
ಗೌರಿಬಿದನೂರು: ಕೇಂದ್ರ ಸರ್ಕಾರವು ಪ್ರತಿಯೊಂದು ಮನೆಗೆ ನಲ್ಲಿ ನೀರು ಪೂರೈಸುವ ಮಹತ್ವಾಕಾಂಕ್ಷೆಯೊಂದಿಗೆ 2019ರಲ್ಲಿ ಜಲಜೀವನ ಮಿಷನ್ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯಡಿ ತಾಲ್ಲೂಕಿನಾದ್ಯಂತ ಇರುವ ಪ್ರತಿಯೊಂದು ಹಳ್ಳಿಯ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಲು ₹102 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ.
ತಾಲ್ಲೂಕಿನ 296 ಗ್ರಾಮಗಳಲ್ಲಿ ಜಲಜೀವನ ಮಿಷನ್ ಕಾಮಗಾರಿಯನ್ನು ಆರಂಭಿಸಲಾಗಿದೆ. ಆದರೆ, ಕೆಲವು ಗ್ರಾಮಗಳಲ್ಲಿ ಯೋಜನೆ ಆರಂಭವಾಗಿದೆಯಾದರೂ, ನಿರೀಕ್ಷಿತ ಮಟ್ಟದ ಗುರಿ ಮುಟ್ಟಿಲ್ಲ. ಕಾಮಗಾರಿ ಕುಂಟುತ್ತಲೇ ಸಾಗುತ್ತಿದೆ. ಗ್ರಾಮಗಳಲ್ಲಿ ಮನೆ–ಮನೆಗೆ ನಲ್ಲಿ ಹಾಕಿ, ನಲ್ಲಿಗೆ ನೀರಿನ ಸಂಪರ್ಕ ಕಲ್ಪಿಸುವ ಪೈಪ್‌ಗಳನ್ನು ಅಳವಡಿಸಲು ಸಿಮೆಂಟ್ ರಸ್ತೆಯನ್ನು ಅಗೆಯಲಾಗಿದೆ. ಆದರೆ, ಹೀಗೆ ಅಗೆದ ರಸ್ತೆಯನ್ನು ಸುವ್ಯವಸ್ಥಿತವಾಗಿ ಮುಚ್ಚಿಲ್ಲ. ಕಾಟಾಚಾರಕ್ಕೆ ಎಂಬಂತೆ ಮಣ್ಣು ಹಾಕಿ ಮುಚ್ಚಲಾಗಿದೆ. ಗುಂಡಿಬಿದ್ದಿರುವ ರಸ್ತೆಗಳು ಮಳೆ ಬಂದಾಗ ಕೆಸರುಮಯವಾಗುತ್ತಿವೆ. ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಮತ್ತು ಮಕ್ಕಳು ಹಾಗೂ ಹಿರಿಯ ನಾಗರಿಕರು ಆಯತಪ್ಪಿ ಬಿದ್ದ ಘಟನೆಗಳೂ ವರದಿಯಾಗಿವೆ ಎಂದು ಸ್ಥಳೀಯರು ದೂರುತ್ತಾರೆ.
ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಜಲಜೀವನ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದಕ್ಕಾಗಿ ಗ್ರಾಮದ ಸಿಮೆಂಟ್ ರಸ್ತೆಯನ್ನು ಅಗೆಯಲಾಗಿದೆ. ಆದರೆ, ಅಗೆದ ರಸ್ತೆಯನ್ನು ವರ್ಷಗಳೇ ಕಳೆದರೂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಇದರಿಂದಾಗಿ ಮಕ್ಕಳು ವೃದ್ಧರು, ದನಕರುಗಳು ಮತ್ತು ವಾಹನ ಸವಾರರು ಬೀಳುವುದು ಸಾಮಾನ್ಯ ಎಂಬಂತಾಗಿದೆ. ಈ ಅಗೆದ ಗುಂಡಿಗಳು ಸುಗಮ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಗಳನ್ನು ಸರಿಪಡಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.
ಕೆಲವೆಡೆ ಗ್ರಾಮದ ಉದ್ದಗಲಕ್ಕೂ ಇರುವ ರಸ್ತೆಗಳ ಮಧ್ಯೆ ಭಾಗಕ್ಕೆ ಅಗೆದು ಎರಡು ಭಾಗಗಳನ್ನಾಗಿ ಮಾಡಿ ರಸ್ತೆ ಮಧ್ಯೆ ಭಾಗದಲ್ಲಿ ಒಂದೆರಡು ಅಡಿ ಗುಂಡಿ ತೆಗೆದು ಹಾಗೆ ಬಿಡಲಾಗಿದೆ. ಇದರಿಂದ ಕಾಂಕ್ರಿಟ್ ರಸ್ತೆಯಲ್ಲಿನ ತ್ಯಾಜ್ಯವು ರಸ್ತೆ ಮಧ್ಯೆ ಇರುವ ಗುಂಡಿಗೆ ಬಂದು ಸೇರುತ್ತಿದ್ದು, ಗಿಡಗಂಟಿಗಳು ಬೆಳೆಯುತ್ತಿವೆ. ಜೊತೆಗೆ ಕೆಲವು ಕಡಗಳಲ್ಲಿ 5–6 ಅಡಿಗಳಷ್ಟು ಎತ್ತರದಲ್ಲಿ ಹಾಗೆಯೇ ಬಿಡಲಾಗಿದೆ. ಇದು ಸಾರ್ವಜನಿಕರ ಓಡಾಟಕ್ಕೆ ಸಂಕಷ್ಟವಾಗಿದೆ ಎಂದು ಸ್ಥಳೀಯರು ಆರೋಪಿಸಿದರು.
ಜಲಜೀವನ ಮಿಷನ್ ಯೋಜನೆಗೆ ಅಗೆಯಲಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸಾರ್ವಜನಿಕರು ಪ್ರತಿದಿನವೂ ಸಂಬಂಧಪಟ್ಟ ಇಲಾಖೆಗೆ ಕರೆ ಮಾಡುತ್ತಾರೆ. ಆದರೆ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.
ಇನ್ನು ಕೆಲವು ಭಾಗಗಳಲ್ಲಿ ಕಾಮಗಾರಿ ಮುಕ್ತಾಯವಾಗಿದ್ದರೆ, ಮತ್ತೆ ಕೆಲವು ಗ್ರಾಮಗಳಲ್ಲಿ ಕೆಲಸವೇ ಪ್ರಾರಂಭವಾಗಿಲ್ಲ. ಮತ್ತೆ ಕೆಲವು ಕಡೆ ಗುತ್ತಿಗೆದಾರರ ಸಮಸ್ಯೆಯಿಂದ ಮರು ಟೆಂಡರ್ ಅನ್ನೂ ಕರೆಯಲಾಗಿದೆ. ಗ್ರಾಮೀಣ ಪ್ರದೇಶದ ಮನೆಗಳಿಗೆ ನೀರು ಸರಬರಾಜು ಮಾಡಲು 100ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಆದರೆ, ಕೆಲವು ಕೊಳವೆ ಬಾವಿಗಳಲ್ಲಿ ನೀರು ಸಿಗದಿರುವುದರಿಂದ ಮತ್ತೆ ಕೊಳವೆ ಬಾವಿಗಳನ್ನು ಕೊರೆಸಬೇಕು. ಗ್ರಾಮಗಳಲ್ಲಿರುವ ಹಳೆಯ ಓವರ್ ಹೆಡ್ ಟ್ಯಾಂಕ್‌ಗಳನ್ನು ದುರಸ್ತಿ ಮಾಡಿ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯ ಕಾಮಗಾರಿಯು ತಾಲ್ಲೂಕಿನಲ್ಲಿ ಕಳೆದ ಆರು ವರ್ಷಗಳಿಂದ ಆಮೆ ಗತಿಯಲ್ಲಿ ನಡೆಯುತ್ತಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ತಾಲ್ಲೂಕು ಜನರ ಆಗ್ರಹವಾಗಿದೆ.
ಕಾಮಗಾರಿ ಮುಗಿಯುತ್ತ ಬಂದಿದೆ. ಆದರೆ ಗುಂಡಿಗಳನ್ನು ಮುಚ್ಚುವುದು ಮಾತ್ರ ಬಾಕಿಯಿದೆ. ಗುತ್ತಿಗೆದಾರರು ಆದಷ್ಟು ಬೇಗ ಮುಚ್ಚಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
-ಶ್ರೀನಿವಾಸ್ ಗ್ರಾಮಸ್ಥ ವಾಟದಹೊಸಹಳ್ಳಿ
ಮಣ್ಣು ಹಾಕಿ ಗುಂಡಿ ಭರ್ತಿ!
ಜಲಜೀವನ ಮಿಷನ್ ಕಾಮಗಾರಿ ಪ್ರಾರಂಭವಾದಾಗ ಅಗೆದ ಗುಂಡಿಗಳನ್ನು ಈವರೆಗೂ ಮುಚ್ಚಿಲ್ಲ. ಈ ಕುರಿತು ಗುತ್ತಿಗೆದಾರರನ್ನು ಪ್ರಶ್ನಿಸಿದ್ದಕ್ಕೆ ಅವರು ಗುಂಡಿಗಳನ್ನು ವ್ಯವಸ್ಥಿತವಾಗಿ ಮುಚ್ಚದೆ ಗುಂಡಿಗಳಿಗೆ ಮಣ್ಣು ತುಂಬಿದ್ದು ಅಲ್ಲಿ ಮತ್ತೆ ಗುಂಡಿಗಳು ಬಿದ್ದಿವೆ. ಮಕ್ಕಳು ವೃದ್ಧರು ವಾಹನ ಸವಾರರು ಓಡಾಡುವುದಕ್ಕೆ ಕಷ್ಟವಾಗಿದೆ. ಗಂಗಾಧರಪ್ಪ ದೊಡ್ಡಕುರುಗೋಡು ಗ್ರಾಮಸ್ಥ ಗ್ರಾಮಗಳು ಶೀಘ್ರವೇ ಗುಂಡಿಮುಕ್ತ ಜಲಜೀವನ ಮಿಷನ್ ಯೋಜನೆಯ ಕಾಮಗಾರಿ ಮುಗಿದ ತಾಲ್ಲೂಕಿನ ಎಲ್ಲ ಗ್ರಾಮಗಳ ಪೈಕಿ 40 ಗ್ರಾಮಗಳಲ್ಲಿ ಮಾತ್ರ ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ. ಕಳೆದ ಆರು ತಿಂಗಳುಗಳಿಂದ ಗುತ್ತಿಗೆದಾರರು ಕಾಮಗಾರಿಗಳನ್ನು ಕೈಗೆತ್ತಿಕೊಂಡಿರಲಿಲ್ಲ. ಹೀಗಾಗಿ ಗುಂಡಿ ಮುಚ್ಚಲು ಸಾಧ್ಯವಾಗಿಲ್ಲ. ಇದೀಗ ನಿಗದಿತ ಸಮಯದಲ್ಲಿ ಗುಂಡಿಗಳನ್ನು ಮುಚ್ಚಲು ಸೂಚಿಸಿ ಎಲ್ಲ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಎಲ್ಲ ಗುತ್ತಿಗೆದಾರರು ಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಾರಂಭ ಮಾಡಿದ್ದಾರೆ. ಗ್ರಾಮಗಳು ಶೀಘ್ರವೇ ಗುಂಡಿಮುಕ್ತವಾಗಲಿವೆ. ಶ್ರೀನಿವಾಸ್ ಎಇಇ ಸಣ್ಣ ನೀರಾವರಿ ಇಲಾಖೆ
27 ಗ್ರಾಮಗಳಲ್ಲಿ ಇನ್ನೂಆರಂಭವಾಗದ ಕಾಮಗಾರಿ
ತಾಲ್ಲೂಕಿನ 296 ಗ್ರಾಮಗಳ ಈ ಪೈಕಿ 86 ಗ್ರಾಮಗಳಲ್ಲಿ ಜಲಜೀವನ ಮಿಷನ್ ಕಾಮಗಾರಿ ಈಗಾಗಲೇ ಕಾಮಗಾರಿ ಮುಕ್ತಾಯವಾಗಿದೆ. ಇನ್ನುಳಿದ 183 ಗ್ರಾಮಗಳಲ್ಲಿ ಕಾಮಗಾರಿ ನಡೆಯುತ್ತಲೇ ಇದೆ. ಆದರೆ 27 ಗ್ರಾಮಗಳಲ್ಲಿ ಈವರೆಗೆ ಕಾಮಗಾರಿಯೇ ಆರಂಭವಾಗಿಲ್ಲ ಎಂಬುದು ತಿಳಿದುಬಂದಿದೆ. ಗ್ರಾಮಗಳ ಪ್ರತಿ ಮನೆಗೂ ನೇರವಾಗಿ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಒಟ್ಟಾರೆ 144 ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲು ಗುರಿ ಹಾಕಿಕೊಳ್ಳಲಾಗಿದೆ. ಈ ಪೈಕಿ 45 ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಪ್ರಗತಿಯಲ್ಲಿದ್ದು 50 ಓವರ್ ಹೆಡ್ ಟ್ಯಾಂಕ್‌ಗಳ ಕಾಮಗಾರಿ ಮುಕ್ತಾಯವಾಗಿದೆ. ಆದರೆ 40 ಟ್ಯಾಂಕ್‌ಗಳ ಕಾಮಗಾರಿ ಇನ್ನಷ್ಟೇ ಕೈಗೊಳ್ಳಬೇಕಿದೆ. ಓವರ್ ಹೆಡ್ ಟ್ಯಾಂಕ್‌ಗಳಿಗೆ ನೀರು ತುಂಬಿಸಲು ಒಟ್ಟಾರೆ 100ಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಈ ಪೈಕಿ 14 ಕೊಳವೆಬಾವಿಗಳಲ್ಲಿ ನೀರು ಸಿಕ್ಕಿಲ್ಲ ಎಂಬುದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.