ADVERTISEMENT

ತಲಾದಾಯ ಹೆಚ್ಚಳಕ್ಕೆ ‘ಗ್ಯಾರಂಟಿ’ ಕಾರಣ: ಎಚ್.ಎಂ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 7:03 IST
Last Updated 4 ಸೆಪ್ಟೆಂಬರ್ 2025, 7:03 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಗ್ಯಾರಂಟಿ ಯೋಜನೆ ಕುರಿತ ಕಾರ್ಯಾಗಾರವನ್ನು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಎಚ್‌.ಎಂ.ರೇವಣ್ಣ ಉದ್ಘಾಟಿಸಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಗ್ಯಾರಂಟಿ ಯೋಜನೆ ಕುರಿತ ಕಾರ್ಯಾಗಾರವನ್ನು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಎಚ್‌.ಎಂ.ರೇವಣ್ಣ ಉದ್ಘಾಟಿಸಿದರು   

ಚಿಕ್ಕಬಳ್ಳಾಪುರ: ದೇಶದಲ್ಲಿಯೇ ಅತಿ ಹೆಚ್ಚಿನ ತಲಾದಾಯ ಹೊಂದಿರುವ ರಾಜ್ಯ ಕರ್ನಾಟಕ. ಹೀಗೆ ತಲಾದಾಯ ಹೆಚ್ಚಳವಾಗಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಎಚ್.ಎಂ. ರೇವಣ್ಣ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಹಯೋಗದಲ್ಲಿ ಬುಧವಾರ ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದಲ್ಲಿ ಹೆಚ್ಚು ಜಿಎಸ್‌ಟಿ ಸಂಗ್ರಹಿಸಿ ಕೊಡುವ ಎರಡನೇ ರಾಜ್ಯ ಕರ್ನಾಟಕ. ಈ ಎಲ್ಲಾ ಸಾಧನೆಗೆ ಗ್ಯಾರಂಟಿ ಯೋಜನೆಗಳಿಂದ ಆಗುತ್ತಿರುವ ಆರ್ಥಿಕ ಸಂಚಾರವೇ ಕಾರಣ. ಜನರಲ್ಲಿ ಆರ್ಥಿಕ ಚೈತನ್ಯ ಹೆಚ್ಚಿಸಿ ಉತ್ತಮ ಬದುಕಿಗೆ ಕಾರಣವಾಗುತ್ತಿದೆ ಎಂದರು.

ADVERTISEMENT

ಮುಖ್ಯವಾಗಿ ಮಹಿಳಾ ಸಬಲೀಕರಣದಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶದ ಗಮನ ಸೆಳೆಯುತ್ತಿವೆ. ಅದರಲ್ಲೂ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಒದಗಿಸಿಕೊಟ್ಟಿರುವ ಶಕ್ತಿ ಯೋಜನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ ಎಂದು ಹೇಳಿದರು.

ಯೋಜನೆಗಳು ಯಶಸ್ವಿಯಾಗಿ ಮುಂದುವರೆದಿವೆ. ಬಡವರು, ಮಧ್ಯಮ ವರ್ಗದ ಜನರ ಕುರಿತು ಸರ್ಕಾರದ ಕಳಕಳಿಗೆ ಇದು ಕನ್ನಡಿಯಾಗಿವೆ. ವಿರೋಧ ‍ಪಕ್ಷಗಳ ನಾಯಕರು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ ಈಗ ನಮ್ಮ ಸರ್ಕಾರದ ಮಾದರಿಯನ್ನೇ ಅವರು ಬೇರೆ ಕಡೆಗಳಲ್ಲಿ ಅನುಸರಿಸುತ್ತಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡಿ,  ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ, ಭ್ರಷ್ಟಾಚಾರ ಇಲ್ಲದೆ ಯಾವುದಾದರು ಯೋಜನೆಗಳು ದೇಶದಲ್ಲಿ ಬಡವರು, ಮಧ್ಯಮ ವರ್ಗದವರಿಗೆ ತಲುಪಿವೆ ಎಂದರೆ ಅವು ರಾಜ್ಯದ ಗ್ಯಾರಂಟಿ ಯೋಜನೆಗಳು ಎಂದರು.

ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳ ಕುರಿತು ವಿಧಾನಸಭೆ ಚುನಾವಣೆ ಸಮಯದಲ್ಲಿ ಸುಳ್ಳುಗಳನ್ನು ಹೇಳಿದರು. ಲೋಕಸಭೆ ಚುನಾವಣೆ ನಂತರ ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದರು. ಆದರೆ ಈ ಯಾವ ಕೆಲಸಗಳು ಆಗಲಿಲ್ಲ. ಪಕ್ಷಾತೀತ, ಜಾತ್ಯತೀತವಾಗಿ ಯೋಜನೆಗಳನ್ನು ನೀಡಲಾಗಿದೆ ಎಂದರು.

ಕೇವಲ ಗ್ಯಾರಂಟಿ ಯೋಜನೆಗಳಿಗೆ ಅಷ್ಟೇ ಅಲ್ಲದೆ ಅಭಿವೃದ್ಧಿ ಕಾರ್ಯಗಳಿಗೂ ಹಣ ವೆಚ್ಚ ಮಾಡಲಾಗಿದೆ. ಈ ವರ್ಷ ₹ 4 ಲಕ್ಷ ಕೋಟಿಗೂ ಅಧಿಕ ಬಜೆಟ್ ಮಂಡಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

ಮುಂದಿನ ತಿಂಗಳು ಶಿಡ್ಲಘಟ್ಟ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮತ್ತು  ಚಿಕ್ಕಬಳ್ಳಾಪುರದಲ್ಲಿ ಅಂತರರಾಷ್ಟ್ರೀಯ ಹೂವಿನ ಮಾರುಕಟ್ಟೆಗೆ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸುವರು ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಸೂರಜ್ ಹೆಗ್ಗಡೆ ಮಾತನಾಡಿ, ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಅನುಕೂಲವಾಗಿದ್ದರೆ ಅದರ ಬಹಿರಂಗವಾಗಿ, ಮುಕ್ತವಾಗಿ ಹೇಳಿಕೊಳ್ಳಿ. ಆಗ ಇಂತಹ ಮಹೋನ್ನತ ಯೋಜನೆಗಳು  ಯಾವುದೇ ತೊಡಕಿಲ್ಲದೆ ಮುಂದುವರಿಯಲು ಅನುಕೂಲ ಆಗುತ್ತದೆ. ಸರ್ಕಾರಕ್ಕೆ ಸ್ಪೂರ್ತಿ ದೊರೆಯುತ್ತದೆ ಎಂದು ಫಲಾನುಭವಿಗಳಲ್ಲಿ ಮನವಿ ಮಾಡಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಯಲುವಳ್ಳಿ ಎನ್. ರಮೇಶ್ ಮಾತನಾಡಿ, ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಇತರ ರಾಜ್ಯಗಳು ಕರ್ನಾಟಕದ ಈ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ವಿರೋಧಿಸುತ್ತಿದ್ದವರು ಸಹ ಒಪ್ಪಿಕೊಂಡಿರುವಂತಹ ಯೋಜನೆಗಳು ಯಾವುದಾದರೂ ದೇಶದಲ್ಲಿ ಇದ್ದರೆ ಅವು  ಗ್ಯಾರಂಟಿ ಯೋಜನೆಗಳು ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ್, ಪಾಟೀಲ್, ದಿನೇಶ್ ಗೊಳಿಗೌಡ, ಜಿಲ್ಲಾ ಉಸ್ತುವಾರಿ  ಕಾರ್ಯದರ್ಶಿ ಎನ್.ಮಂಜುಳಾ , ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ.ವೈ. ನವೀನ್ ಭಟ್‌, ಜಿಲ್ಲಾ  ಪೊಲೀಸ್ ವರಿಷ್ಠಾ ಧಿಕಾರಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಜಿಲ್ಲಾಧಿಕಾರಿ  ಡಾ.ಎನ್. ಭಾಸ್ಕರ್, ಜಿಲ್ಲಾ ಮತ್ತು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.

ಕಾರ್ಯಾಗಾರದಲ್ಲಿ ಯೋಜನೆಗಳ ಕುರಿತು ನಾಟಕ ಪ್ರದರ್ಶಿಸಲಾಯಿತು

ಜಿಲ್ಲೆಯಲ್ಲಿ ಯೋಜನೆಗಳ ಸಾಧನೆ

ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 56.93 ಲಕ್ಷ ಫಲಾನುಭವಿಗಳನ್ನು ನೋಂದಣಿ ಮಾಡಿ ₹ 1138.64 ಕೋಟಿ ವೆಚ್ಚ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 3.22 ಲಕ್ಷ ಜನರನ್ನು ನೋಂದಣಿ ಮಾಡಿ ₹ 292.23 ಕೋಟಿ ರಿಯಾಯಿತಿ ನೀಡಲಾಗಿದೆ. ಶಕ್ತಿ ಯೋಜನೆಯಡಿ 7.77 ಕೋಟಿ ಉಚಿತ ಟಿಕೆಟ್ ಪಡೆದು ಜಿಲ್ಲೆಯ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿ 1.56 ಲಕ್ಷ ಕುಟುಂಬಗಳಿಗೆ ₹ 265.29 ಕೋಟಿ ವೆಚ್ಚದ ಪಡಿತರ ವಿತರಿಸಲಾಗಿದೆ. ಯುವನಿಧಿ ಯೋಜನೆಯಡಿ 3641 ಅಭ್ಯರ್ಥಿಗಳನ್ನು ನೋಂದಾಯಿಸಿ ಉದ್ಯೋಗ ಭತ್ಯೆ ನೀಡಲಾಗಿದೆ ಎಂದು ಡಾ.ಎಂ.ಸಿ.ಸುಧಾಕರ್ ವಿವರಿಸಿದರು.

ಸಾಂಸ್ಕೃತಿಕ ಕಲರವ
ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗ್ಯಾರಂಟಿ ಯೋಜನೆಗಳ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು. ಯೋಜನೆಗಳ ಅನುಷ್ಠಾನ ಇಲಾಖೆಗಳು ತೆರೆದಿದ್ದ ಜಾಗೃತಿ ಮಳಿಗೆಗಳಿಗೆ ಚಾಲನೆ ನೀಡಿದರು. ಶಕ್ತಿ ಯೋಜನೆಯಡಿ ನಿರ್ಮಿಸಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗಳ ವಿವಿಧ ಮಾದರಿಗಳ ಪ್ರಾತ್ಯಕ್ಷಿಕೆಗಳು ಗಮನ ಸೆಳೆದವು. ಗೌರಿಬಿದನೂರು ಗೌತಮ ಬುದ್ದ ಸಾಮಾಜಿಕ ಮತ್ತು ಸಾಂಸ್ಕೃತಿಕ ತಂಡ ಬೆಂಗಳೂರು ಸುರಭಿ ತಂಡದ ಮೂಲಕ ಗ್ಯಾರಂಟಿ ಯೋಜನೆಗಳ ಕುರಿತು ನಾಟಕ ಪ್ರದರ್ಶಿಸಲಾಯಿತು. ಮುಖವೀಣೆ ಅಂಜಿನಪ್ಪ ಅವರು ನಡೆಸಿಕೊಟ್ಟ ಮುಖವೀಣೆ ವಾದನ ಕಾರ್ಯಕ್ರಮ ಗಮನ ಸೆಳೆಯಿತು. ದಿಕ್ಕ್ಸೂಚಿ ನಾಟ್ಯಾಲಯದಿಂದ ನೃತ್ಯ ಮುನಿರೆಡ್ಡಿ ಮತ್ತು ತಂಡಿದಂದ ಗ್ಯಾರಂಟಿ ಯೋಜನೆಯ ಪ್ರಚಾರ ಗೀತೆಗೆ ಮಾಡಿದ ನೃತ್ಯವು ಚಪ್ಪಾಳೆಗಿಟ್ಟಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.