
ಚಿಂತಾಮಣಿ: ಜೆಡಿಎಸ್ ಸ್ಥಾಪನೆಯಾಗಿ 25 ವರ್ಷ ಕಳೆಯುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 29ರಂದು ಚಿಂತಾಮಣಿ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ತಿಳಿಸಿದರು.
ಜೆಡಿಎಸ್ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಮುಂದಿನ ವರ್ಷದಲ್ಲಿ ಸಾಲು ಸಾಲು ಚುನಾವಣೆಗಳು ಬರಲಿವೆ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆ, ಎಪಿಎಂಸಿ, ಹಾಲು ಉತ್ಪಾದಕರ ಸಂಘ, ಸೊಸೈಟಿಗಳು ಸೇರಿದಂತೆ ಹಲವು ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ನಿಷ್ಟಾವಂತ ಕಾರ್ಯಕರ್ತರನ್ನು ಗೆಲ್ಲಿಸಿ ಅವರಿಗೂ ಅಧಿಕಾರ ಹಂಚಬೇಕಾಗಿದೆ. ಪಕ್ಷದ ಮುಂಬರುವ 50 ವರ್ಷಗಳ ನಿರಂತರ ಗೆಲುವು ಸಾಧಿಸುವಂತಹ ಕಾರ್ಯವನ್ನು ಮಾಡಬೇಕು ಎಂದು ಸೂಚಿಸಿದರು.
ಸಚಿವ ಡಾ.ಎಂ.ಸಿ ಸುಧಾಕರ್ ಕ್ಷೇತ್ರದ ಅಭಿವೃದ್ಧಿ, ಜನತೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಒಳಿತಾಗಿ ಎಂಜಿನಿಯರಿಂಗ್ ಕಾಲೇಜು ಮಾಡಿದಂತಿಲ್ಲ. ಬದಲಾಗಿ ನಾನು ಅಸೂಯೆಪಡಲಿ ಎಂದು ಮಾಡಿರುವುದಾಗಿ ಹೇಳಿರುವುದು ಸಂತೋಷವಾಗಿದೆ. ನನ್ನ ಭಯದಿಂದಲಾದರೂ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿಪಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಚಿಂತಾಮಣಿಯಲ್ಲಿ ಎಂ. ಕೃಷ್ಣಾರೆಡ್ಡಿ ಇರುವುದರಿಂದ ಸಾವಿರಾರು ಕೋಟಿ ಹಣ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇಲ್ಲವೆಂದರೆ ಸಚಿವರು ಬೆಂಗಳೂರಿನಲ್ಲಿ ನಿದ್ದೆಗೆ ಜಾರುತ್ತಿದ್ದರು. ಸಚಿವರು ಮತ್ತಷ್ಟು ಹಣ ತಂದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡಲಿ. ಮಸ್ತೇನಹಳ್ಳಿ ಕೈಗಾರಿಕೆ ಪ್ರದೇಶದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಒಂದು ಮರಕ್ಕೆ ₹24 ಸಾವಿರ ಪರಿಹಾರ ಒದಗಿಸುತ್ತಿದ್ದು, ಆದರೆ ಈಗ ಅದು ₹10 ಸಾವಿರಕ್ಕೂ ಕಡಿಮೆ ಪರಿಹಾರವನ್ನು ನೀಡಿ ರೈತರಿಗೆ ಅನ್ಯಾಯ ಮಾಡುತ್ತಿರುವುದು ನಾನಲ್ಲ ಎಂದು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆ ಮಾಜಿ ಸದಸ್ಯ ಅಗ್ರಹಾರ ಮುರಳಿ ಮಾತನಾಡಿ, ಕಾರ್ಯತಂತ್ರವನ್ನು ರೂಪಿಸುವುದೇ ಬೇರೆ, ಕಾರ್ಯಕರ್ತರ ಪಡೆಯನ್ನು ಹೊಂದಿರುವುದೇ ಬೇರೆ. ಕಳೆದ 20 ವರ್ಷಗಳಿಂದ ಚುನಾವಣಾ ಚಾಣಕ್ಯನಂತಾಗಿದ್ದ ಪ್ರಶಾಂತ್ ಭೂಷಣ್ ಬಿಹಾರದ ಚುನಾವಣೆಯಲ್ಲಿ ತಮ್ಮ ಸ್ವಂತ ಪಕ್ಷವನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮುಕ್ತ ಮುನಿಯಪ್ಪ, ಗೌರಿಬಿದನೂರು ನರಸಿಂಹಮೂರ್ತಿ, ಸೀಕಲ್ ಶ್ರೀನಿವಾಸಗೌಡ ಮಾತನಾಡಿದರು. ರಾಜ್ಯ ಯುವ ಘಟಕದ ಉಪಾಧ್ಯಕ್ಷ ಸಂತೇಕಲ್ಲಹಳ್ಳಿ ಪ್ರಭಾಕರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ದಿನ್ನಮಿಂದಹಳ್ಳಿ ಬೈರಾರೆಡ್ಡಿ, ಅಬ್ದುಗುಂಡು ಶ್ರೀನಿವಾಸರೆಡ್ಡಿ, ದೊಡ್ಡಬೊಮ್ಮನಹಳ್ಳಿ ವೆಂಕಟರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುಡೇ ಶ್ರೀನಿವಾಸರೆಡ್ಡಿ, ದೇವಳಂ ಶಂಕರ್, ಟಮೋಟ್ ಗೌಸ್, ಮಂಜುನಾಥ್, ವೆಂಕಟರವಣಪ್ಪ, ಶ್ರೀನಿವಾಸರೆಡ್ಡಿ, ಪ್ರಕಾಶ್.ಎಸ್.ಸಿ ಘಟಕ ಜಿಲ್ಲಾಧ್ಯಕ್ಷ ಮಾದಮಂಗಲ ಅಂಜಿ, ಅಬ್ದುಲ್ ಸಮದ್, ಅಲ್ಲಾಬಕಾಶ್, ಜಮೀಲ್ ಪಾಷಾ, ಶಫಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.