ADVERTISEMENT

ನರೇಗಾವಲ್ಲ, ಮುಖ್ಯಮಂತ್ರಿ ಕುರ್ಚಿ ಬಚಾವೊ ಆಂದೋಲನ: ಡಾ.ಕೆ.ಸುಧಾಕರ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 10:54 IST
Last Updated 22 ಫೆಬ್ರುವರಿ 2026, 10:54 IST
   

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷವು ಚಿಕ್ಕಬಳ್ಳಾಪುರದಲ್ಲಿ ಫೆ.23ರಂದು ಹಮ್ಮಿಕೊಂಡಿರುವುದು ನರೇಗಾ ಬಚಾವೊ ಆಂದೋಲನವಲ್ಲ, ಅದು ಮುಖ್ಯಮಂತ್ರಿ ಕುರ್ಚಿ ಬಚಾವೊ ಆಂದೋಲನ ಎಂದು ಸಂಸದ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯಿಂದ ನರೇಗಾ ಬಚಾವೊ ಆಂದೋಲನ ಪ್ರಾರಂಭಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಸಿ.ಎಂ ಬದಲಾವಣಿ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ದುಗುಡ ಆರಂಭವಾಗಿದೆ. ಆದ್ದರಿಂದ ಜಾತಿ ತಂದಿದ್ದಾರೆ, ಬಿಜೆಪಿ ಮೇಲೆ ನಾನಾ ವಿಚಾರದಲ್ಲಿ ಗೂಬೆ ಕೂರಿಸುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಅವರು ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದಾರೆ. ಜೊತೆಗೆ ಅತಿ ಹೆಚ್ಚು ಸಾಲ ಮಾಡಿದವರೂ ಮತ್ತು ಜನರ ಮೇಲೆ ಸಾಲದ ಹೊರೆ ಹೇರಿದ ಕೀರ್ತಿ ಸಹ ಇವರಿಗೆ ಸಲ್ಲುತ್ತದೆ ಎಂದರು.

ADVERTISEMENT

ಕಳೆದ ಮೂರು ವರ್ಷಗಳಲ್ಲಿ ಬಯಲು ಸೀಮೆಯ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರಕ್ಕೆ ಕಾಂಗ್ರೆಸ್ ಕೊಡುಗೆ ಏನು? ಎತ್ತಿನಹೊಳೆ ನೀರು ಇಂದಿಗೂ ಈ ಜಿಲ್ಲೆಗಳಿಗೆ ಹರಿದಿಲ್ಲ. ಎಚ್‌.ಎನ್.ವ್ಯಾಲಿ, ಕೆ.ಸಿ ವ್ಯಾಲಿ ಕೊಳಚೆ ನೀರನ್ನು ಮೂರು ಹಂತದಲ್ಲಿ ಸಂಸ್ಕರಿಸುವುದಾಗಿ ಬಿಜೆಪಿ ಸರ್ಕಾರ ಬಜೆಟ್ ನಲ್ಲಿ ಘೋಷಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಮೌನವಹಿಸಿದೆ. ಕಾಂಗ್ರೆಸ್ ಸಮಾವೇಶದಲ್ಲಿ ಈ ಬಗ್ಗೆ ಮುಖ್ಯಮಂತ್ರಿ ಉತ್ತರ ನೀಡಬೇಕು ಎಂದು ಆಗ್ರಹಿಸಿದರು‌.

ಇಂದಿರಾಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ ಹೆಸರನ್ನು ದೇಶದ 400 ಸಂಸ್ಥೆಗಳಿಗೆ ಇಟ್ಟಿದ್ದಾರೆ. ದೇಶಕ್ಕೆ ಸಂಜಯ್ ಗಾಂಧಿ ಕೊಡುಗೆ ಏನು? ಮದ್ಯಪಾನದ ವಿರುದ್ಧ ಗಾಂಧೀಜಿ‌ ಅವರು ಹೋರಾಟ ನಡೆಸಿದರು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗಲ್ಲಿ ಗಲ್ಲಿಗಳಲ್ಲಿ ಮದ್ಯದ ಅಂಗಡಿಗಳನ್ನು ಆರಂಭಿಸಲು ಪರವಾನಗಿ ಕೊಡುತ್ತಿದೆ. ಇದು ಕಾಂಗ್ರೆಸ್ ನವರು ಮಹಾತ್ಮ ಗಾಂಧೀಜಿ ಅವರಿಗೆ ನೀಡುವ ಗೌರವ ಎಂದು ವಾಗ್ದಾಳಿ ನಡೆಸಿದರು‌.

ಸತ್ತವರ ಹೆಸರಿನಲ್ಲಿ ಬಿಲ್, ಕಾಮಗಾರಿ ಮಾಡದೆಯೇ ನರೇಗಾ ಯೋಜನೆಯಲ್ಲಿ ಹಣ ಪಡೆದಿದ್ದಾರೆ. ಇದರಿಂದ ಕಾಂಗ್ರೆಸ್ ಪುಡಾರಿಗಳಿಗೆ ಅನುಕೂಲ ಆಗಿದೆ.

ನಿಜವಾಗಿ ಕೆಲಸ ಮಾಡಿದವರಿಗೆ ಆರು ತಿಂಗಳಾದರೂ ಕೂಲಿಯ ಹಣ ನೀಡುತ್ತಿರಲಿಲ್ಲ. ನರೇಗಾ ಯೋಜನೆಯಡಿ 22 ವರ್ಷಗಳಿಂದ ನಡೆದಿದ್ದ ಲೋಪವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸರಿಪಡಿಸುತ್ತಿದ್ದಾರೆ ಎಂದರು.

ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 15 ವಿಧಾನಸಭಾ ಕ್ಷೇತ್ರಗಳ ಪೈಕಿ 2028ರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಗೆಲುವು 12 ಕ್ಷೇತ್ರದಲ್ಲಿ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.