ADVERTISEMENT

ಪತ್ರಕರ್ತರು ವೃತ್ತಿ ಧರ್ಮ ಎತ್ತಿ ಹಿಡಿಯಿರಿ

ಪತ್ರಿಕಾ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಸಮಾರಂಭದಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ ಜಯರಾಂ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಜುಲೈ 2018, 13:48 IST
Last Updated 15 ಜುಲೈ 2018, 13:48 IST
ಕಾರ್ಯಕ್ರಮದಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರೋತ್ಸಾಹ ಧನ ಚೆಕ್‌ ವಿತರಿಸಲಾಯಿತು
ಕಾರ್ಯಕ್ರಮದಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರೋತ್ಸಾಹ ಧನ ಚೆಕ್‌ ವಿತರಿಸಲಾಯಿತು   

ಚಿಕ್ಕಬಳ್ಳಾಪುರ: ‘ಪತ್ರಿಕಾ ರಂಗದಲ್ಲಿರುವರಿಗೆ ಪ್ರಜ್ಞೆ, ಬದ್ಧತೆ, ಪ್ರಾಮಾಣಿಕತೆ ಮುಖ್ಯ. ಪತ್ರಕರ್ತರು ವೃತ್ತಿ ಧರ್ಮ ಎತ್ತಿ ಹಿಡಿದು ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸ ಮಾಡಬೇಕು’ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ ಜಯರಾಂ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈ ಹಿಂದೆ ಪತ್ರಿಕಾ ಧರ್ಮ ಅನ್ನುವುದು ಇತ್ತು. ಆದರೆ ಅದು ಇದೀಗ ಉದ್ಯಮವಾಗಿ ಬದಲಾಗಿದೆ. ಇದರಿಂದ ಇತ್ತೀಚಿನ ದಿನಗಳಲ್ಲಿ ವೃತ್ತಿ ಧರ್ಮ ಕಾಣುತ್ತಿಲ್ಲ. ಪತ್ರಿಕಾ ರಂಗದ ಆರಂಭದ ದಿನಗಳಲ್ಲಿ ಇದ್ದ ಪ್ರಜ್ಞೆ, ಬದ್ಧತೆ, ಪ್ರಾಮಾಣಿಕತೆ ಮಾಯಾವಾಗುತ್ತಿರುವುದು ಬೇಸರದ ಸಂಗತಿ. ಪತ್ರಕರ್ತರು ತಮ್ಮ ಜವಾಬ್ದಾರಿ ಅರಿತು ವೃತ್ತಿ ನಿಷ್ಠೆಯನ್ನು ಕಾಪಾಡಿಕೊಂಡು ಸಮಾಜದ ತಪ್ಪುಗಳನ್ನು ತಿದ್ದುವ ಕಾರ್ಯಕ್ಕೆ ಮುಂದಾಗಬೇಕು’ ಎಂದು ಹೇಳಿದರು.

ADVERTISEMENT

‘ಇವತ್ತಿನ ಸಾಮಾಜಿಕ ಜಾಲ ತಾಣಗಳ ಎದುರು ಮಾದ್ಯಮ ಮಾಯಾಲೋಕವಾಗಿವಾಗುತ್ತಿದೆ. ಪತ್ರಿಕೋದ್ಯಮ ಇವತ್ತು ತನ್ನತನವನ್ನು ಉಳಿಸಿಕೊಳ್ಳಲು ನ್ಯಾಯಯುತ ವರದಿಗಳನ್ನು ಪ್ರಕಟಿಸಬೇಕು. ಓದುಗರು ವಸ್ತುನಿಷ್ಠ ವರದಿಗಳನ್ನು ಪಡೆಯುವುದು ಹಕ್ಕು ಹೊಂದಿರುತ್ತಾರೆ. ಪ್ರತಿಯೊಬ್ಬ ಪತ್ರಕರ್ತ ತಮ್ಮ ವೃತ್ತಿ ಧರ್ಮವನ್ನು ನಿಷ್ಠೆಯಿಂದ ಪಾಲಿಸಬೇಕು’ ಎಂದು ಹೇಳಿದರು.

ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರೂಪಸಿ ರಮೇಶ್ ಮಾತನಾಡಿ, ‘ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುವ ಇಂದಿನ ಯುವ ಜನಾಂಗ ತಮ್ಮ ನಡವಳಿಕೆ, ಸ್ಪಂದನೆ ಹಾಗೂ ಭಾಷೆಯ ಮೇಲೆ ಹೆಚ್ಚಿನ ಗಮನವಿಡಬೇಕು. ಪತ್ರಕರ್ತರು ಸಮಗ್ರ ಜ್ಞಾನ ಹೊಂದುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ತಾತ್ಸಾರ , ಉದಾಸೀನತೆ ಭಾವನೆ ಬೆಳೆಸಿಕೊಳ್ಳಬಾರದು. ಉತ್ತಮ ಸಮಾಜ ನಿರ್ಮಿಸಲು ಪ್ರತಿಯೊಬ್ಬರ ಜೀವನ ಸುಂದರವಾಗಿಸುವ ವೃತ್ತಿ ಧರ್ಮವನ್ನು ನಿಭಾಯಿಸಬೇಕು’ ಎಂದರು.

ಇದೇ ವೇಳೆ ಹಿರಿಯ ಪತ್ರಕರ್ತರಾದ ಪುಟ್ಟರಾಜು, ಡಿ.ಎನ್.ಕೃಷ್ಣಾರೆಡ್ಡಿ, ಎಸ್.ವಿ.ರವಿಪ್ರಕಾಶ್, ಕೆ.ವಿ.ಮುನೇಗೌಡ, ವಿ.ಡಿ.ಗಣೇಶ್, ಎಸ್.ಎನ್.ಅಂಜಿನಪ್ಪ, ಪತ್ರಿಕಾ ವಿತರಕರಾದ ಲಕ್ಷ್ಮೀನಾರಾಯಣ್, ನವೀನ್ ಕುಮಾರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಜಿಲ್ಲೆಯ ಪ್ರತಿಭಾನ್ವಿತ ಹಾಗೂ ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 40 ಮಂದಿ ಪತ್ರಕರ್ತರ ಮಕ್ಕಳಿಗೆ ₨2 ಲಕ್ಷ ಪ್ರೋತ್ಸಾಹ ಧನ ಚೆಕ್‌ ವಿತರಿಸಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮುನಿಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ವಿನ್ಸ್‌ಸ್ಟನ್ ಕೆನಡಿ, ಖಜಾಂಚಿ ಹರಿಹರ ಕುಮಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ವೀರಶೇಖರ್ ಹಾಗೂ ಜಿಲ್ಲೆಯ ತಾಲ್ಲೂಕು ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.