ADVERTISEMENT

ಜೆಟ್ಲಿ ಅಗಲಿಕೆ ತುಂಬಲಾರದ ನಷ್ಟ

ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಅವರ ನಿಧನಕ್ಕೆ ಬಿಜೆಪಿ ಜಿಲ್ಲಾ ಘಟಕದ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 13:58 IST
Last Updated 24 ಆಗಸ್ಟ್ 2019, 13:58 IST
ಕಾರ್ಯಕ್ರಮದಲ್ಲಿ ಮೌನಾಚರಣೆ ಮೂಲಕ ಅರುಣ್ ಜೇಟ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮೌನಾಚರಣೆ ಮೂಲಕ ಅರುಣ್ ಜೇಟ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.   

ಚಿಕ್ಕಬಳ್ಳಾಪುರ: ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಅವರ ನಿಧನಕ್ಕೆ ನಗರದಲ್ಲಿ ಶನಿವಾರ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿದರು.


ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್, ‘ಅರುಣ್‌ ಜೇಟ್ಲಿ ಅವರದು ಸಾಧನೆಯ ಬದುಕು. ರಾಷ್ಟ್ರ ರಾಜಕಾರಣದಲ್ಲಿ ಅವರು ಬದ್ಧತೆಯಿಂದ ಕಾರ್ಯನಿರ್ವಹಿಸಿದ ವ್ಯಕ್ತಿಯಾಗಿದ್ದರು. ಅವರ ಸಾವು ಬಿಜೆಪಿಗೆ ತುಂಬಲಾರದ ನಷ್ಟ’ ಎಂದು ಹೇಳಿದರು.


‘ವಿದ್ಯಾರ್ಥಿ ಜೀವನದಲ್ಲಿ ಹೋರಾಟದ ಗುಣ ಮೈಗೂಡಿಸಿಕೊಂಡಿದ್ದ ಅರುಣ್ ಜೆಟ್ಲಿ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 19 ತಿಂಗಳು ಸೆರೆವಾಸ ಅನುಭವಿಸಿದ್ದರು. ವೃತ್ತಿಯಿಂದ ವಕೀಲರಾಗಿದ್ದ ಅವರು ಬಿಜೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಿ, ಮಾಹಿತಿ ಮತ್ತು ಪ್ರಸಾರ ಇಲಾಖೆ, ಕಾನೂನು ವ್ಯವಹಾರ ಇಲಾಖೆ, ರಕ್ಷಣೆ, ಹಣಕಾಸು ಸಚಿವರಾಗಿ ಸಲ್ಲಿಸಿದ ಸೇವೆ ಗಣನೀಯವಾದದ್ದು’ ಎಂದು ತಿಳಿಸಿದರು.

ADVERTISEMENT


‘ಒಂದು ಕಾಲದಲ್ಲಿ ಬಿಜೆಪಿ ಕಟ್ಟಲು ನಿಷ್ಠೆಯಿಂದ ದುಡಿದ ಅಟಲ್ ಬಿಹಾರಿ ವಾಜಪೇಯಿ, ಮನೋಹರ್ ಪರಿಕ್ಕರ್, ಸುಷ್ಮಾ ಸ್ವರಾಜ್, ಅನಂತ್ ಕುಮಾರ್, ಅರುಣ್ ಜೇಟ್ಲಿಯಂತಹ ಹಿರಿಯರು ಅಗಲಿಕೆ ಬಿಜೆಪಿ ದೊಡ್ಡ ನಷ್ಟ ಉಂಟು ಮಾಡಿದೆ’ ಎಂದರು.


ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಲಕ್ಷ್ಮೀ ನಾರಾಯಣ ಗುಪ್ತಾ, ತಾಲ್ಲೂಕು ಘಟಕದ ಅಧ್ಯಕ್ಷ ಅಗಲಗುರ್ಕಿ ಅಗಲಗುರ್ಕಿ ಚಂದ್ರಶೇಖರ್‌, ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ, ನಗರ ಘಟಕದ ಅಧ್ಯಕ್ಷ ಮಂಜುನಾಥ್, ಯುವ ಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕಿರಣ್, ಜಿಲ್ಲಾ ವಕ್ತಾರ ಲಕ್ಷ್ಮಿಪತಿ, ನಗರ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.