ADVERTISEMENT

ನೀರಾವರಿ ಹೋರಾಟಗಾರ ಡಾ.ಮಧು ಸೀತಪ್ಪ ಚಿರಮೌನ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 4:45 IST
Last Updated 29 ಆಗಸ್ಟ್ 2025, 4:45 IST
ಮಧು ಸೀತಪ್ಪ
ಮಧು ಸೀತಪ್ಪ   

ಚಿಕ್ಕಬಳ್ಳಾಪುರ: ಕರ್ನಾಟಕ ನೀರಾವರಿ ವೇದಿಕೆ ಅಧ್ಯಕ್ಷ ಹಾಗೂ ಬಯಲು ಸೀಮೆಯಲ್ಲಿ ಶಾಶ್ವತ ನೀರಾವರಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಡಾ.ಮಧು ಸೀತಪ್ಪ (59) ಬುಧವಾರ ರಾತ್ರಿ ಚೇಳೂರು ತಾಲ್ಲೂಕಿನ ಶಿವಪುರ ಬಳಿಯ ತಮ್ಮ ತೋಟದ ಮನೆಯಲ್ಲಿ ನಿಧನರಾದರು. 

ಮಧು ಅವರು ಚಿಂತಾಮಣಿ ತಾಲ್ಲೂಕಿನ ಚಿಲಕಲನೇರ್ಪು ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಸೀತಪ್ಪ ಸ್ವಾತಂತ್ರ್ಯ ಹೋರಾಟಗಾರರು. ಲಂಡನ್‌ನಲ್ಲಿ ವೈದ್ಯರಾಗಿದ್ದ ಮಧು ಸೀತಪ್ಪ ನಂತರ ಶಿವ‍ಪುರ ಬಳಿಯ ತಮ್ಮ ತೋಟದಲ್ಲಿ ನೆಲೆ ನಿಂತರು.

ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಶಾಶ್ವತ ನೀರಾವರಿ ಹೋರಾಟಗಳಲ್ಲಿ ಮಧು ಸೀತಪ್ಪ ಮುಂಚೂಣಿಯಲ್ಲಿ ಇದ್ದರು. ಬಯಲು ಸೀಮೆಯ ನೀರಾವರಿ ವಿಚಾರವಾಗಿ ಅವರು ‘ಮತ್ತೆ ದೋಖಾ ಬೇಡ’, ‘ಬರ ಬೇಡ’ ಎನ್ನುವ ಸಾಕ್ಷ್ಯಚಿತ್ರಗಳನ್ನೂ ನಿರ್ಮಿಸಿದ್ದರು. ನೀರಾವರಿಗೆ ಸಂಬಂಧಿಸಿದ ಕ್ರಾಂತಿಕಾರಿ ಗೀತೆಗಳ ಧ್ವನಿ ಸುರುಳಿ ಸಹ ರೂಪಿಸಿದ್ದರು.   

ADVERTISEMENT

ಕೆಲವು ಸಮಯ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡ ಮಧು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲು ತಯಾರಿ ನಡೆಸಿದ್ದರು. ಆದರೆ ಪಕ್ಷವು ಟಿಕೆಟ್ ನೀಡಲಿಲ್ಲ. 

‌2023ರ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜನಪರ ಹೋರಾಟ ನಡೆಸಿದ್ದರು.

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸಿದ ಹೋರಾಟದಲ್ಲಿಯೂ ತೊಡಗಿಸಿಕೊಂಡಿದ್ದರು.

ಲಂಡನ್‌ನಿಂದ ಬಂದ ನಂತರ ಅಂತ್ಯಕ್ರಿಯೆ
ನೇತ್ರ ತಜ್ಞರಾದ ಮಧು ಸೀತಪ್ಪ ಕೆಲ ಕಾಲ ಲಂಡನ್‌ನಲ್ಲಿಯೂ ವೈದ್ಯಕೀಯ ವೃತ್ತಿ ಮಾಡಿದ್ದರು. ಅವರ ಪತ್ನಿ ಮತ್ತು ‍ಪುತ್ರ ಲಂಡನ್‌ನಲ್ಲಿದ್ದು ಅವರು ಬಂದ ತರುವಾಯ ಅಂತ್ಯಕ್ರಿಯೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ದೇವನಹಳ್ಳಿಯ ಆಸ್ಪತ್ರೆಯೊಂದರಲ್ಲಿ ಅವರ ಶವವನ್ನು ಇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.