ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಫೆಬ್ರುವರಿ 28ರಂದು ಉದ್ಯೋಗ ಮೇಳ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 14:02 IST
Last Updated 25 ಫೆಬ್ರುವರಿ 2020, 14:02 IST
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ಯೋಗೇಶ್‌ಗೌಡ ಅವರು ಉದ್ಯೋಗ ಮೇಳದ ಭಿತ್ತಿಪತ್ರ ಬಿಡುಗಡೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ಯೋಗೇಶ್‌ಗೌಡ ಅವರು ಉದ್ಯೋಗ ಮೇಳದ ಭಿತ್ತಿಪತ್ರ ಬಿಡುಗಡೆ ಮಾಡಿದರು.   

ಚಿಕ್ಕಬಳ್ಳಾಪುರ: ‘ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ಮತ್ತು ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ ವಿವಿಧ ತಾಂತ್ರಿಕ ಹುದ್ದೆಗಳಿಗೆ ಉದ್ಯೋಗ ಭರವಸೆಯ ಮೆರೆಗೆ ವೃತ್ತಿ ಕೌಶಲ ತರಬೇತಿ ಆಯ್ಕೆಗಾಗಿ ಫೆಬ್ರುವರಿ 28 ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ಯೋಗೇಶ್‌ಗೌಡ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನ ಅಪೋಲೋ ಮೆಡಿಸ್ಕಿಲ್ಸ್, ಎಂ.ಎಸ್. ರಾಮಯ್ಯ ಆಸ್ಪತ್ರೆ, ನಾರಾಯಣ ಹೃದಯಾಲಯ ಖಾಸಗಿ ಆಸ್ಪತ್ರೆಗಳಲ್ಲಿ ವಿವಿಧ ತಾಂತ್ರಿಕ ಹುದ್ದೆಗಳು ಖಾಲಿ ಇವೆ. ಉದ್ಯೋಗ ಮೇಳದಲ್ಲಿ ಆ ಹುದ್ದೆಗಳನ್ನು ತರಬೇತಿ ಅಭ್ಯರ್ಥಿಗಳಿಗೆಂದು ಮೀಸಲಿಡುವ ಭರವಸೆ ನೀಡಲಾಗುತ್ತದೆ. ಆಸಕ್ತರು ಅರ್ಜಿಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಪಡೆದು, ಉದ್ಯೋಗಮೇಳದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಗೆ ಸಲ್ಲಿಸಬೇಕು’ ಎಂದು ಹೇಳಿದರು.

‘ಅಪೊಲೋ ಆಸ್ಪತ್ರೆಯಲ್ಲಿ ಫಾರ್ಮಸಿ ಸಹಾಯಕರು ಹುದ್ದೆಗೆ (ವಿಜ್ಞಾನ ವಿಭಾಗದಲ್ಲಿ ಪಿಯುಸಿ ವಿದ್ಯಾರ್ಹತೆ ಹೊಂದಿದವರಿಗೆ), ಆಪರೇಷನ್ ಎಕ್ಸಿಕ್ಯೂಟಿವ್‌ ಹುದ್ದೆಗೆ (ಪಿಯುಸಿ, ಪದವಿ ವಿದ್ಯಾರ್ಹತೆ ಹೊಂದಿದವರು) ಹಾಗೂ ಟಿಐಎಆರ್‍ಎ ಎಎನ್‍ಎಂ, ಜಿಎನ್‍ಎಂ ಹುದ್ದೆಗಳಿಗೆ ತಲಾ ಮೂರು ತಿಂಗಳ ತರಬೇತಿ ನೀಡಲಾಗುತ್ತದೆ. ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಕಾರ್ಡಿಕ್ ಕೇರ್ ಟೆಕ್ನಿಶಿಯನ್ ಪ್ರೋಗ್ರಾಮ್(ಸಿಸಿಟಿ) ಎಎನ್‍ಎಂ ಹುದ್ದೆಗೆ 6 ತಿಂಗಳ ಕಾಲ ತರಬೇತಿಯನ್ನು ನೀಡಲಾಗುತ್ತದೆ’ ಎಂದರು.

ADVERTISEMENT

‘ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಅರವಳಿಕೆ ತಂತ್ರಜ್ಞ ಹುದ್ದೆಗೆ (ವಿಜ್ಞಾನ ವಿಭಾಗದಲ್ಲಿ ಪಿಯುಸಿ) 8 ತಿಂಗಳ ತರಬೇತಿ, ಆಸ್ಪತ್ರೆಯ ನಿರ್ವಹಣೆ ಹಾಗೂ ರೋಗಿಗಳ ಸೇವೆ ಹುದ್ದೆಗೆ (ಯಾವುದೇ ಪದವಿ) 7 ತಿಂಗಳ ತರಬೇತಿ, ನರ್ಸ್ (ಜಿಎನ್‍ಎಂ, ಬಿಎಸ್ಸಿ ನರ್ಸಿಂಗ್) 3 ತಿಂಗಳ ತರಬೇತಿ, ಕ್ರಿಟಿಕಲ್ ಕೇರ್ ಆಸಿಸ್ಟೆಂಟ್ ಹುದ್ದೆಗೆ ಕಾರ್ಡಿಕ್ ಐಟಿಯುಜಿಎನ್‍ಎಂ, ಬಿಎಸ್ಸಿ ನಸಿಂಗ್ 9 ತಿಂಗಳು, ಕ್ರಿಟಿಕಲ್ ಕೇರ್ ಆಸಿಸ್ಟೆಂಟ್ ಹುದ್ದೆಗೆ ಜನರಲ್ ಐಟಿಯುಜಿಎನ್‍ಎಂ, ಬಿಎಸ್ಸಿ ನಸಿಂಗ್, 9 ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ’ ಎಂದು ಹೇಳಿದರು.

‘ಈ ತರಬೇತಿಗಳ ಅವಧಿಯಲ್ಲಿ ಉಚಿತವಾಗಿ ಊಟ, ವಸತಿಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜತೆಗೆ ಶಿಷ್ಯವೇತನ ನೀಡಲಾಗುತ್ತದೆ’ ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹರೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.