ADVERTISEMENT

ಗುಡಿಬಂಡೆ: ಬಿಸಿಎಂ ವಿದ್ಯಾರ್ಥಿ ನಿಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 4:11 IST
Last Updated 8 ಸೆಪ್ಟೆಂಬರ್ 2021, 4:11 IST
ಗುಡಿಬಂಡೆ ಹೊರವಲಯದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡವನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಉದ್ಘಾಟಿಸಿದರು
ಗುಡಿಬಂಡೆ ಹೊರವಲಯದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡವನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಉದ್ಘಾಟಿಸಿದರು   

ಗುಡಿಬಂಡೆ: ಪಟ್ಟಣದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಕಾಮಗಾರಿ ಕಳಪೆ ಹಾಗೂ ಅರ್ಪೂಣವಾಗಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಗುತ್ತಿಗೆದಾರರಿಂದ ಹಸ್ತಾಂತರ ಮಾಡಿಕೊಳ್ಳಬೇಡಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬಿಸಿಎಂ ಅಧಿಕಾರಿಗೆ ಸೂಚನೆ ನೀಡಿದರು.

ರಾಜ್ಯದಲ್ಲಿ ಈಗಾಗಲೇ ಪೂರ್ಣಗೊಂಡಿರುವ ವಿದ್ಯಾರ್ಥಿ ನಿಲಯ ಕಟ್ಟಡಗಳನ್ನು ಸೆಪ್ಟಂಬರ್ 1 ರಿಂದ ಕೂಡಲೇ ಪ್ರಾರಂಭ ಮಾಡಿ ಎಂದು ಸಚಿವರ ಸೂಚನೆಯಂತೆ ಶಾಸಕರು ವಿದ್ಯಾರ್ಥಿ ನಿಲಯದಲ್ಲಿ ದಿ.ದೇವರಾಜು ಅರಸು ಭಾವಚಿತ್ರಕ್ಕೆ ಪೂಜೆ ಮಾಡಿ ಬಳಕೆಗೆ ಹಸಿರು ನಿಶಾನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ವಿದ್ಯಾರ್ಥಿಗಳು ಹಲವಾರು ವರ್ಷಗಳಿಂದ ಸೌಲಭ್ಯಗಳ ಕೊರತೆಯ ನಡುವೆ ಬಾಡಿಗೆ ಕಟ್ಟಡದಲ್ಲಿದ್ದು ಈಗ ಶಾಲಾ ಕಾಲೇಜುಗಳು ಪ್ರಾರಂಭವಾಗಿದೆ. ವಿದ್ಯಾರ್ಥಿಗಳ ದೃಷ್ಟಿಯಿಂದ ಕಟ್ಟಡ ಬಳಕೆಯಾಗಬೇಕು. ಇದರ ಪಕ್ಕದಲ್ಲಿ ₹1 ಕೋಟಿ ವೆಚ್ಚದಲ್ಲಿ ದೇವರಾಜ ಅರಸು ಭವನ ಹಾಗೂ ಕಚೇರಿಯ ಕಾಮಗಾರಿ ಕೆಲಸ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿನಿಲಯ ಪ್ರಾರಂಭ ಮಾಡಲಾಗಿದೆ ಎಂದರು.

ADVERTISEMENT

ಕಟ್ಟಡದ ಗ್ರಾನೈಟ್, ಶೌಚಾಲಯ ಸೇರಿದಂತೆ ಕೆಲವೊಂದು ಕಾಮಗಾರಿ ಕಳಪೆಯಾಗಿದೆ. ಕೂಡಲೇ ಸಂಬಂಧಪಟ್ಟ ಗುತ್ತಿಗೆದಾರರಿಗೆ ತಿಳಿಸಿ ಕೆಲಸ ಸರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ, ಈ ಕೆಲಸ ಆಗುವವರೆಗೂ ಯಾವುದೇ ಕಾರಣಕ್ಕೂ ಕಟ್ಟಡವನ್ನು ಹಸ್ತಾಂತರ ಮಾಡಿಕೊಳ್ಳಬೇಡಿ ಎಂದು ಬಿಸಿಎಂ ಇಲಾಖೆಯ ಅಧಿಕಾರಿ ರಾಮಯ್ಯ ಅವರಿಗೆ ಸೂಚನೆ ನೀಡಿದರು.

ತಾ.ಪಂ. ಇ.ಒ ರವೀಂದ್ರ, ಪ.ಪಂ. ಮುಖ್ಯಾಧಿಕಾರಿ ರಾಜಶೇಖರ್, ಕಾಂಗ್ರೆಸ್ ಮುಖಂಡ ಕೃಷ್ಣೇಗೌಡ, ಕೃಷ್ಣಪ್ಪ, ಸುಬ್ಬರಾಯಪ್ಪ, ನಾಗರಾಜರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.