ADVERTISEMENT

ಜಿಲ್ಲೆಯಾದ್ಯಂತ ಜನತಾ ಕರ್ಫ್ಯೂ ಜಾರಿ

ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 3:21 IST
Last Updated 28 ಏಪ್ರಿಲ್ 2021, 3:21 IST
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಆರ್.ಲತಾ ಹಾಗೂ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಆರ್.ಲತಾ ಹಾಗೂ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು   

ಚಿಕ್ಕಬಳ್ಳಾಪುರ: ಕೋವಿಡ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ರಾಜ್ಯದಲ್ಲಿ 14 ದಿನ ಕೋವಿಡ್ ಕರ್ಫ್ಯೂವನ್ನು ಏ 26ರಿಂದ ಜಾರಿ ಮಾಡಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ತಹಶೀಲ್ದಾರ್, ತಾಲ್ಲೂಕು ವೈದ್ಯಾಧಿಕಾರಿಗಳು ಹಾಗೂ ತಾಲ್ಲೂಕು ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದರು.

ಮಂಗಳವಾರ ರಾತ್ರಿ 9 ಗಂಟೆಯಿಂದ ಕರ್ಫ್ಯೂ ಜಾರಿಯಾಗಿರುವುದರಿಂದ ಬೆಂಗಳೂರಿನಿಂದ ಸಾಕಷ್ಟು ಜನರು ಜಿಲ್ಲೆಗೆ ಹಿಂತಿರುಗಿದ್ದಾರೆ. ಇವರನ್ನು ನಗರ ಪ್ರದೇಶದಲ್ಲಿ ಆಯಾ ವಾರ್ಡ್ ಮತ್ತು ಗ್ರಾಮೀಣ ಭಾಗದಲ್ಲಿ ಆಯಾ ಗ್ರಾಮಗಳಲ್ಲಿ ರಚಿಸಿರುವ ನೋಡಲ್ ಅಧಿಕಾರಿಗಳು ಮತ್ತು ತಂಡದವರು ಭೇಟಿ ಮಾಡಿ ಅವರನ್ನು ಕನಿಷ್ಠ ಒಂದು ವಾರವಾದರೂ ಪ್ರತ್ಯೇಕವಾಗಿ ಹೋಂ ಐಸೋಲೇಷನ್‌ನಲ್ಲಿ ಇರುವಂತೆ ತಿಳಿ ಹೇಳಬೇಕು. ಪಾಸಿಟಿವ್ ಬಂದಿದ್ದರೆ ಅವರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಬೇಕು ಎಂದು ಸೂಚಿಸಿದರು.

ADVERTISEMENT

ಜಿಲ್ಲೆಯಾದ್ಯಂತ ಮೇ 12ರ ಬೆಳಿಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ದಿನಸಿ, ಹಾಲು ಮತ್ತು ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 10ಕ್ಕೆ ಎಲ್ಲರೂ ವ್ಯಾಪಾರ ಸ್ಥಗಿತಗೊಳಿಸಬೇಕು. ನಂತರ ಸಾರ್ವಜನಿಕರು ಮನೆ ಬಿಟ್ಟು ಹೊರಬರಬಾರದು ಎಂದರು.

ಸರ್ಕಾರಿ ಸಾರಿಗೆ ಬಸ್‌ಗಳು ಸೇರಿ ಯಾವುದೇ ಸಾರಿಗೆ ಸಂಚಾರ ಇರುವುದಿಲ್ಲ. ಅಂತರರಾಜ್ಯ ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಗಾರ್ಮೆಂಟ್ಸ್ ಹೊರತುಪಡಿಸಿ ಉಳಿದ ಎಲ್ಲ ಉತ್ಪಾದನಾ ಉದ್ಯಮಗಳ ಕಾರ್ಯಾಚರಣೆಗೆ ಅವಕಾಶ ನೀಡಲಾಗಿದೆ. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ನೋಡಲ್ ಅಧಿಕಾರಿಗಳಾಗಿರುತ್ತಾರೆ. ಕೋವಿಡ್ ಹರಡದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಕರ್ಫ್ಯೂ ವೇಳೆ ಸಾರ್ವಜನಿಕರು ಮನೆ ಬಿಟ್ಟು ಹೊರಗೆ ಬರಬಾರದು ಎಂಬ ಕಾರಣಕ್ಕೆ ಆಟೊ ಸೇರಿದಂತೆ ಯಾವುದೇ ವಾಹನಗಳ ಸಂಚಾರಕ್ಕೂ ಆವಕಾಶ ಇರುವುದಿಲ್ಲ. ಆಸ್ಪತ್ರೆಗೆ ಹೋಗುವ ವಾಹನಗಳಿಗೆ ರಿಯಾಯಿತಿ ಇದೆ. ಕೈಗಾರಿಕಾ ಘಟಕಗಳು ಕಾರ್ಮಿಕರನ್ನು ಒಯ್ಯಲು ತಮ್ಮದೇ ವಾಹನ ಮಾಡಿಕೊಳ್ಳಬೇಕು. ವಾಹನಗಳಲ್ಲಿ ಕಾರ್ಖಾನೆ ಸಿಬ್ಬಂದಿ ಗುರುತಿನ ಚೀಟಿ ಹೊಂದಿರಬೇಕು ಎಂದು ಹೇಳಿದರು.

ಕಟ್ಟಡ ಕಾಮಗಾರಿಗಳಿಗೆ ಅವಕಾಶ: ಕಾರ್ಮಿಕರು ಒಂದೇ ಕಡೆ ವಾಸವಿದ್ದು, ಕಟ್ಟಡ ಕಾಮಗಾರಿಗಳನ್ನು ಮಾಡಬಹುದು. ಆದರೆ ಕಾರ್ಮಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚಾರ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲೆಯ ಅಂತರರಾಜ್ಯ ಗಡಿ ಮತ್ತು ಜಿಲ್ಲಾ ಗಡಿಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗುವುದು. ಇಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಳಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.