
ಚಿಕ್ಕಬಳ್ಳಾಪುರ: ‘ನಮ್ಮ ಕೆರೆಯಲ್ಲಿ ಎರಡು ಮೂರು ತಿಂಗಳಿನಿಂದ ಮಣ್ಣು ತೆಗೆಯುತ್ತಿದ್ದಾರೆ. ಎಲ್ಲರಿಗೂ ಇದು ಗೊತ್ತು. ಎರಡು ಮೂರು ದಿನ ಮಣ್ಣು ತೆಗೆಯಲು ಅನುಮತಿ ಪಡೆದು ಹೆಚ್ಚು ದಿನ ಮಣ್ಣು ತೆಗೆಯುವರು’–ಇದು ಚಿಕ್ಕಕಾಡಿಗೇನಹಳ್ಳಿಯ ನಿವಾಸಿಯೊಬ್ಬರ ಮಾತು.
ತಾಲ್ಲೂಕಿನ ಚಿಕ್ಕಕಾಡಿಗೇನಹಳ್ಳಿ ಕೆರೆಯಲ್ಲಿ ಅವ್ಯಾಹತವಾಗಿ ಮಣ್ಣು ತೆಗೆಯಲಾಗಿದೆ. ಅಲ್ಲದೆ ಈ ಕೆರೆಯಲ್ಲಿನ ಮಣ್ಣು ತೆಗೆದಿರುವುದನ್ನು ಗಮನಿಸಿದರೆ ಇಲ್ಲಿ ಯಾವುದೇ ನಿಯಮಗಳು ಅನ್ವಯಿಸಿಲ್ಲ. ವೈಜ್ಞಾನಿಕವಾಗಿ ಮಣ್ಣು ತೆಗೆದಿಲ್ಲ ಎನ್ನುವುದು ಎದ್ದು ಕಾಣುತ್ತದೆ. ಹಲವು ದಿನಗಳಿಂದ ಮಣ್ಣಿಗೆ ಕನ್ನ ಹಾಕುವ ಕೆಲಸ ನಡೆದಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಿಪ್ತವಾಗಿರುವುದು ನಾನಾ ಅನುಮಾನಗಳಿಗೂ ಕಾರಣವಾಗಿದೆ.
ಅನುಮತಿಯ ರಹದಾರಿ: ಜಿಲ್ಲಾ ಪಂಚಾಯಿತಿ ಮತ್ತು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಕೆರೆಗಳು ಒಳಪಡುತ್ತವೆ. ಹೀಗೆ ಮಣ್ಣಿಗೆ ಕನ್ನ ಚಿಕ್ಕಕಾಡಿಗೇನಹಳ್ಳಿ ಕೆರೆಯ ಒಂದೇ ಕಥೆಯಲ್ಲ. ಚಿಕ್ಕಬಳ್ಳಾಪುರ ತಾಲ್ಲೂಕು ಸೇರಿದಂತೆ ಜಿಲ್ಲೆಯ ಹಲವು ಕೆರೆಗಳಲ್ಲಿ ಅವ್ಯಾಹತವಾಗಿ ಮಣ್ಣು ತೆಗೆಯಲಾಗುತ್ತಿದೆ. ಕೆಲವು ಕಡೆಗಳಲ್ಲಿ ನಾಮಕಾವಸ್ತೆಗೆ ಮತ್ತು ಕಾನೂನಿಗೆ ಮಣ್ಣೆ ಎರಚುವ ರೀತಿಯಲ್ಲಿ ಅನುಮತಿ ಪಡೆಯಲಾಗುತ್ತದೆ. ಆದರೆ ಅನುಮತಿ ಪಡೆದಿದ್ದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ಮತ್ತು ಅವೈಜ್ಞಾನಿಕವಾಗಿ ಕೆರೆಗಳ ಒಡಲನ್ನು ಬಗೆಯಲಾಗುತ್ತಿದೆ.
ಚಿಕ್ಕಬಳ್ಳಾಪುರ ನಗರದ ಸುತ್ತಮುತ್ತ ಹೊಸ ಬಡಾವಣೆಗಳ ಅಭಿವೃದ್ಧಿ ವೇಗವಾಗಿ ನಡೆಯುತ್ತಿದೆ. ಕೆಲವರು ಹೊಸಬಡಾವಣೆಗಳ ನಿರ್ಮಾಣದ ವೇಳೆ ಜಮೀನುಗಳನ್ನು ಎತ್ತರಿಸಲು ಮಣ್ಣು ಹೊಡೆಸುವರು. ಇಟ್ಟಿಗೆ ಕಾರ್ಖಾನೆಗಳಿಗೂ ಕೆರೆಯ ಮಣ್ಣು ಪೂರೈಸಲಾಗುತ್ತಿದೆ.
ಕೆರೆಯಿಂದ ಮಣ್ಣು ತೆಗೆಯಬೇಕಾದರೆ ಗಣಿ ಮತ್ತು ಕಂದಾಯ ಇಲಾಖೆಯ ಅನುಮತಿ ಪಡೆಯಬೇಕು. ನಿಗಧಿತ ರಾಜಧನ ಪಾವತಿಸಿ ಪರವಾನಗಿ ಪಡೆಯಬೇಕು. ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ, ಯಾವುದೇ ಶುಲ್ಕ ಪಾವತಿಸದೆ ನಿತ್ಯ ಹತ್ತಾರು ಟಿಪ್ಪರ್ ಲೋಡ್ ಮಣ್ಣನ್ನು ಕೆರೆಗಳಿಂದ ತೆಗೆಯಲಾಗುತ್ತಿದೆ.
ಜಿಲ್ಲೆಯಲ್ಲಿ ಈ ಮಣ್ಣು ತೆಗೆಯುವ ದಂಧೆ ಬಹಿರಂಗವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಜಾಣ ಕುರುಡುತನ ತೋರಿಸುತ್ತಿದ್ದಾರೆ.
ಮಾಧ್ಯಮಗಳಲ್ಲಿ ಈ ಬಗ್ಗೆ ಆಗಾಗ್ಗೆ ವರದಿಯಾಗುತ್ತಿದ್ದರೂ ದಪ್ಪ ಚರ್ಮದ ಅಧಿಕಾರಿಗಳ ಮರ್ಜಿಯಲ್ಲಿ ‘ಮೂಮೂಲಿ’ಯಂತೆ ಈ ದಂಧೆ ಅವ್ಯಾಹವಾಗಿ ನಡೆಯುತ್ತಿವೆ. ‘ನೀವು ಎಷ್ಟು ಬರೆದರೋ ಎಷ್ಟು ವರದಿ ಮಾಡಿದರೂ’ ನಾವು ಇರುವುದೇ ಹೀಗೆ ಎನ್ನುಂತಿದೆ ಅಧಿಕಾರಿಗಳ ಮನಸ್ಥಿತಿ.
- ‘ಪ್ರಜಾವಾಣಿ’ ಛಾಯಾಗ್ರಾಹಕರಿಗೆ ಹಣದ ಆಮಿಷ
ಚಿಕ್ಕಕಾಡಿಗೇನಹಳ್ಳಿ ಕೆರೆಯಲ್ಲಿ ಮಣ್ಣು ತೆಗೆಯುತ್ತಿರುವ ಬಗ್ಗೆ ವಿಡಿಯೊ ಮತ್ತು ಚಿತ್ರಗಳನ್ನು ತೆಗೆಯಲು ಮುಂದಾದ ‘ಪ್ರಜಾವಾಣಿ’ ಚಿಕ್ಕಬಳ್ಳಾಪುರ ಛಾಯಾಗ್ರಾಹಕರಿಗೆ ಕೆಲವರು ಹಣದ ಆಮಿಷ ಸಹ ಒಡ್ಡಿದ್ದಾರೆ. ಚಿತ್ರಗಳನ್ನು ತೆಗೆಯಲು ಮುಂದಾಗುತ್ತಿದ್ದಂತೆ ಟಿಪ್ಪರ್‌ಗಳು ಮಣ್ಣು ಸುರಿದು ಅಲ್ಲಿಂದ ಪಲಾಯನ ಮಾಡಿವೆ. ನಂತರ ಕೆಲವರು ಕರೆ ಮಾಡಿ ಸುದ್ದಿ ಮಾಡದಂತೆ ಒತ್ತಡ ಹೇರಿದ್ದಾರೆ.