ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ದಿಢೀರ್ ರಾಜೀನಾಮೆ

ಜಿಲ್ಲಾ ಪಂಚಾಯಿತಿಯಲ್ಲಿ ಅನರ್ಹ ಶಾಸಕ ಸುಧಾಕರ್ ಅವರ ಬೆಂಬಲಿಗರಿಗೆ ಮಣೆ ಹಾಕಿ, ಕಟ್ಟಿ ಹಾಕುವ ತಂತ್ರಗಾರಿಕೆ?

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 10:42 IST
Last Updated 23 ಸೆಪ್ಟೆಂಬರ್ 2019, 10:42 IST
ಎಚ್.ವಿ.ಮಂಜುನಾಥ್‌
ಎಚ್.ವಿ.ಮಂಜುನಾಥ್‌   

ಚಿಕ್ಕಬಳ್ಳಾಪುರ:ದಿಢೀರ್ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ ಪಕ್ಷದ ವರಿಷ್ಠರ ಸೂಚನೆ ಮೆರೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್‌ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಈ ಬೆಳವಣಿಗೆಯನ್ನು ಕ್ಷೇತ್ರದಲ್ಲಿ ಈಗ, ‘ಅನರ್ಹ ಶಾಸಕ ಸುಧಾಕರ್ ಅವರ ಬೆಂಬಲಿಗರಿಗೆ ಜಿಲ್ಲಾ ಪಂಚಾಯಿತಿಯಲ್ಲಿ ಮಣೆ ಹಾಕುವ ಮೂಲಕ, ಉಪ ಚುನಾವಣೆಯಲ್ಲಿ ಸುಧಾಕರ್ ಅವರ ಶಕ್ತಿ ಕುಂದಿಸುವ ತಂತ್ರಗಾರಿಕೆ ಇದು’ ಎಂದೇ ವಿಶ್ಲೇಷಿಸಲಾಗುತ್ತಿದೆ.

ಎರಡನೇ ಬಾರಿ ರಾಜೀನಾಮೆ

ಶಾಸಕ (ಈಗ ಅನರ್ಹ ಶಾಸಕ) ಸುಧಾಕರ್ ಅವರ ಬೆಂಬಲಿಗ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ನಿಟ್ಟಿನಲ್ಲಿ ಲೋಕಸಭೆ ಚುನಾವಣೆ ಪೂರ್ವದಲ್ಲಿ ಆದ ಒಪ್ಪದದಂತೆ ಪಕ್ಷದ ವರಿಷ್ಠರ ಸೂಚನೆಯಂತೆ ಮಂಜುನಾಥ್ ಅವರು ಕಳೆದ ಜೂನ್ 26 ರಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಅವರ ಬೆನ್ನಲ್ಲೇ ಉಪಾಧ್ಯಕ್ಷೆ ನಿರ್ಮಲಾ ಅವರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಮಂಜುನಾಥ್‌ ಅವರ ರಾಜೀನಾಮೆ ಕಾನೂನು ಬದ್ಧವಾಗಿ ಅಂಗೀಕಾರಗೊಳ್ಳಲು ಜುಲೈ 11 ಕೊನೆಯ ದಿನವಾಗಿತ್ತು. ಆ ನಡುವೆ ಅಧ್ಯಕ್ಷರ ಹುದ್ದೆಗಾಗಿ ಕೆಲ ಸದಸ್ಯರ ನಡುವೆ ಪೈಪೋಟಿ ಸಹ ನಡೆದಿತ್ತು. ಆದರೆ, ಕ್ಷೀಪ್ರ ರಾಜಕೀಯ ಬೆಳವಣಿಗೆ ನಡುವೆ ಸುಧಾಕರ್ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ ಎಂಬ ಸುಳಿವು ಸಿಗುತ್ತಿದ್ದಂತೆ ಜುಲೈ 9 ರಂದು ಪಕ್ಷದ ವರಿಷ್ಠರ ಸೂಚನೆ ಮೆರೆಗೆ ಅಧ್ಯಕ್ಷ, ಉಪಾಧ್ಯಕ್ಷೆ ಇಬ್ಬರೂ ರಾಜೀನಾಮೆ ಹಿಂಪಡೆದಿದ್ದರು.

ಅಧ್ಯಕ್ಷ ಹುದ್ದೆಯಲ್ಲಿ ಪುನಃ ಎರಡೂವರೆ ತಿಂಗಳು ಮುಂದುವರಿದ ಮಂಜುನಾಥ್‌ ಅವರಿಗೆ ಭಾನುವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ನೀಡುವಂತೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ. ಅನರ್ಹ ಶಾಸಕ ಸುಧಾಕರ್ ಅವರ ಬಣ ತೊರೆದು, ಕಾಂಗ್ರೆಸ್‌ನಲ್ಲಿಯೇ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಕ್ಷೇತ್ರದ ಪಿ.ಎನ್.ಪ್ರಕಾಶ್ ಅವರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹುದ್ದೆ ನೀಡಲು ಕಾಂಗ್ರೆಸ್‌ ವರಿಷ್ಠರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಮಂಜುನಾಥ್ ಅವರನ್ನು ವಿಚಾರಿಸಿದರೆ, ‘ನಾನೊಬ್ಬ ಕಾಂಗ್ರೆಸ್‌ ಕಟ್ಟಾಳು. ವರಿಷ್ಠರು ಹೇಳುವ ಆದೇಶವನ್ನು ಶಿರಸಾವಹಿಸಿ ಪಾಲಿಸುತ್ತೇನೆ. ನನ್ನ ಅವಧಿಯಲ್ಲಿ ಅಧ್ಯಕ್ಷ ಸ್ಥಾನದಿಂದ ನಿರ್ವಹಿಸಬೇಕಾದ ಕರ್ತವ್ಯವನ್ನು ಆತ್ಮಸಾಕ್ಷಿಗೆ ಅನುಗುಣವಾಗಿ ನಿರ್ವಹಿಸಿದ್ದೇನೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು’ ಎಂದಷ್ಟೇ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.