ADVERTISEMENT

ಚಿಕ್ಕಬಳ್ಳಾಪುರ: ಪುರಾತನ ದಾನಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 4:19 IST
Last Updated 9 ಸೆಪ್ಟೆಂಬರ್ 2021, 4:19 IST
ಪುರಾತತ್ವ ಇಲಾಖೆಯ ಅಧಿಕಾರಿಗಳು, ಶಾಸನ ತಜ್ಞರು ಕನ್ನಡ ಶಾಸನವನ್ನು ಪರಿಶೀಲಿಸಿದರು
ಪುರಾತತ್ವ ಇಲಾಖೆಯ ಅಧಿಕಾರಿಗಳು, ಶಾಸನ ತಜ್ಞರು ಕನ್ನಡ ಶಾಸನವನ್ನು ಪರಿಶೀಲಿಸಿದರು   

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನ ನಗರಗೆರೆಗೆ ಸಮೀಪದ ಕೋಡಿಲಿಂಗೇಶ್ವರಬೆಟ್ಟದ ಬುಡದಲ್ಲಿ ಜೋಗೇನಹಳ್ಳಿಗೆ ಸೇರಿದ ಅರಣ್ಯ ಭೂಮಿಯಲ್ಲಿ ಹೊಯ್ಸಳರ ಮೂರನೇ ವೀರಬಲ್ಲಾಳನ ಆಳ್ವಿಕೆಯ ಕಾಲಕ್ಕೆ ಸೇರಿದ ಕನ್ನಡ ಶಾಸನವನ್ನು ಸಂಶೋಧನಾ ತಂಡ ಪತ್ತೆ ಹಚ್ಚಿದೆ.

ಪುರಾತತ್ವ ಇಲಾಖೆಯ ಅಧಿಕಾರಿಗಳು, ಶಾಸನ ತಜ್ಞರು ಹಾಗೂ ಇತಿಹಾಸ ತಜ್ಞರನ್ನೊಳಗೊಂಡ ಸಂಶೋಧಕರ ತಂಡ ಅಪರೂಪದ ಕನ್ನಡ ಶಾಸನವನ್ನು ಪತ್ತೆ ಹಚ್ಚಿದ್ದಾರೆ. ಶಾಸನವನ್ನು ಸುಮಾರು ಆರು ಅಡಿ ಎತ್ತರ ಒಂದೂವರೆ ಅಡಿ ಅಗಲ ಮತ್ತು ಮುಕ್ಕಾಲು ಅಡಿ ದಪ್ಪದ ಕಂಬ ಶಿಲೆಯ ಮೇಲೆ ಎರಡೂ ಬದಿ ಬರೆಯಲಾಗಿದ್ದು ಒಟ್ಟು 34 ಸಾಲುಗಳನ್ನೊಳಗೊಂಡಿದೆ. ಅಧ್ಯಯನ ಮುಂದುವರೆದಿದೆ.

ಈಗ ತಿಳಿದುಬಂದಂತೆ ಶಾಸನವನ್ನು ಶಕವರ್ಷ 1249ರ ಪ್ರಭವ ಸಂವತ್ಸರದಲ್ಲಿ ಬರೆಯಲಾಗಿದೆ. ಇದು ಕ್ರಿಸ್ತಶಕ 1328 ಫೆಬ್ರವರಿ 12ನೇ ದಿನಾಂಕ ಶುಕ್ರವಾರಕ್ಕೆ ಸೇರುತ್ತದೆ. ಬಲ್ಲಾಳರಸರ ಪ್ರಧಾನಿ ಹಾಗೂ ಅಳಿಯನಾಗಿದ್ದ ಮಾಚೆಯದಂಣಾಯಕ ಮಹಾಮಂಡಲೇಶ್ವರನಾಗಿರುತ್ತಾನೆ. ಈತ ಪೆನುಗೊಂಡೆಯ ನೆಲೆವೀಡಿನಿಂದ ರಾಜ್ಯಭಾರ ಮಾಡುವಾಗ ಹೊಲಗದ್ದೆಗಳನ್ನು ದಾನವಾಗಿ ನೀಡಿರುವ ಮಹತ್ವದ ಸಂಗತಿ ಶಾಸನದಲ್ಲಿದೆ. ಆದರೆ ಇದು ಯಾರಿಗೆ ಕೊಟ್ಟಿದ್ದಾರೆಂಬುದನ್ನು ಇನ್ನೂ ವಿವರವಾಗಿ ತಿಳಿಯಲಾಗುತ್ತಿಲ್ಲ. ಬಹುಪಾಲು ಇದು ನಗರಗೆರೆಯ ದೇವರ ಕೈಂಕರ್ಯಗಳಿಗಾಗಿದ್ದಿರಬೇಕೆಂದು ಊಹಿಸಬಹುದಾಗಿದೆ. ಮಾಚೆಯದಂಡನಾಯಕ ಮತ್ತು ಆತನ ಮಗ ಗಂಗಿದಂಡನಾಯಕನ ಉಲ್ಲೇಖವಾಗಿರುವ ಶಾಸನವೊಂದು ಸಮೀಪದ ಹುಣಸೇನಹಳ್ಳಿಯಲ್ಲಿ ಈಗಾಗಲೆ ದಾಖಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ADVERTISEMENT

ಶಾಸನ ಶೋಧನಾ ತಂಡದಲ್ಲಿ ಶಾಸನ ತಜ್ಞ ಕೆ.ಆರ್.ನರಸಿಂಹನ್, ಕೆ.ಧನಪಾಲ್. ಡಾ.ಎಸ್.ವೆಂಕಟೇಶ್, ಪುರಾತತ್ವ ಇಲಾಖೆ ಉಪನಿರ್ದೇಶಕಿ ಕಾವ್ಯಶ್ರೀ, ಬಾಗೇಪಲ್ಲಿ ಕೃಷ್ಣ, ಸುಬ್ಬು ಇದ್ದರು. ಸ್ಥಳೀಯವಾಗಿ ನಗರಗೆರೆ ಸತ್ಯಪ್ಪ, ಸುಬ್ಬರಾವ್, ಅಶ್ವತ್ಥಪ್ಪ, ಸ್ಥಳೀಯ ವಿದ್ಯಾರ್ಥಿ ಅಭಿಷೇಕ್‌ ಆರಾದ್ಯ ಶಾಸನದ ಪತ್ತೆಗೆ ನೆರವು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.