ADVERTISEMENT

ಪ್ರಯಾಣಿಕರಿಂದ ಖಾಸಗಿ ಬಸ್‌ಗಳ ಮೊರೆ

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದತ್ತ ಸುಳಿಯದ ಜನರು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 13:50 IST
Last Updated 7 ಏಪ್ರಿಲ್ 2021, 13:50 IST
ಖಾಸಗಿ ಬಸ್ ನಿಲ್ದಾಣದಲ್ಲಿ ಸಂಚಾರಕ್ಕೆ ಸಿದ್ದವಾಗಿರುವ ಬಸ್‌ಗಳು
ಖಾಸಗಿ ಬಸ್ ನಿಲ್ದಾಣದಲ್ಲಿ ಸಂಚಾರಕ್ಕೆ ಸಿದ್ದವಾಗಿರುವ ಬಸ್‌ಗಳು   

ಚಿಕ್ಕಬಳ್ಳಾಪುರ: ಆರನೇ ವೇತನ ಆಯೋಗದ ಶಿಫಾರಸನ್ನು ಅನ್ವಯಗೊಳಿಸುವಂತೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರು ಮುಷ್ಕರ ಹಮ್ಮಿಕೊಂಡಿದ್ದ ಕಾರಣ ಪ್ರಯಾಣಿಕರು ಬುಧವಾರ ಖಾಸಗಿ ಬಸ್‌ಗಳ ಮೊರೆ ಹೋದರು. ಬೆಳಿಗ್ಗೆಯಿಂದಲೇ ಯಾವುದೇ ಸಿಬ್ಬಂದಿ ನಿಲ್ದಾಣಕ್ಕೆ ಬರಲಿಲ್ಲ.

ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಮುಷ್ಕರ ಖಾಸಗಿ ಬಸ್‌ಗಳಿಗೆ ವರವಾಯಿತು. ಖಾಸಗಿ ಬಸ್ ನಿಲ್ದಾಣಗಳಲ್ಲಿ ಬೆಂಗಳೂರು, ದೊಡ್ಡಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ ಸೇರಿದಂತೆ ವಿವಿಧ ಕಡೆಗಳಿಗೆ ಬೆಳಿಗ್ಗೆಯೇ ಬಸ್‌ಗಳು ತೆರಳಿದವು. ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳು ನಿಂತಿದ್ದವು.

ಖಾಸಗಿ ನಿಲ್ದಾಣದಿಂದ ಹೊರಟ ಬಸ್‌ಗಳು ಕೆಎಸ್‌ಆರ್‌ಟಿಸಿ ನಿಲ್ದಾಣದ ಹಾದು ತಮ್ಮ ಮಾರ್ಗ ಹಿಡಿಯುತ್ತಿದ್ದವು. ಮುಷ್ಕರದ ಬಗ್ಗೆ ಮೊದಲೇ ಜನರಿಗೆ ತಿಳಿದಿದ್ದ ಕಾರಣ ನಾಲ್ಕಾರು ಮಂದಿ ಮಾತ್ರ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಬಂದರು. ನಿಲ್ದಾಣದಲ್ಲಿದ್ದ ಪೊಲೀಸರು ಅವರನ್ನು ಖಾಸಗಿ ಬಸ್ ನಿಲ್ದಾಣದತ್ತ ಕಳುಹಿಸುತ್ತಿದ್ದರು.

ADVERTISEMENT

ಮುಷ್ಕರ ಬಗ್ಗೆ ಮೊದಲೇ ಮಾಹಿತಿ ತಿಳಿದಿದ್ದ ಖಾಸಗಿ ನಿಲ್ದಾಣದಲ್ಲಿಯೂ ಗಣನೀಯವಾಗಿ ಪ್ರಯಾಣಿಕರ ಸಂಖ್ಯೆ ಇರಲಿಲ್ಲ. ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು ಪೈಪೋಟಿಗೆ ಬಿದ್ದರಂತೆ ಹೊರಡುತ್ತಿದ್ದವು. ‌

ಆಟೊಗಳಿಗೆ ಬೇಡಿಕೆ: ಚಿಕ್ಕಬಳ್ಳಾಪುರ ಹೊರವಲಯದ ಗ್ರಾಮಗಳ ಜನರು ನಗರಕ್ಕೆ ಬರಲು ಆಟೊಗಳನ್ನು ಆಶ್ರಯಿಸಿದ್ದರು. ಆಟೊಗಳಲ್ಲಿ ಬಂದು ಮತ್ತು ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ಆಟೊಗಳಲ್ಲಿ ವಾಪಸ್ ಆಗುತ್ತಿದ್ದರು.

ಬೆಳಿಗ್ಗೆ ಮೂರ್ನಾಲ್ಕು ಮಂದಿ ನಿಲ್ದಾಣಕ್ಕೆ ಬಂದರು. ಅವರಿಗೆ ಮುಷ್ಕರದ ಬಗ್ಗೆ ಮಾಹಿತಿ ನೀಡಿ ಖಾಸಗಿ ಬಸ್‌ ನಿಲ್ದಾಣಕ್ಕೆ ಕಳುಹಿಸಿದೆವು ಎಂದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿದ್ದ ಪೊಲೀಸ್ ಸಿಬ್ಬಂದಿ ತಿಳಿಸಿದರು.

ಕೆಎಸ್‌ಆರ್‌ಟಿಸಿ ಸಂಚಾರ ಇಲ್ಲದ ಕಾರಣ ನಗರಕ್ಕೆ ಹೊರಗಿನಿಂದ ಬರುವವರ ಸಂಖ್ಯೆಯೂ ಕಡಿಮೆ ಇತ್ತು. ಮಾರುಕಟ್ಟೆ, ವಹಿವಾಟು ನಡೆಯುವ ‍ಪ್ರಮುಖ ರಸ್ತೆಗಳಲ್ಲಿ ಜನದಟ್ಟಣೆ ಕಡಿಮೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.