ADVERTISEMENT

ದಲಿತರ ಕಾಲ್ನಡಿಗೆ ಜಾಥಾ

ದಲಿತ ಮುಖಂಡ ಲಕ್ಷ್ಮೀನರಸಿಂಹಪ್ಪ ಕೊಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 3:42 IST
Last Updated 7 ಮಾರ್ಚ್ 2021, 3:42 IST
ಗುಡಿಬಂಡೆ ತಾಲ್ಲೂಕಿನ ದಲಿತ ಮುಖಂಡ ಬೋಗೇನಹಳ್ಳಿ ಲಕ್ಷ್ಮೀನರಸಿಂಹಪ್ಪ ಅವರ ಕೊಲೆ ಖಂಡಿಸಿ ನಡೆದ ಬಹಿರಂಗ ಸಭೆಯಲ್ಲಿ ದಲಿತ ಮುಖಂಡರು ಬೇಡಿಕೆಗಳ ಕರಪತ್ರವನ್ನು ಬಿಡುಗಡೆಗೊಳಿಸಿದರು
ಗುಡಿಬಂಡೆ ತಾಲ್ಲೂಕಿನ ದಲಿತ ಮುಖಂಡ ಬೋಗೇನಹಳ್ಳಿ ಲಕ್ಷ್ಮೀನರಸಿಂಹಪ್ಪ ಅವರ ಕೊಲೆ ಖಂಡಿಸಿ ನಡೆದ ಬಹಿರಂಗ ಸಭೆಯಲ್ಲಿ ದಲಿತ ಮುಖಂಡರು ಬೇಡಿಕೆಗಳ ಕರಪತ್ರವನ್ನು ಬಿಡುಗಡೆಗೊಳಿಸಿದರು   

ಗುಡಿಬಂಡೆ: ವ್ಯವಸ್ಥಿತ ಸಂಚು ರೂಪಿಸಿ ದಲಿತ ಮುಖಂಡನ ಕೊಲೆ ಮಾಡಲಾಗಿದೆ. ಇದರ ಹಿಂದೆ ಪೊಲೀಸರ ನಿರ್ಲಕ್ಷ್ಯವೂ ಇದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎನ್. ಮುನಿಸ್ವಾಮಿ ದೂರಿದರು.

ತಾಲ್ಲೂಕಿನ ದಲಿತ ಮುಖಂಡ ಬೋಗೇನಹಳ್ಳಿ ಲಕ್ಷ್ಮೀನರಸಿಂಹಪ್ಪ ಅವರ ಕೊಲೆ ಖಂಡಿಸಿ ಬೋಗೇನಹಳ್ಳಿಯಿಂದ ಗುಡಿಬಂಡೆವರೆಗೆ ಕಾಲ್ನಡಿಗೆ ಜಾಥಾ ಮೂಲಕ ಆಗಮಿಸಿ ಶನಿವಾರ ಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಜ. 6ರಂದು ಗ್ರಾಮದ ಶ್ರೀರಾಮರೆಡ್ಡಿ ಮತ್ತು ಲಕ್ಷ್ಮೀನರಸಿಂಹಪ್ಪ ನಡುವೆ ಗಲಾಟೆ ನಡೆದಿತ್ತು. ಗುಡಿಬಂಡೆ ಪೊಲೀಸ್ ಠಾಣೆಗೆ ದೂರು ಮತ್ತು ಪ್ರತಿದೂರು ನೀಡಿದ್ದರು. ಪೊಲೀಸರು ಇಬ್ಬರು ನೀಡಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಇಬ್ಬರಿಗೂ ಸೂಕ್ತ ತಿಳಿವಳಿಕೆ ನೀಡಬೇಕಿತ್ತು. ಪೊಲೀಸರು ಮುಂಜಾಗ್ರತೆವಹಿಸಿದ್ದರೆ ಒಂದು ಜೀವ ಉಳಿಸಬಹುದಿತ್ತು ಎಂದು ಹೇಳಿದರು.

ADVERTISEMENT

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಿ.ಜಿ. ಗಂಗಪ್ಪ ಮಾತನಾಡಿ, ದೇಶದಲ್ಲಿ ಪ್ರತಿದಿನ ಜಾತಿ ದೌರ್ಜನ್ಯ, ಕೊಲೆಗಳು ನಿರಂತರವಾಗಿ ನಡೆಯುತ್ತಿವೆ. ಜಿಲ್ಲೆಯ ಪೊಲೀಸರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇದಕ್ಕೆ ಕಾರಣವೇನು, ರಾಜಕಾರಣಿಗಳ ಒತ್ತಡ ಇದೆಯೇ ಎಂದು ಪ್ರಶ್ನಿಸಿದರು.

ಪೊಲೀಸರಿಗೆ ದಲಿತರು, ದಲಿತ ಚಳವಳಿಗಳ ಬಗ್ಗೆ ಅರಿವಿಲ್ಲ. ದಲಿತರಿಗೆ ನ್ಯಾಯ ಕೊಡಿಸುವಲ್ಲಿ ಸ್ಥಳೀಯ ಪೊಲೀಸರು ವಿಫಲರಾಗಿದ್ದಾರೆ. ದಲಿತರ ಬಗ್ಗೆ ಏಕೆ ಇಷ್ಟೊಂದು ನಿರ್ಲಕ್ಷ್ಯ. ಪೊಲೀಸ್ ಠಾಣೆಗಳು ಸಾರ್ವಜನಿಕರ ಸೇವಾ ಕೇಂದ್ರಗಳಾಗಿವೆ. ಅವು ವ್ಯಾಪಾರಿ ಕೇಂದ್ರಗಳಲ್ಲ. ಸೇವಾ ಕೇಂದ್ರಗಳಾಗಿಯೇ ಉಳಿಸಿಕೊಳ್ಳಿ ಎಂದು ಸಲಹೆ
ನೀಡಿದರು.

ದಸಂಸ ರಾಜ್ಯ ಸಂಚಾಲಕ ವಿ. ನಾಗರಾಜು, ಮಾಜಿ ರಾಜ್ಯ ಸಂಚಾಲಕ ರಾಜಾಕಾಂತ್, ಭಾರತೀಯ ಅಂಬೇಡ್ಕರ್ ಸೇನೆಯ ಆಂಧ್ರಪ್ರದೇಶದ ಅಧ್ಯಕ್ಷ ಪಿಟಿಎಂ ಶಿವಪ್ರಸಾದ್ ಮಾತನಾಡಿದರು. ದಸಂಸ ಸಾಂಸ್ಕೃತಿಕ ಸಂಚಾಲಕ ಗೊಲ್ಲಹಳ್ಳಿ ಶಿವಪ್ರಸಾದ್, ಜಾನಪದ ಕಲಾವಿದ ಮುನಿರೆಡ್ಡಿ ಹಾಗೂ ದಲಿತ ಸಂಘಟನೆಯ ಕಲಾ ತಂಡದಿಂದ ಕ್ರಾಂತಿಗೀತೆಗಳನ್ನು
ಹಾಡಲಾಯಿತು.

ಹಕ್ಕೊತ್ತಾಯ

ಲಕ್ಷ್ಮೀನರಸಿಂಹಪ್ಪ ಕೊಲೆ ಪ್ರಕರಣದ ವಿಚಾರಣೆಯನ್ನು ವಿಶೇಷ ನ್ಯಾಯಾಲಯದಲ್ಲಿ ನಡೆಸಬೇಕು. ಸರ್ಕಾರಿ ಅಭಿಯೋಜಕರನ್ನು ನೇಮಿಸಬೇಕು. ತ್ವರಿತವಾಗಿ ವಿಚಾರಣೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು. ದಲಿತರ ಮೇಲಿನ ದೌರ್ಜನ್ಯ ತಡೆಯಲು ಈಗಿರುವ ಜಿಲ್ಲಾ ಮೇಲುಸ್ತುವಾರಿ ಸಮಿತಿಯನ್ನು ವಿಸರ್ಜಿಸಬೇಕು. ದಲಿತ ಸಂಘಟನೆಯ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಬೇಕು. ಸತತವಾಗಿ 5 ವರ್ಷಗಳಿಂದ ಒಂದೇ ಠಾಣೆಯಲ್ಲಿ ಇರುವ ಪೊಲೀಸರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜೀವಿಕ ಜಿಲ್ಲಾ ಮಹಿಳಾ ಸಂಚಾಲಕಿ ರತ್ನಮ್ಮ, ದಸಂಸ ಜಿಲ್ಲಾ ಸಂಚಾಲಕ ಬಿ.ವಿ. ವೆಂಕಟರಮಣ, ಬಿ.ವಿ. ಆನಂದ್, ಸಹ ಸಂಚಾಲಕ ಜಿ. ನಾರಾಯಣಸ್ವಾಮಿ, ಖಜಾಂಚಿ ಗಂಗಪ್ಪ, ಮುಖಂಡರಾದ ಶ್ರೀನಿವಾಸಪುರ ಮುನಿವೆಂಕಟಪ್ಪ, ಕೆಜಿಎಫ್ ಎಚ್. ಮುನಿವೆಂಕಟಪ್ಪ, ವೈ.ಎ. ಆದಿನಾರಾಯಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.