ಬಾಗೇಪಲ್ಲಿ: ಪಟ್ಟಣದ ಡಿಸಿಸಿ ಬ್ಯಾಂಕ್ ಮುಂದೆ ಶನಿವಾರ ಮಾಜಿ ಯೋಧರು, ಕಾರ್ಗಿಲ್ ಯೋಧ ದಿವಂಗತ ರಫೀಕ್ ವುಲ್ಲಾ ಕುಟುಂಬಸ್ಥರು, ಸಾರ್ವಜನಿಕರು ಕಾರ್ಗಿಲ್ ವಿಜಯೋತ್ಸವ ಆಚರಿಸಿದರು.
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ತನ್ನ ಸಹ ಯೋಧರನ್ನು ರಕ್ಷಣೆ ಮಾಡಿದ ದಿ. ರಫೀಕ್ ವುಲ್ಲಾ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಕಾರ್ಗಿಲ್ ವಿಜಯ ದಿನದ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ಹಂಚಿದರು.
ಮಾಜಿ ಯೋಧರ ತಾಲ್ಲೂಕು ಸಂಘದ ಅಧ್ಯಕ್ಷ ಅಮರನಾಥಬಾಬು ಮಾತನಾಡಿ, ಕಾರ್ಗಿಲ್ ವೀರ ಮರಣ ಹೊಂದಿದ ಯೋಧ ಬಿ.ಎ. ರಫೀವುಲ್ಲಾ ಅವರ ದೇಶ ಸೇವೆ ಸ್ಮರಣೀಯ. ಡಿಸಿಸಿ ಬ್ಯಾಂಕ್‌ನ ರಸ್ತೆಗೆ ಪುರಸಭೆಯವರು ದಿ. ಮಾಜಿ ಯೋಧ ರಫೀಕ್ ವುಲ್ಲಾ ಅವರ ಸ್ಮರಣಾರ್ಥವಾಗಿ ರಫೀಕ್‌ವುಲ್ಲಾ ರಸ್ತೆ ಎಂದು ಅಧಿಕೃತವಾಗಿ ಹೆಸರು ನಾಮಕರಣ ಮಾಡಬೇಕು. ರಫೀಕ್ ವುಲ್ಲಾ ಅವರ ಕುಟುಂಬಕ್ಕೆ ಉಚಿತವಾಗಿ ನಿವೇಶನ, ಮನೆ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಅಪ್ರತಿಮ ಶೌರ್ಯ, ದೇಶಭಕ್ತಿಯ ಸ್ಫೂರ್ತಿಯೊಂದಿಗೆ ದೇಶದ ಶತ್ರುಗಳನ್ನು ಸದೆಬಡಿದು, ಭಾರತಾಂಬೆಯ ಘನತೆ ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿ ಅಮರರಾದ ಕಾರ್ಗಿಲ್ ಯುದ್ಧದ ವೀರ ಹುತಾತ್ಮ ಯೋಧರಿಗೆ ಕಾರ್ಗಿಲ್ ವಿಜಯ ದಿನದ ಅಂಗವಾಗಿ ಕಾರ್ಗಿಲ್ ವಿಜಯ ದಿನವನ್ನಾಗಿ ಆಚರಿಸಲಾಗಿದೆ ಎಂದು ಗಣ್ಯರು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ಅಧ್ಯಕ್ಷ ಎ.ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತ ನರಸಿಂಹ ನಾಯ್ಡು, ಸದಸ್ಯ ಎ.ನಂಜುಂಡಪ್ಪ, ಶ್ರೀನಿವಾಸ ರೆಡ್ಡಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಿಜಾಮುದ್ದೀನ್ (ಬಾಬು), ಮಂಜುನಾಥ, ಮಹಮದ್ ಎಸ್.ನೂರುಲ್ಲಾ, ಇರ್ಫಾನ್, ಕಾರಕೂರು ಮಂಜುನಾಥರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.