
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಚಿಕ್ಕಬಳ್ಳಾಪುರದಲ್ಲಿ ಬಹುಮಾನ ವಿತರಿಸಲಾಯಿತು
ಚಿಕ್ಕಬಳ್ಳಾಪುರ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ಕೆಜೆವಿಎಸ್) ಆಗಸ್ಟ್‌ನಲ್ಲಿ ಸ್ವಾತಂತ್ರ್ಯ ಚಳವಳಿ ಕುರಿತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ನಗರದಲ್ಲಿ ಭಾನುವಾರ ಜಿಲ್ಲೆ, ತಾಲ್ಲೂಕು ಮತ್ತು ಶಾಲೆ ಮಟ್ಟದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪರೀಕ್ಷೆಗೆ ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ನೋಂದಾಯಿಸಿದ್ದ ಶಾಲಾ ಸಂಯೋಜಕರಿಗೆ ಗೌರವ ಸಮರ್ಪಣೆ ಸಮಾರಂಭ ನಡೆಯಿತು.
ಜಿಲ್ಲಾ ಮುತ್ತು ತಾಲ್ಲೂಕು ಮಟ್ಟದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಚಿರಂತನ ಗೌಡ, ಪ್ರೇರಿತ, ಹರ್ಷಿತ್ ಎಂ.ಗೌಡ, ವೇದಶ್ರೀ, ದಿವ್ಯ.ಆರ್, ಸವೇರಿಯ ಅವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ವಿತರಿಸಲಾಯಿತು.
ಶಾಲಾ ಹಂತದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು, ವಿದುರಾಶ್ವತ್ಥ ಭಾವಚಿತ್ರವಿರುವ ಸ್ಮರಣಿಕೆ , ಪುಸ್ತಕ ಮತ್ತು ಅಭಿನಂದನಾ ಪತ್ರ ನೀಡಲಾಯಿತು. ವಿವಿಧ ಶಾಲೆಗಳ ಹದಿನಾಲ್ಕು ಶಿಕ್ಷಕರು ಮತ್ತು ಜಿಲ್ಲಾ ಸಂಯೋಜಕಿ ಕೆ.ಎಂ.ಕಾವ್ಯ ಅವರನ್ನು ಸನ್ಮಾನಿಸಲಾಯಿತು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಎನ್.ಲೋಕನಾಥ್ ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿಯಿಂದ ಅಧ್ಯಯನ ಮಾಡಬೇಕು. ಜೀವನದಲ್ಲಿ ಅನ್ವಯಿಕ ಜ್ಞಾನ ಹೊಂದಬೇಕು. ಹದಿಹರೆಯದಲ್ಲಿ ಕಷ್ಟ, ಸಂಕಟ, ದುಃಖ, ಸಂತೋಷಗಳಿಂದ ವಿಚಲಿತರಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿರುವ ಇಂತಹ ಪರೀಕ್ಷೆಗಳು ನಿಮ್ಮ ಜ್ಞಾನವೃದ್ಧಿಗೆ ಪೂರಕ ಎಂದರು.
ಸಮಿತಿಯ ರಾಜ್ಯ ಪದಾಧಿಕಾರಿ ಕೃಷ್ಣಾನಂದ ಮಾತನಾಡಿ, ಸಮಿತಿಯ ಜನಸಮುದಾಯಕ್ಕೆ ಅಂಧಾನುಕರಣೆ , ಕಂದಾಚಾರಗಳಿಂದ ಆಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡುತ್ತಿದೆ. ವೈಜ್ಞಾನಿಕ ವಿಚಾರಗಳನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.
ಎಲ್ಲ ವಿಚಾರಗಳನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಲು ಅರಿವು ಮೂಡಿಸುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಸಮಿತಿಯ ಜಿಲ್ಲಾ ಅಧ್ಯಕ್ಷ ಕೆ.ಎಂ. ರೆಡ್ಡಪ್ಪ, ಜಿಲ್ಲೆಯಿಂದ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದರು.
ನಗರಸಭೆ ಸದಸ್ಯರಾದ ಅಣ್ಣಮ್ಮ, ಪ್ರಾಂತ ರೈತ ಸಂಘದ ಮುಖಂಡ ಮುನಿಕೃಷ್ಣಪ್ಪ, ಕೆ.ಎಸ್.ನಾರಾಯಣ ಸ್ವಾಮಿ, ವೆಂಕಟರಮಣ ನಾಯಕ್, ಕಾವ್ಯ, ಶಶಿಕಲಾ, ಜಯಭಾರತಿ, ಸೌಭಾಗ್ಯ, ಶ್ರೀನಿವಾಸ್, ಭೈರಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.