ADVERTISEMENT

ಯಡಿಯೂರಪ್ಪ ಕೇರಳ ಪ್ರವಾಸದಲ್ಲಿ ಅಡ್ಡಿ: ಕ್ಷಮೆಯಾಚನೆಗೆ ಕೇರಳ ಸರ್ಕಾರಕ್ಕೆ ಆಗ್ರಹ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರು ಅಡ್ಡಗಟ್ಟಿ, ಕಪ್ಪು ಬಾವುಟ ಪ್ರದರ್ಶನ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 11:22 IST
Last Updated 28 ಡಿಸೆಂಬರ್ 2019, 11:22 IST
ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾಕಾರರು ಕೇರಳದ ಮುಖ್ಯಮಂತ್ರಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಕೇರಳ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾಕಾರರು ಕೇರಳದ ಮುಖ್ಯಮಂತ್ರಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಕೇರಳ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.   

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇರಳ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕೆಲವು ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಯಡಿಯೂರಪ್ಪ ಅವರ ವಾಹನಕ್ಕೆ ತಡೆ ಒಡ್ಡಿ ಕಪ್ಪು ಬಾವುಟ ಪ್ರದರ್ಶಿಸಿರುವುದಕ್ಕೆ ಕೇರಳ ಸರ್ಕಾರ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಶ್ರೀಧರ್ ಬಾಬು, ‘ಕಳೆದ ವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇರಳ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಕೆಲ ಸಂಘಟನೆಗಳ ಕಾರ್ಯಕರ್ತರು ಅವರ ಕಾರಿಗೆ ತಡೆ ಒಡ್ಡಿ, ಕಪ್ಪು ಬಟ್ಟೆ ಪ್ರದರ್ಶಿಸಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿದೆ’ ಎಂದು ಹೇಳಿದರು.

‘ಕೇರಳದ ಲಕ್ಷಾಂತರ ಜನರು ಉದ್ಯೋಗ ಅರಸಿ ಬಂದು ಕರ್ನಾಟಕದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕೇರಳದ ಕೆಲವರ ಪುಂಡಾಟಿಕೆ ಕರ್ನಾಟಕದ ಜನರನ್ನು ಕೆರಳುವಂತೆ ಮಾಡಿದೆ. ಇಂತಹ ಘಟನೆಗಳಿಗೆ ಕೇರಳ ಸರ್ಕಾರ ತೆರೆಮರೆಯಲ್ಲಿ ಪ್ರೇರಣೆ ನೀಡುತ್ತಿರುವುದು ಖಂಡನೀಯ. ಕೂಡಲೇ ಕೇರಳ ಸರ್ಕಾರ ಕ್ಷಮೆಯಾಚನೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಆರ್.ಮಹೇಶ್, ನಂದಿ ಘಟಕದ ಅಧ್ಯಕ್ಷ ಕೆ.ಬಿ ಚೇತನ್, ಮುಖಂಡರಾದ ಚಂದ್ರಶೇಖರ್, ಶ್ರೀನಿವಾಸ್ ಗೌಡ, ಜಯಂತ್, ಮೂರ್ತಿ, ಲಕ್ಷ್ಮಿನಾರಾಯಣ, ಸುಬ್ರಮಣಿ, ಮನು, ಆದಿಲ್, ಶಿವಾನಂದ, ಬಾಬಾ, ಮೌಲಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.