ADVERTISEMENT

ಜಿಲ್ಲೆಯಲ್ಲಿ ಕೋವಿಡ್‌ಗೆ ಎರಡನೇ ಬಲಿ

ಬೆಂಗಳೂರಿನ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟ ನಗರದ ಅಂಜುಮನ್ ರಸ್ತೆ ನಿವಾಸಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 14:21 IST
Last Updated 15 ಏಪ್ರಿಲ್ 2020, 14:21 IST
ನಗರದ 17ನೇ ವಾರ್ಡ್‌ಗೆ ಬುಧವಾರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಎಸ್ಪಿ ಮಿಥುನ್ ಕುಮಾರ್ ಅವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ನಗರದ 17ನೇ ವಾರ್ಡ್‌ಗೆ ಬುಧವಾರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಎಸ್ಪಿ ಮಿಥುನ್ ಕುಮಾರ್ ಅವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.   

ಚಿಕ್ಕಬಳ್ಳಾಪುರ: ಹೆಚ್ಚಿದ ಕೋವಿಡ್‌ ಪ್ರಕರಣಗಳು, ಒಂದು ಸಾವಿನಿಂದಾಗಿ ಜಿಲ್ಲೆಯ ಜನರು ಭಯಪಡುತ್ತಿರುವಾಗಲೇ ಬುಧವಾರ ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಬಲಿ ಪಡೆದು ಜನರಲ್ಲಿ ತಲ್ಲಣ ಸೃಷ್ಟಿಸಿದೆ.

ಕೋವಿಡ್ 19ಗೆ ತುತ್ತಾಗಿದ್ದ ನಗರದ 17ನೇ ವಾರ್ಡ್ ವ್ಯಾಪ್ತಿಯ ಅಂಜುಮನ್ ರಸ್ತೆ ನಿವಾಸಿ 69 ವರ್ಷದ ವ್ಯಕ್ತಿ ಬುಧವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟರು. ಅವರ ಮೃತದೇಹದ ಅಂತ್ಯಕ್ರಿಯೆಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳೇ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ನೆರವೇರಿಸಿದರು ಎಂದು ತಿಳಿದು ಬಂದಿದೆ.

ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಮೃತನ ಕುಟುಂಬದ ಸದಸ್ಯರು ಸೇರಿದಂತೆ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಆರು ಜನರನ್ನು ಜಿಲ್ಲಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಪ್ರತ್ಯೇಕ ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ. ಜತೆಗೆ ಅವರ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಟ್ಟಿದ್ದಾರೆ.

ADVERTISEMENT

ನಗರದಲ್ಲಿ ಒಂದೇ ಒಂದು ಕೊರೊನಾ ಸೋಂಕಿನ ಪ್ರಕರಣ ಇಲ್ಲದಿರುವಾಗ, ಸದಾ ಮನೆಯಲ್ಲಿಯೇ ಇರುತ್ತಿದ್ದ ವ್ಯಕ್ತಿಯಲ್ಲಿ ದಿಢೀರ್ ಕೋವಿಡ್‌ ಪತ್ತೆಯಾಗಿರುವುದು ಜಿಲ್ಲಾ ಕೇಂದ್ರದ ಜನರನ್ನು ಚಿಂತೆಗೀಡು ಮಾಡಿದೆ. ಸದ್ಯ ಆರೋಗ್ಯ ಇಲಾಖೆ ಸಿಬ್ಬಂದಿ ಅಂಜುಮನ್ ನಗರದ ವ್ಯಕ್ತಿಗೆ ಯಾವ ಮೂಲದಿಂದ ಕೋವಿಡ್ ತಗುಲಿದೆ ಎಂದು ಪತ್ತೆ ಮಾಡಲು ಹರಸಾಹಸ ಪಡುತ್ತಿದ್ದಾರೆ.

ಮೃತ ವ್ಯಕ್ತಿ ಅಸ್ತಮಾ, ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳಿಂದ ಬಳಲುತ್ತಿದ್ದರು. ಅದಕ್ಕಾಗಿ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಆಗಾಗ ಹೋಗಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿಗೆ ಚಿಕಿತ್ಸೆಗೆ ಹೋದ ಸಂದರ್ಭದಲ್ಲಿಯೇ ಅವರಿಗೆ ಕೋವಿಡ್‌ ತಗುಲಿರಬೇಕು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಆಗಾಗ ತಂದೆಯನ್ನು ಬೆಂಗಳೂರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಮೃತ ವ್ಯಕ್ತಿಯ ಮಗನ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಅಧಿಕಾರಿಗಳು ವರದಿ ತರಿಸಿಕೊಂಡಿದ್ದು, ಅದರಲ್ಲಿ ಯಾವುದೇ ಸೊಂಕಿನ ಲಕ್ಷಣಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ ಗೌರಿಬಿದನೂರಿನ 12 ಜನರು ಸೇರಿದಂತೆ 13 ಜನರಲ್ಲಿ ಕೋವಿಡ್‌ ಪತ್ತೆಯಾಗಿದೆ. ಈ ಪೈಕಿ 72 ವರ್ಷದ ವೃದ್ದೆಯೊಬ್ಬರು ಮಾರ್ಚ್ 25 ರಂದು ಮೃತಪಟ್ಟಿದ್ದರು. ಚಿಕಿತ್ಸೆಯಿಂದ ಗುಣಮುಖರಾದ ಎಂಟು ಮಂದಿಯನ್ನು ಇತ್ತೀಚೆಗೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ, ಪತ್ಯೇಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಸದ್ಯ ಮೂರು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.