ADVERTISEMENT

ದೇಗುಲ ಜಮೀನಿನಲ್ಲಿ ಅಕ್ರಮ ಟವರ್

ಮಿಣಕಿನಗುರ್ಕಿ: ಮುಜರಾಯಿ ಇಲಾಖೆ ಜಾಗದಲ್ಲಿ ಅಳವಡಿಕೆ

ಡಿ.ಎಂ.ಕುರ್ಕೆ ಪ್ರಶಾಂತ
Published 30 ಮಾರ್ಚ್ 2022, 2:25 IST
Last Updated 30 ಮಾರ್ಚ್ 2022, 2:25 IST
ಮೋಹನ್ ಕುಮಾರ್
ಮೋಹನ್ ಕುಮಾರ್   

ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ಹೋಬಳಿಯ ಮಿಣಕಿನಗುರ್ಕಿ ಗ್ರಾಮದ ಚೌಡೇಶ್ವರಿ ದೇವಾಲಯಕ್ಕೆ ಸೇರಿದ ಇನಾಂತಿ ಜಮೀನಿನಲ್ಲಿ ಯಾವುದೇ ಅನುಮತಿ ಪಡೆಯದೆ ಹಿಂದೂಸ್ ಟವರ್ ಲಿಮಿಟೆಡ್ ಕಂಪನಿ ಅಕ್ರಮವಾಗಿ ಮೊಬೈಲ್ ಟವರ್ ನಿರ್ಮಿಸಿದೆ. ‌ಈ ದೇಗುಲ ಮುಜರಾಯಿ ಇಲಾಖೆಗೆ ಸೇರಿದೆ.

ಟವರ್ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ, ವಿದ್ಯುತ್ ಇಲಾಖೆ ಮತ್ತು ತಾಲ್ಲೂಕು ಆಡಳಿತದಿಂದ ಅನುಮತಿ ಪಡೆಯಬೇಕು. ಮುಜರಾಯಿ ಇಲಾಖೆ ಜಮೀನಿನಲ್ಲಿಯೇ ಟವರ್ ನಿರ್ಮಿಸಿದ್ದರೂ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಯಲಿಲ್ಲವೇ? ವಿದ್ಯುತ್ ಸಂಪರ್ಕ ಪಡೆದಿದ್ದಾದರೂ ಹೇಗೆ? ಹೀಗೆ ಸಾರ್ವಜನಿಕ ವಲಯದಲ್ಲಿ ಈ ಪ್ರಕರಣ ನಾನಾ ಚರ್ಚೆಗಳನ್ನು ಹುಟ್ಟಿಸಿದೆ.

ಚಿಕ್ಕಬಳ್ಳಾಪುರದ ಆರ್‌ಟಿಐ ಕಾರ್ಯಕರ್ತ ಸಿ. ಮೋಹನ್ ಕುಮಾರ್ ಈ ಅಕ್ರಮ ಮೊಬೈಲ್ ಟವರ್‌ಗೆ ಸಂಬಂಧಿಸಿದಂತೆ ಮುಜುರಾಯಿ ಇಲಾಖೆ, ತಹಶೀಲ್ದಾರ್ ಕಚೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಷ್ಟೇ ಏಕೆ ಪ್ರಧಾನಿ ಕಚೇರಿಗೂ ದೂರು ನೀಡಿದ್ದಾರೆ.

ADVERTISEMENT

ತೋರಿದ್ದು ಒಂದು ಹಾಕಿದ್ದು ಮತ್ತೊಂದು ಕಡೆ:ಮಿಣಕಿನಗುರ್ಕಿಯ ಎಂ. ಕೃಷ್ಣಪ್ಪ ಎಂಬುವವರು ಗ್ರಾಮದ ಸರ್ವೆ ನಂ 69/1ರ 1.03 ಎಕರೆ ಜಮೀನು ಹೊಂದಿದ್ದಾರೆ. ಇಲ್ಲಿ 40*60 ಸುತ್ತಳತೆಯ 2,400 ಅಡಿಗಳ ವ್ಯಾಪ್ತಿಯಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ 2015ರ ಜೂನ್‌ನಲ್ಲಿ ಕಂಪನಿ ಜತೆ ಕರಾರು ಮಾಡಿಕೊಂಡಿ ದ್ದಾರೆ.ಜಮೀನಿನ ದಾಖಲೆಗಳನ್ನು ಹಿಂದೂಸ್ ಟವರ್ ಲಿಮಿಟೆಡ್ ಕಂಪನಿಗೆ ನೀಡಿದ್ದಾರೆ.

ಆದರೆ, ಇಲ್ಲಿ ಟವರ್ ಅವಳವಡಿಸುವ ಬದಲು ಗ್ರಾಮದ ಸರ್ವೆ ನಂ. 1ರಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ಚೌಡೇಶ್ವರಿ ದೇಗುಲದ ಇನಾಂತಿ ಜಮೀನಿನಲ್ಲಿ ಟವರ್ ನಿರ್ಮಿಸಲಾಗಿದೆ. ಟವರ್ ನಿರ್ಮಾಣಕ್ಕೆ ಯಾವುದೇ ಇಲಾಖೆಯಿಂದಲೂ ಅನುಮತಿ ಪಡೆದಿಲ್ಲ.

ತಹಶೀಲ್ದಾರರಿಗೆಮೋಹನ್ ಕುಮಾರ್ ದೂರು ನೀಡುತ್ತಿದ್ದಂತೆ, 2021ರ ಡಿಸೆಂಬರ್‌ನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ. ದೇಗುಲದ ಜಾಗದಲ್ಲಿ ಅಕ್ರಮವಾಗಿ ಟವರ್ ನಿರ್ಮಿಸಲಾಗಿದೆ ಎಂದು ತಹಶೀಲ್ದಾರರಿಗೆ ವರದಿ ನೀಡಿದ್ದಾರೆ. ಆ ವರದಿಯನ್ನು ತಹಶೀಲ್ದಾರರು ಕ್ರಮಕ್ಕೆ ಕೋರಿ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.

‘ಈ ಟವರ್‌ನಿಂದ ಬಂದ ಬಾಡಿಗೆಯನ್ನು ಚೌಡೇಶ್ವರಿ ದೇಗುಲದ ನಿರ್ಮಾಣಕ್ಕೆ ಉಪಯೋಗಿಸುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ’ ಎಂದು ಕಂದಾಯ ಇಲಾಖೆ ಅಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿ
ದ್ದಾರೆ.

ಸಬಂಧಿಸಿದ ಇಲಾಖೆಗಳ‌ ಅನುಮತಿ ಪಡೆಯದೆ ಮತ್ತು ಮುಜರಾಯಿ ಇಲಾಖೆ ಗಮನಕ್ಕೂ ತಾರದೆ ಸರ್ಕಾರಿ ಜಮೀನಿನಲ್ಲಿ ಮೊಬೈಲ್ ಟವರ್ ಅಳವಡಿಸಲಾಗಿದೆ. ಮೋಹನ್ ಕುಮಾರ್ ದೂರು ಮತ್ತು ಸ್ಥಳ ಮಹಜರು ನಂತರ ಟವರ್‌ಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಕಡಿತಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.