ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಒಳಮೀಸಲಾತಿ ವಿಚಾರವಾಗಿ ನಡೆಸಿರುವ ಪರಿಶಿಷ್ಟರ ಜಾತಿ ಗಣತಿಯಲ್ಲಿ ಗೊಂದಲಗಳು ಇವೆ. ಆ ಗೊಂದಲಗಳನ್ನು ನಿವಾರಿಸಿ ಆ.15ರ ಒಳಗೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಮಾಜಿ ಸಚಿವ ಹಾಗೂ ಮಾದಿಗ ಸಮುದಾಯದ ಮುಖಂಡ ಎ.ನಾರಾಯಣಸ್ವಾಮಿ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಳಮೀಸಲಾತಿ ವಿಚಾರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿ ಆ.1ಕ್ಕೆ ಒಂದು ವರ್ಷ ಆಗುತ್ತದೆ. ಈ ಹಿನ್ನೆಲೆಯಲ್ಲಿ ಅಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳ ಜಿಲ್ಲಾಧಿಕಾರಿ ಕಚೇರಿ ಎದುರು ಸಮುದಾಯದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಆ.15ರ ಒಳಗೆ ಒಳಮೀಸಲಾತಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿನ ಮಾದಿಗ ಸಂಘಟನೆಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ಜೊತೆಗೂಡಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಎಂದರು.
ಮಾದಿಗ ಸಮುದಾಯವು ಒಳಮೀಸಲಾತಿಗಾಗಿ ಮೂರು ದಶಕಗಳಿಂದ ಹೋರಾಟ ನಡೆಸಿದೆ. ಸುಪ್ರೀಂಕೋರ್ಟ್ ತೀರ್ಪು ನೀಡಿ ಒಂದು ವರ್ಷವಾದರೂ ಒಳಮೀಸಲಾತಿ ಜಾರಿಯಾಗಿಲ್ಲ. ಈ ಕಾರಣ ಆ.1ರಂದು ಅರೆ ಬೆತ್ತಲೆ ಚಳವಳಿ ನಡೆಸುತ್ತೇವೆ. ಪಕ್ಷಾತೀತವಾಗಿ ಈ ಹೋರಾಟ ನಡೆಯಲಿದೆ ಎಂದರು.
ಆಂಧ್ರಪ್ರದೇಶ, ತೆಲಂಗಾಣದಲ್ಲಿ ಒಳಮೀಸಲಾತಿ ಜಾರಿಯಾಗಿದೆ. ಸಮೀಕ್ಷೆಯಲ್ಲಿ ಅಲ್ಲಿ ಸಿದ್ಧಪಡಿಸಿದ್ದ ಕಾಲಂಗಳ ಮಾದರಿಗಳು ನಮ್ಮ ರಾಜ್ಯದಲ್ಲಿ ನಿಗದಿಗೊಳಿಸಿಲ್ಲ. ಈ ಕಾರಣದಿಂದ ಸಮೀಕ್ಷೆಯು ಅನೇಕ ಗೊಂದಲಗಳಿಂದ ಕೂಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 52 ಮತ್ತು ರಾಜ್ಯದ ಇತರೆ ಕಡೆಗಳಲ್ಲಿ ಶೇ 91ರಷ್ಟು ಸಮೀಕ್ಷೆಯಾಗಿದೆ ಎಂದು ಸರ್ಕಾರ ತಿಳಿಸಿದೆ ಎಂದು ಹೇಳಿದರು.
ಒಳಮೀಸಲಾತಿ ಹೋರಾಟವನ್ನು ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳು ಮಾಡಲಿಲ್ಲ. 30 ವರ್ಷ ಹೋರಾಟ ಮಾಡಿ ಜೀವ ಕಳೆದುಕೊಂಡಿರುವವರು ಮಾದಿಗ ಸಮುದಾಯದ ಉಪಜಾತಿಗಳು ಮಾತ್ರ. ಒಳಮೀಸಲಾತಿ ವಿಚಾರವಾಗಿ ಸರ್ಕಾರದ ಮೇಲೆ ಅನುಮಾನಗಳು ಇವೆ ಎಂದು ಹೇಳಿದರು.
ಸಮೀಕ್ಷೆಯ ವೇಳೆ ಎಕೆ, ಎಡಿ, ಆದಿ ಆಂಧ್ರದ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸ್ಥಾನಗಳು ಸೇರಿದಂತೆ ಹಲವು ಮಾಹಿತಿಗಳನ್ನು ಕಲೆ ಹಾಕಿಲ್ಲ. ಮಾದಿಗ ಸಮಾಜಕ್ಕೆ ಒಳಮೀಸಲಾತಿ ಕೊಡಬಾರದು ಎಂದು ಗೊಂದ ಸೃಷ್ಟಿ ಮಾಡಿದ್ದಾರೆ ಎಂದು ದೂರಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಸಂಸದ ಗೋವಿಂದ ಕಾರಜೋಳ ಮತ್ತು ಹಳೆ ಮೈಸೂರು ಭಾಗದಲ್ಲಿ ನನ್ನ ನೇತೃತ್ವದಲ್ಲಿ ಚಳವಳಿ ನಡೆಯಲಿದೆ. ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ತಕ್ಷಣವೇ ಒಳಮೀಸಲಾತಿ ಜಾರಿಗೊಳಿಸಬೇಕು. ಸಮೀಕ್ಷೆಯ ವಿಚಾರದಲ್ಲಿನ ಗೊಂದಲಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಯಾವುದೇ ಸರ್ಕಾರ ಜಾತಿ ಗಣತಿಯನ್ನು ಬದ್ಧತೆಯಿಂದ ನಡೆಸಬೇಕು. ವರದಿ ಬಹಿರಂಗ ಆಗಬಾರದು. ಈ ಹಿಂದೆ ಕಾಂತರಾಜು ನೇತೃತ್ವದಲ್ಲಿ ನಡೆಸಿದ ಸಮೀಕ್ಷೆಯ ವರದಿಯನ್ನು ಕಸದ ಬುಟ್ಟಿಗೆ ಹಾಕಿದ್ದಾರೆ. ₹170 ಕೋಟಿ ಪೋಲಾಗಿದೆ ಎಂದರು.
75 ವರ್ಷ ಆಡಳಿತ ನಡೆಸಿದ ಸರ್ಕಾರದಿಂದ ಮಾದಿಗ ಸಮುದಾಯವು ಅಭಿವೃದ್ಧಿ ಆಗಲೇ ಇಲ್ಲ ಎಂದು ಆರೋಪಿಸಿದರು.
ಮಾದಿಗ ಸಮುದಾಯದ ಮುಖಂಡರಾದ ತಿರುಮಳಪ್ಪ, ಕೃಷ್ಣಮೂರ್ತಿ, ಬಾಲಕುಂಟಹಳ್ಳಿ ಗಂಗಾಧರ್, ರಾಜಪ್ಪ, ಮುನಿಕೃಷ್ಣಪ್ಪ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಪಕ್ಷದ ವಿಚಾರವಲ್ಲ; ಸಮುದಾಯದ ಹಿತ
ನಮ್ಮ ಹೋರಾಟದಲ್ಲಿ ಬಿಜೆಪಿ ಕಾಂಗ್ರೆಸ್ ಎನ್ನುವ ಯಾವ ಪ್ರಶ್ನೆಯೂ ಇಲ್ಲ. ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು. ಇದು ಪಕ್ಷದ ವಿಚಾರವಲ್ಲ. ಸಮುದಾಯದ ಹಿತದ ಪ್ರಶ್ನೆ ಎಂದು ಎ.ನಾರಾಯಣಸ್ವಾಮಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.