ADVERTISEMENT

ಮಂಚೇನಹಳ್ಳಿಯಲ್ಲಿ 26ಕ್ಕೆ ಕಸಾಪ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 4:26 IST
Last Updated 10 ಫೆಬ್ರುವರಿ 2021, 4:26 IST
ಮಂಚೇನಹಳ್ಳಿಯಲ್ಲಿ ‌ನಡೆದ ಕಸಾಪ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಸಾಹಿತ್ಯಾಸಕ್ತರು
ಮಂಚೇನಹಳ್ಳಿಯಲ್ಲಿ ‌ನಡೆದ ಕಸಾಪ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಸಾಹಿತ್ಯಾಸಕ್ತರು   

ಗೌರಿಬಿದನೂರು: ತಾಲ್ಲೂಕಿನ ಮಂಚೇನಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಈ‌ ಬಾರಿಯ ಪ್ರಥಮ ತಾಲ್ಲೂಕು ‌ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಗಳವಾರ ಪದಾಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯನ್ನು ಉದ್ದೇಶಿಸಿ ‌ಮಾತನಾಡಿದ ಕಸಾಪ ಅಧ್ಯಕ್ಷ ಆರ್.ಜಿ.ಜನಾರ್ಧನಮೂರ್ತಿ, ‘ಈ ಭಾಗದ ಜನತೆಯ ಬಹುದಿನಗಳ ಕನಸಿನಂತೆ ಫೆ.26ರಂದು ಮಂಚೇನಹಳ್ಳಿಯಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಈ ತಾಲ್ಲೂಕಿನ ಸಾಂಸ್ಕೃತಿಕ ಹಬ್ಬದ ಆಚರಣೆಗಾಗಿ ಎಲ್ಲ ಪದಾಧಿಕಾರಿಗಳ ಸಹಕಾರದಿಂದ ಸಿದ್ಧತೆಗಳು ನಡೆಯುತ್ತಿವೆ. ಸಮ್ಮೇಳನವು ದಶಕಗಳ ಹೋರಾಟದ ಕನಸಾಗಿರುವ ಮಂಚೇನಹಳ್ಳಿ ನೂತನ ತಾಲ್ಲೂಕು ರಚನೆಯಾದ ಬಳಿಕ ಈ ಭಾಗದಲ್ಲಿ ‌ಜಾತ್ಯತೀತ ಮತ್ತು ಪಕ್ಷಾತೀತವಾಗಿ ನಡೆಯುತ್ತಿರುವ ಪ್ರಥಮ ಸಂಭ್ರಮಾಚರಣೆಯಾಗಲಿದೆ. ಇದಕ್ಕಾಗಿ ಎಲ್ಲರ ಸಹಕಾರ ಅತ್ಯಗತ್ಯವಾಗಿದ್ದು, ಅರೆಮಲೆನಾಡೆಂದೇ ಖ್ಯಾತಿ ಪಡೆದ ಈ ಭಾಗದ ನಾಡು, ನುಡಿ, ಭಾಷೆ ಹಾಗೂ ನಾಗರಿಕತೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಇದಾಗಿದೆ’ ಎಂದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯುವ ಈ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಗಣ್ಯರು‌ ಆಗಮಿಸಲಿದ್ದು, ವಿವಿಧ ಬಗೆಯ ಕಲೆ, ಸಾಹಿತ್ಯ, ಸಂಗೀತ ಮತ್ತು ಮನರಂಜನಾ ಕಾರ್ಯಗಳಿಗೆ ಸೂಕ್ತ ವೇದಿಕೆ ನಿರ್ಮಾಣವಾಗಲಿದೆ. ಇದೇ ವೇದಿಕೆಯಲ್ಲಿ ಸ್ಥಳೀಯ ಸಾಧಕರಿಗೆ ಸನ್ಮಾನ, ಪ್ರಚಲಿತ ವಿದ್ಯಮಾನಗಳು ಮತ್ತು ಜ್ವಲಂತ ‌ಸಮಸ್ಯೆಗಳ ಬಗ್ಗೆ ಚರ್ಚೆ, ಕವಿಗೋಷ್ಠಿ, 'ಚಿಗುರು' ಸ್ಮರಣ ಸಂಚಿಕೆಯ ಅನಾವರಣ, ದೇಶೀಯ ಕಲೆ, ಸಂಸ್ಕೃತಿ ಮತ್ತು ನಾಗರಿಕತೆಯ ಪ್ರದರ್ಶನ, ಕನ್ನಡ ಭಾಷಾ ಪುಸ್ತಕ ಮಳಿಗೆಗಳು, ಜನಪದ ಕಲೆಗಳ ಪ್ರದರ್ಶನ, ಜಾನಪದ ಹಾಡು ಮತ್ತು ನೃತ್ಯ ಸೇರಿದಂತೆ ಹಲವು ಆಯಾಮಗಳಲ್ಲಿ ಸಮ್ಮೇಳನವು ನಡೆಯಲಿದೆ. ಈ ಬಾರಿಯ ಸಮ್ಮೇಳನದ ಅಧ್ಯಕ್ಷರನ್ನಾಗಿ ವಿ.ವಿ.ಗೋಪಾಲ್ ರವರನ್ನು ಎಲ್ಲ ಪದಾಧಿಕಾರಿಗಳು ಆಯ್ಕೆ ಮಾಡಿದ್ದಾರೆ.

ADVERTISEMENT

ಸಮ್ಮೇಳನಕ್ಕೆ ಜಿಲ್ಲಾ ಉಸ್ತುವಾರಿ ‌ಸಚಿವರಾದ ಡಾ.ಕೆ.ಸುಧಾಕರ್, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಜಿ‌.ಕೆ.ಮಿಥುನ್ ಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಕೈವಾರ ಎನ್.ಶ್ರೀನಿವಾಸ್ ಸೇರಿದಂತೆ ಜಿಲ್ಲೆ, ತಾಲ್ಲೂಕು ಹಾಗೂ ಸ್ಥಳೀಯ ‌ಮಟ್ಟದ ಎಲ್ಲ ಅಧಿಕಾರಿ ವರ್ಗ ಭಾಗವಹಿಸಲಿದೆ ಎಂದು ಹೇಳಿದರು.

ಹಿರಿಯ ಸಾಹಿತಿಗಳಾದ ಸಾ.ನಾ.ಲಕ್ಷ್ಮಣಗೌಡ ರವರು ಮಾತನಾಡಿ, ‘ಮಂಚೇನಹಳ್ಳಿಯಲ್ಲಿ ನಡೆಯುತ್ತಿರುವ ಸಮ್ಮೇಳನವು ಇಡೀ ರಾಜ್ಯದಲ್ಲಿಯೇ ಹೆಸರು ಮಾಡುವಂತಿರಬೇಕು. ವೇದಿಕೆಯಲ್ಲಿ ಕನ್ನಡಗಾನ ಗಂಗೋತ್ರಿ, ಸ್ಥಳೀಯ ಗಾಯಕರ ಪ್ರತಿಭೆ ಪ್ರದರ್ಶನ ಸೇರಿದಂತೆ ಇತರ ಪ್ರತಿಭೆಗಳ ಅನಾವರಣಕ್ಕೆ ಅವಕಾಶವಿರುತ್ತದೆ. ಕಾರ್ಯಕ್ರಮದಲ್ಲಿ ಈ ಭಾಗದ ಎಲ್ಲ ಹಳೆ ವಿದ್ಯಾರ್ಥಿಗಳು, ವಾಣಿಜ್ಯೋದ್ಯಮಿಗಳು, ರೈತಾಪಿ ವರ್ಗದವರು, ದಲಿತರಪರ ಸಂಘಟನೆಯ ಪದಾಧಿಕಾರಿಗಳು, ಕಾರ್ಮಿಕರು, ಮಹಿಳಾ ಸಂಘಟನೆ, ಸ್ಥಳೀಯ ಸ್ತ್ರೀಶಕ್ತಿ ಸಂಘದವರು, ಕನ್ನಡಪರ ಸಂಘಟನೆಗಳು, ವಾಹನ ಚಾಲಕ ಸೇರಿದಂತೆ ಸಾಹಿತ್ಯಾಸಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕಾಗಿದೆ’ ಎಂದು ಹೇಳಿದರು.

ಕೆ.ಪ್ರಭಾನಾರಾಯಣಗೌಡ, ಎನ್.ಡಿ.ವೆಂಕಟಪ್ಪ, ಜಿ.ಎನ್.ಗಂಗಾಧರಯ್ಯ, ಎಚ್.ಎಸ್.ನಾರಾಯಣಪ್ಪ, ಮಹಮದ್ ಗೌಸ್, ಆನಂದ್, ಕೆ.ಸಿ.ಶಂಕರ್, ಕೆ.ಎಚ್.ಪದ್ಮರಾಜ್ ಜೈನ್, ಎಂ.ಆರ್.ಲಕ್ಷ್ಮಿನಾರಾಯಣ, ಶಿವಕುಮಾರ್, ಕಿರಣ್ ಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.