೀರಬಲ್ಲಾಳನ ಆಳ್ವಿಕೆ ಮಾಡುತ್ತಿದ್ದ ಸಮಯದಲ್ಲಿ ಮಹಾಸಾಮಂತಾಧಿಪತಿಯಾದ ಮಂಚೇಯ ನಾಯಕನ ಮಗ ಸೊಣ್ಣೆಯನಾಯಕನು ಹಡಪದ ಮಂಚಣ್ಣನಿಗೆ ಮಂಚೇನಹಳ್ಳಿಯಲ್ಲಿ ಗದ್ದೆಯನ್ನು, ವಡಿಗೆಹಳ್ಳಿ ಗ್ರಾಮವನ್ನು, ಕೋನಘಟ್ಟದ ಬೆದ್ದಲು ಜಮೀನು ಹಾಗೂ ಸುಗಟೂರ ಹಿರಿಯ ಕೆರೆಯ ಬಳಿ ಎರಡು ಸಲಗೆ ಗದ್ದೆಯನ್ನು ದಾನವಾಗಿ ನೀಡಲಾಗಿರುವ ವಿಚಾರವನ್ನು ತಿಳಿಸಿ ಈ ದಾನವನ್ನು ಹಾಳು ಮಾಡಿದವರು ಗಂಗಾ ನದಿ ದಡದಲ್ಲಿ ಹಸುವನ್ನು ಕೊಂದ ಪಾಪಕ್ಕೆ ಹೋಗುವರು ಎಂಬ ಶಾಪಾಶಯವನ್ನು ಬರೆಯಲಾಗಿದೆ.
ಈ ಅಪ್ರಕಟಿತ ಶಾಸನದಲ್ಲಿ ವಿಶೇಷವಾಗಿ ಸುಗಟೂರು, ವಡಿಗೇಹಳ್ಳಿ (ದೇವನಹಳ್ಳಿ ತಾಲ್ಲೂಕಿನ ವಿಜಯಪುರ), ಮಂಚೇನಹಳ್ಳಿ, ಕೋನಘಟ್ಟ ಈ ಊರುಗಳನ್ನು ಉಲ್ಲೇಖಿಸುತ್ತಿದ್ದು ಇವೆಲ್ಲವೂ ಐತಿಹಾಸಿಕ ಗ್ರಾಮಗಳೆಂದು ಗುರುತಿಸಬಹುದಾಗಿದೆ.
ಶಾಸನ ಅಧ್ಯಯನ ಮಾಡಲು ಶಾಸನ ತಜ್ಞ ಕೆ.ಆರ್ ನರಸಿಂಹನ್ ಹಾಗೂ ಮಿತ್ತನಹಳ್ಳಿಯ ಎಸ್.ಎನ್ ಶಂಕರಪ್ಪ, ಎನ್ ದೀಪಕ್ ಸಹಕಾರ ನೀಡಿದ್ದಾರೆ ಎಂದು ಶಾಸನತಜ್ಞ ಧನಪಾಲ್ ತಿಳಿಸಿದರು.
ಇದುವರೆಗೂ ಎಪಿಗ್ರಫಿ ಕರ್ನಾಟಕದಲ್ಲಿ ಹಾಗೂ ಇತರ ಶಾಸನಾಧ್ಯಯನಗಳಲ್ಲಿ ದಾಖಲಾಗದ ಶಾಸನವನ್ನು ಹುಡುಕಿರುವ ಈ ತಂಡ ಇತಿಹಾಸದ ರಚನೆಯಲ್ಲಿ ನೆರವಾಗುವ ಈ ಐತಿಹಾಸಿಕ ದಾಖಲೆಗಳಿರುವ ಶಿಲೆಯನ್ನು ಸಂರಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.