ADVERTISEMENT

ಚಿಕ್ಕಬಳ್ಳಾಪುರ: ಆ.29ರಂದು ಉದ್ಯೋಗ ಮೇಳ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 9:36 IST
Last Updated 25 ಆಗಸ್ಟ್ 2021, 9:36 IST
ಆರ್.ಲತಾ
ಆರ್.ಲತಾ   

ಚಿಕ್ಕಬಳ್ಳಾಪುರ: ಜನರ ಜೀವ ಎಷ್ಟು ಮುಖ್ಯವೊ ಜೀವನವೂ ಅಷ್ಟೇ ಮುಖ್ಯ. ಕೊರೊನಾ ಹೊಡೆತದಿಂದ ಕಳೆದ ಒಂದೂವರೆ ವರ್ಷಗಳಿಂದ ಜನಜೀವನದಲ್ಲಿ ಸಾಕಷ್ಟು ಏರುಪೇರಾಗಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ಜೀವನೋಪಾಯ ಕಲ್ಪಿಸಿಕೊಟ್ಟು ದುಡಿಯುವ ಆತ್ಮವಿಶ್ವಾಸ ಹೆಚ್ಚಿಸುವ ಹಿನ್ನೆಲೆಯಲ್ಲಿ ಆ.29ರಂದು ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ
ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳ ಜತೆ ವಿಡಿಯೊ ಸಂವಾದ ‌ನಡೆಸಿದರು.

ಜಿಲ್ಲೆಯಲ್ಲಿ ಈಗ ಕೊರೊನಾ ಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ. ಜಿಲ್ಲೆಯ ಯುವ ಸಮುದಾಯಕ್ಕೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಕೌಶಲಾಭಿವೃದ್ದಿ ಕಚೇರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಮಿನಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ನಗರದ ಎಂ.ಜಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮೇಳ ನಡೆಯಲಿದೆ ಎಂದರು.

ADVERTISEMENT

ಮೇಳದಲ್ಲಿ ವಿಸ್ಟ್ರಾನ್, ಮಿಶೋ, ಸ್ಪಂದನ ಸ್ಫೂರ್ತಿ, ಡೆಲಿವರಿ ಡಾಟ್ ಕಾಮ್, ಎಚ್‌ಡಿಎಫ್‌ಸಿ, ಟಾಪೆ, ಮುತೂಟ್ ಪಿನ್ ಕಾರ್ಪ್, ಪ್ರೀಕಾಟ್, ಎಕ್ಸಟ್ರೀಮ್ ಸಾಪ್‌ಟೆಕ್, ಎಜಾಕ್ಸ್ ಎಂಜಿನಿಯರ್ಸ್, ಅಕ್ಸಾ ಇನ್‌ಪೂಟೆಕ್, ಸೇರಿದಂತೆ 15 ರಿಂದ 20 ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿವೆ. ಸುಮಾರು 900 ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಉತ್ತೀರ್ಣ ಅಥವಾ ಅನುತ್ತೀರ್ಣ, ಪಿಯುಸಿ, ಪದವಿ, ಐಟಿಐ, ಡಿಪ್ಲೊಮ, ಎಂಜಿನಿಯರಿಂಗ್, ಸ್ನಾತಕೋತ್ತರ ಪದವಿ ಉತ್ತೀರ್ಣರಾದ 18 ರಿಂದ 35 ವರ್ಷ ಒಳಗಿರುವ ಯುವಕ, ಯುವತಿಯರು, ಅಂಕಪಟ್ಟಿ, ಆಧಾರ್‌ಕಾರ್ಡ್ ಹಾಗೂ ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನದಲ್ಲಿ ಉದ್ಯೋಗಮೇಳದ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.

ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶವನ್ನು ಜಿಲ್ಲಾಡಳಿತ ಹೊಂದಿದೆ. ಗ್ರಾಮೀಣ ವಿದ್ಯಾವಂತ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚು ಉದ್ಯೋಗ ಮೇಳಗಳನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.