ADVERTISEMENT

ಚಿಕ್ಕಬಳ್ಳಾಪುರ: 131 ಗ್ರಾಮಗಳಲ್ಲಿ ಆರೋಗ್ಯ ಸೇವೆ ಆರಂಭ

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಗ್ರಾಮ ಆರೋಗ್ಯ ಸೇವಾ ಕೇಂದ್ರ’ಗಳ ಕಾರ್ಯಾರಂಭ, ಸಹಾಯವಾಣಿ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 13:08 IST
Last Updated 5 ಆಗಸ್ಟ್ 2020, 13:08 IST
ಗೌರಿಬಿದನೂರು ತಾಲ್ಲೂಕಿನ ಮುದುಗೆರೆ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ
ಗೌರಿಬಿದನೂರು ತಾಲ್ಲೂಕಿನ ಮುದುಗೆರೆ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ   

ಚಿಕ್ಕಬಳ್ಳಾಪುರ: ಗ್ರಾಮೀಣ ಪ್ರದೇಶದ ಜನರಿಗೆ ಉಚಿತ ಹಾಗೂ ಶೀಘ್ರವಾಗಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಗ್ರಾಮಮಟ್ಟದಲ್ಲಿ ತೆರೆದ ‘ಗ್ರಾಮ ಆರೋಗ್ಯ ಸೇವಾ ಕೇಂದ್ರ’ಗಳನ್ನು ಇದೀಗ ಜಿಲ್ಲೆಯಾದ್ಯಂತ ವಿಸ್ತರಿಸಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 131 ಕೇಂದ್ರಗಳು ಕಾರ್ಯಾರಂಭ ಮಾಡಿವೆ.

ಕಳೆದ ತಿಂಗಳು ಮೊದಲ ಬಾರಿಗೆ ಗೌರಿಬಿದನೂರು ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಆರಂಭಗೊಂಡ ಸೇವೆ ಇದೀಗ ಉಳಿದೆಲ್ಲ ತಾಲ್ಲೂಕುಗಳಲ್ಲಿ ಲಭ್ಯವಾಗುತ್ತಿದೆ.

ಹಳ್ಳಿಗಳ ಜನರು ಚಿಕಿತ್ಸೆಗಾಗಿ ನಗರಕ್ಕೆ ಅಲೆದಾಡುವುದು ತಪ್ಪಿಸುವ ಮೂಲಕ ಸಮುದಾಯದಲ್ಲಿ ಸೋಂಕು ಹರಡುವುದು ತಡೆಯುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಅವರು ವಾಸಿಸುವ ಪ್ರದೇಶದಲ್ಲಿಯೇ ಅಗತ್ಯ ಆರೋಗ್ಯ ಸೇವೆ ಒದಗಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶ.

ADVERTISEMENT

ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಸಿಬ್ಬಂದಿ ‘ಗ್ರಾಮೀಣ ಆರೋಗ್ಯ ಸೇವಾ ಕೇಂದ್ರ’ದಲ್ಲಿ ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಾರೆ.

ಇವರಿಗೆ ಸ್ಥಳೀಯ ಸ್ವ ಸಹಾಯ ಸಂಘಗಳ ಪ್ರತಿನಿಧಿಗಳು ಮತ್ತು ಸ್ವಯಂ ಸೇವಕರು ಕೈಜೋಡಿಸುತ್ತಿದ್ದಾರೆ. ಕೇಂದ್ರ ನಿರ್ವಹಿಸುವವರಿಗೆ ಆರೋಗ್ಯ ಇಲಾಖೆಯ ಮಾರ್ಗದರ್ಶನ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ನೇತೃತ್ವದಲ್ಲಿ ತರಬೇತಿ ನೀಡಲಾಗಿದೆ. ಈ ಕೇಂದ್ರಗಳಲ್ಲಿ ವಾರದಲ್ಲಿ ಒಂದು ದಿನ ನುರಿತ ವೈದ್ಯರು ಲಭ್ಯವಿರುತ್ತಾರೆ.

ಗ್ರಾಮ ಪಂಚಾಯಿತಿ ಕಟ್ಟಡ, ಅಂಗನವಾಡಿ, ಶಾಲೆ, ಸರ್ಕಾರಿ ಕಟ್ಟಡಗಳಲ್ಲಿ ಈ ಕೇಂದ್ರಗಳು ಕಾರ್ಯಾರಂಭ ಮಾಡಿದ್ದು, ಇದಕ್ಕೆ ಪೂರಕವಾಗಿ ಪ್ರತಿ ಪಂಚಾಯಿತಿಯಲ್ಲಿ ಒಂದು ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಸಾರ್ವಜನಿಕರಿಂದ ಕರೆಗಳನ್ನು ಸ್ವೀಕರಿಸಲು ಸಿಬ್ಬಂದಿ ನಿಯೋಜಿಸಲಾಗಿದೆ. ಗ್ರಾಮವಾರು ತಂಡಗಳಿಗೆ ಆರೋಗ್ಯ ಇಲಾಖೆ ಮೂಲಕ ತಪಾಸಣಾ ಉಪಕರಣಗಳನ್ನು ಒದಗಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಹಂತದಲ್ಲಿ ಪ್ರತಿನಿತ್ಯ ಔಷಧಿಗಳನ್ನು ಪಡೆಯುವ ದುರ್ಬಲ ವರ್ಗದ ಜನರ ವಿವರಗಳನ್ನು ನಮೂದಿಸಿಕೊಳ್ಳಲಾಗುತ್ತಿದೆ.

‘ಕೋವಿಡ್‌ ಕಾರಣಕ್ಕೆ ಜನಸಾಮಾನ್ಯರು ಆಸ್ಪತ್ರೆಗಳಿಗೆ ಹೋಗುವುದಕ್ಕೆ ಕಷ್ಟವಾಗುತ್ತಿದೆ. ಇಂತಹ ಹೊತ್ತಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಗ್ರಾಮ ಆರೋಗ್ಯ ಸೇವಾ ಕೇಂದ್ರ ತೆರೆದಿರುವುದು ಉತ್ತಮ ಕಾರ್ಯ. ಮಧುಮೇಹ ಪರೀಕ್ಷೆ, ರಕ್ತದೊತ್ತಡ, ಜ್ವರ, ಶೀತ, ಕೆಮ್ಮು, ನೆಗಡಿ ಹಾಗೂ ಉಸಿರಾಟ ತೊಂದರೆಯಂಥ ಕಾಯಿಲೆಗಳನ್ನು ಸ್ಥಳೀಯವಾಗಿ ಪರೀಕ್ಷೆ ಮಾಡಿಕೊಳ್ಳಲು ಈ ಕೇಂದ್ರ ಸಹಕಾರಿ ಆಗಲಿದೆ’ ಎಂದು ಪಟ್ರೇನಹಳ್ಳಿ ನಿವಾಸಿ ರಾಜಗೋಪಾಲ್‌ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.