ಚಿಕ್ಕಬಳ್ಳಾಪುರ: ರಾಜ್ಯದ ಗಡಿ ಮತ್ತು ಬರದ ತಾಲ್ಲೂಕು ಎನಿಸಿರುವ ಬಾಗೇಪಲ್ಲಿಯಲ್ಲಿ ಈಗ ಕೈಗಾರಿಕೀಕರಣದ ಆಶಾವಾದ ಮೊಳೆತಿವೆ. ತಾಲ್ಲೂಕಿನ ಕೊಂಡರೆಡ್ಡಿಪಲ್ಲಿ ಮತ್ತು ಹೊಸಹುಡ್ಯ ಗ್ರಾಮಗಳ ಬಳಿ ಕೈಗಾರಿಕೆಗಳ ಸ್ಥಾಪನೆ ವಿಚಾರವಾಗಿ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಇತಿಶ್ರೀ ಬೀಳುತ್ತಿದೆ.
ಈ ಹಳ್ಳಿಗಳಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ವಶಕ್ಕೆ ಪಡೆಯಲಿರುವ ಜಮೀನಿಗೆ ದರ ನಿಗದಿ ಸಂಬಂಧ ಜ.27ರಂದು ಚಿಕ್ಕಬಳ್ಳಾಪುರದಲ್ಲಿ ಸಭೆ ಸಹ ನಡೆಯಲಿದೆ. ರೈತರು ಸಹ ಒಂದು ಎಕರೆಗೆ ₹ 1 ಕೋಟಿ ನೀಡಬೇಕು ಎಂದು ಮನವಿ ಮಾಡುತ್ತಿದ್ದರು. ರೈತರ ಈ ಮನವಿ ಪುರಸ್ಕಾರಗೊಳ್ಳುವ ಲಕ್ಷಣಗಳು ದಟ್ಟವಾಗಿವೆ.
2009ರಿಂದಲೂ ಈ ಗ್ರಾಮಗಳ ಬಳಿ ಕೈಗಾರಿಕೆಗಳ ಸ್ಥಾಪನೆಯ ವಿಚಾರವಾಗಿ ಚರ್ಚೆಗಳು, ಪ್ರತಿಭಟನೆಗಳು, ಹಗ್ಗಜಗ್ಗಾಟಗಳು ನಡೆದಿವೆ. 15 ವರ್ಷಗಳ ಹಿಂದೆ ಈ ಹಳ್ಳಿಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ 192 ಎಕರೆ ಭೂಮಿ ಗುರುತಿಸಲಾಗಿತ್ತು.
ಆದರೆ ಈ ಜಮೀನು ನೀಡಲು ರೈತರು ವಿರೋಧ ವ್ಯಕ್ತಪಡಿಸಿದ್ದರು. ಪ್ರತಿಭಟನೆಗಳು ಸಹ ನಡೆದಿದ್ದವು. ಆ ನಂತರ ರೈತರ ಜೊತೆ ಮಾತುಕತೆಗಳು ನಡೆದಿದ್ದವು. ಉತ್ತರ ದರ ನೀಡುವಂತೆ ಆಗ್ರಹಿಸುತ್ತಿದ್ದರು.
ಈ ಹಿಂದೆ ಗುರುತಿಸಿದ್ದ 192 ಎಕರೆ ಜಮೀನಿನ ಜೊತೆಗೆ ಬಾಗೇಪಲ್ಲಿ ತಾಲ್ಲೂಕಿನ ಕೊಂಡರೆಡ್ಡಿಪಲ್ಲಿ ಬಳಿ 684 ಎಕರೆ ಜಮೀನನ್ನು ಕೆಐಡಿಬಿ ಗುರುತಿಸಿದೆ. ಈ ಹಿಂದೆ ಗುರುತಿಸಿದ್ದ ಭೂಮಿಯೂ ಸೇರಿದಂತೆ 876 ಎಕರೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುವ ನಿರೀಕ್ಷೆ ಇದೆ. ಈಗ ಕೈಗಾರಿಕೀಕರಣದ ವಿಚಾರವು ಅಂತಿಮ ಹಂತದಲ್ಲಿ ಇದೆ.
ಕರ್ನಾಟಕ ಪ್ರದೇಶ ಕೈಗಾರಿಕಾಭಿವೃದ್ಧಿ ಮಂಡಳಿಯು ವಶಕ್ಕೆ ಪಡೆಯಲಿರುವ ಒಂದು ಎಕರೆ ಜಮೀನಿಗೆ ₹ 1 ಕೋಟಿ ನೀಡಬೇಕು ಎಂದು ಈ ಹಳ್ಳಿಗಳ ರೈತರು ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಸಭೆಯಲ್ಲಿ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ರೈತರ ಮನವಿಗೆ ಧ್ವನಿಗೂಡಿಸಿದ್ದ ಶಾಸಕರು ₹ 1 ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದರು.
‘ಗಡಿಭಾಗದ ತಾಲ್ಲೂಕಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಆ ಮೂಲಕ ಉದ್ಯೋಗಾವಕಾಶಗಳು ಸೃಷ್ಟಿಸಬೇಕು ಎನ್ನುವುದು ನನ್ನ ಬಹುದಿನಗಳ ಆಸೆಯಾಗಿತ್ತು. ಈಗ ಆ ಕಾಲ ಸನ್ನಿಹಿತವಾಗಿದೆ. ಬರ ಮತ್ತು ಹಿಂದುಳಿದ ತಾಲ್ಲೂಕು ಎನಿಸಿರುವ ಬಾಗೇಪಲ್ಲಿಗೆ ಕೈಗಾರಿಕೀಕರಣವು ಹೊಸ ಅಧ್ಯಾಯ ಪ್ರಾರಂಭಿಸುತ್ತದೆ’ ಎಂದು ಸುಬ್ಬಾರೆಡ್ಡಿ ತಿಳಿಸಿದರು.
ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಬಾಗೇಪಲ್ಲಿಯಲ್ಲಿ ಈ ಹಿಂದೆ ಕೈಗಾರಿಕೀಕರಣಕ್ಕೆ ನಡೆದ ಪ್ರಯತ್ನಗಳು ವಿಫಲವಾಗಿದ್ದವು. ನೆರೆಯ ಆಂಧ್ರಪ್ರದೇಶದಲ್ಲಿ ಕೊರಿಯಾ ದೇಶದ ಕಿಯಾ ಮೋಟರ್ಸ್ ಈಗಾಗಲೇ ದೊಡ್ಡ ಕೈಗಾರಿಕಾ ಘಟಕಗಳನ್ನು ಹೊಂದಿದೆ.
ಎಕರೆಗೆ ₹ 1 ಕೋಟಿ ಪರಿಹಾರಕ್ಕೆ ಒತ್ತಾಯ
ಕೈಗಾರಿಕೀಕರಣಕ್ಕೆ ವಶಕ್ಕೆ ಪಡೆಯುವ ಒಂದು ಎಕರೆ ಜಮೀನಿಗೆ ₹ 1 ಕೋಟಿ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ. ರೈತರ ಮನವಿಯ ಪರವಾಗಿಯೇ ನಾನು ಇದ್ದೇನೆ. ನಾನೂ ಸಹ ಇದೇ ದರವನ್ನು ನೀಡಬೇಕು ಎಂದು ಒತ್ತಾಯಿಸುತ್ತೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಜ.27ರಂದು ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ ಉನ್ನತ ಅಧಿಕಾರಿಗಳು ಜಿಲ್ಲಾಧಿಕಾರಿ ಜೊತೆ ಈ ಬಗ್ಗೆ ಸಭೆ ನಡೆಸಲಾಗುವುದು. ಅಂದು ಎರಡೂ ಹಳ್ಳಿಗಳ ರೈತರ ಸಮ್ಮುಖದಲ್ಲಿಯೇ ಈ ಸಭೆ ನಡೆಯಲಿದೆ. ಇಲ್ಲಿ ದರವನ್ನು ಅಂತಿಮಗೊಳಿಸಲಾಗುವುದು. ನಾನೂ ಸಹ ₹ 1 ಕೋಟಿ ಕೊಡಬೇಕು ಎಂದು ಒತ್ತಾಯಿಸುತ್ತಿದ್ದೇನೆ ಎಂದು ತಿಳಿಸಿದರು.
ಕಡತವು ಮಂಡಳಿ ಎದುರಿಗೆ ಬರುತ್ತಿದೆ. ಅದಕ್ಕೂ ಮುನ್ನ ದರ ನಿಗದಿಯ ವಿಚಾರ ಅಂತಿಮವಾಗಲಿದೆ. ಆ ನಂತರ ಎರಡು ವಾರಗಳಲ್ಲಿ ರೈತರಿಗೆ ಮೊದಲ ಕಂತಿನಲ್ಲಿ ಹಣವು ಜಮೆ ಆಗಲಿದೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಸಭೆ
ದರ ನಿಗದಿ ವಿಚಾರವಾಗಿ ಚರ್ಚಿಸಲು ಶುಕ್ರವಾರ ಸಂಜೆ ವಿಧಾನಸೌಧದಲ್ಲಿ ಸಭೆ ಸಹ ನಡೆಯಿತು. ಶಾಸಕ ಸುಬ್ಬಾರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೈಗಾರಿಕಾ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ವಿಶೇಷ ಭೂಸ್ವಾಧೀನ ಅಧಿಕಾರಿ ಪಾಲ್ಗೊಂಡಿದ್ದರು. ಹೊಸಹುಡ್ಯ ಕೊಂಡರೆಡ್ಡಿಪಲ್ಲಿ ಗ್ರಾಮಗಳಲ್ಲಿ ಎಸ್‌ಆರ್ ದರ ಎಷ್ಟಿದೆ ಮಾರುಕಟ್ಟೆ ದರ ಎಷ್ಟಿದೆ. ಎಷ್ಟು ದರ ನಿಗದಿಗೊಳಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ ಎನ್ನುವ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆಗಳು ನಡೆದವು. ‘ರೈತರಿಗೆ ಒಪ್ಪಿಗೆಯಾಗುವ ದರವನ್ನು ನಿಗದಿಪಡಿಸಬೇಕು’ ಎಂದು ಸಭೆಯಲ್ಲಿ ಶಾಸಕರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.