
ಚಿಂತಾಮಣಿ: ತಾಲ್ಲೂಕಿನ ಕೈವಾರ ಗ್ರಾಮದಲ್ಲಿ ಯೋಗಿನಾರೇಯಣ ಮಠ ಮತ್ತು ಬೆಂಗಳೂರಿನ ಎಂ.ಎಸ್. ರಾಮಯ್ಯ ವೈದ್ಯಕೀಯ ಆಸ್ಪತ್ರೆ ಆಶ್ರಯದಲ್ಲಿ ಇತ್ತೀಚೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಯಿತು.
ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್. ಜಯರಾಂ ಮಾತನಾಡಿ, ‘ಆರೋಗ್ಯವೇ ನಿಜವಾದ ಸಂಪತ್ತು. ಉತ್ತಮ ಆರೋಗ್ಯ ಹೊಂದಿದವನೇ ದೊಡ್ಡ ಶ್ರೀಮಂತ. ನಾವು ಆರೋಗ್ಯವಾಗಿದ್ದರೆ, ಏನು ಬೇಕಾದರೂ ಸಾಧಿಸಿ, ಸಂಪತ್ತು ಗಳಿಸಬಹುದು’ ಎಂದರು.
ಮಠದ ವ್ಯವಸ್ಥಾಪಕ ಕೆ. ಲಕ್ಷ್ಮಿನಾರಾಯಣ ಮಾತನಾಡಿ, ಪ್ರತಿ ತಿಂಗಳ ನಾಲ್ಕನೇ ಭಾನುವಾರ ತಾತಯ್ಯನವರ ಮಠದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯುತ್ತದೆ. ಪ್ರತಿಯೊಬ್ಬರು ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಶಿಬಿರದಲ್ಲಿ ಮಕ್ಕಳ ರೋಗ, ಸಾಮಾನ್ಯ ರೋಗ, ಕಣ್ಣಿನ ತಪಾಸಣೆ, ಕ್ಯಾನ್ಸರ್ ರೋಗ ಪತ್ತೆಹಚ್ಚುವಿಕೆ, ಸ್ತ್ರೀ ರೋಗ, ಕಿವಿ, ಮೂಗು, ಗಂಟಲು ರೋಗ, ಎಲುಬು ಕೀಲುಗಳ ರೋಗ, ಚರ್ಮ ರೋಗ, ಹಲ್ಲಿನ ತಪಾಸಣೆ, ಬಿಪಿ ಶುಗರ್ ತಪಾಸಣೆ, ಇ ಸಿ ಜಿ ಹಾಗೂ ಸಾಮಾನ್ಯ ಶಸ್ತ್ರ ಚಿಕಿತ್ಸೆ ವಿಭಾಗಗಳ ಕೌಂಟರ್ ತೆರೆದು ತಜ್ಞ ವೈದ್ಯರು ರೋಗಿಗಳಿಗೆ ತಪಾಸಣೆ ಮಾಡಿದರು.
ಸಾಮಾನ್ಯ ರೋಗಗಳಿಗೆ ಸ್ಥಳದಲ್ಲಿ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆ ಅವಶ್ಯವಿರುವ ರೋಗಿಗಳಿಗೆ ಬೆಂಗಳೂರು ರಾಮಯ್ಯ ಆಸ್ಪತ್ರೆಯಲ್ಲಿ ರಿಯಾಯತಿ ದರದಲ್ಲಿ ಶಸ್ತ್ರಚಿಕಿತ್ಸೆ ಮತ್ತು ತಂತ್ರಜ್ಞಾನ ಆಧಾರಿತ ಯಂತ್ರಗಳ ಮೂಲಕ ತಪಾಸಣೆ ಮಾಡುವ ಭರವಸೆ ನೀಡಿದರು.
ಎಂ.ಎಸ್. ರಾಮಯ್ಯ ಆಸ್ಪತ್ರೆ ವೈದ್ಯರಾದ ಡಾ. ಅಂಜನ್, ಡಾ. ವೀಣಾ, ಡಾ.ಗರಿಮಾ, ಡಾ.ಕಿರಣ್, ಡಾ. ವೀರೇಶ್, ಡಾ. ಮನಸ್ವಿನಿ ಮತ್ತು ಡಾ. ನಮಿತಾ ಚಂಡೆರ್ ರೋಗಿಗಳಿಗೆ ಆರೋಗ್ಯ ತಪಾಸಣೆ ಮಾಡಿದರು. ಆಪ್ತ ಸಮಾಲೋಚಕರಾದ ಯಮುನಾ ಮತ್ತು ಆನಂದ್ ಸೂಕ್ತ ಸಲಹೆ, ಸೂಚನೆ ನೀಡಿದರು.
ಕೈವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳ 150ಕ್ಕೂ ಹೆಚ್ಚು ಜನರು ಆರೋಗ್ಯ ಶಿಬಿರದಲ್ಲಿ ತಪಾಸಣೆ ಮಾಡಿಸಿ ಸದುಪಯೋಗ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.