ADVERTISEMENT

ಕೆಎಸ್‌ಆರ್‌ಟಿಸಿ ಬಸ್ ಅವ್ಯವಸ್ಥೆ ಸರಿಪಡಿಸಲು ಸೂಚನೆ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 5:49 IST
Last Updated 13 ನವೆಂಬರ್ 2025, 5:49 IST
ಚಿಕ್ಕಬಳ್ಳಾಪುರದಲ್ಲಿ ನಡೆದ ‍ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ‍ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿದರು   

ಚಿಕ್ಕಬಳ್ಳಾಪುರ: ಇಲ್ಲಿನ ಜಿಲ್ಲಾ ಪಂಚಾಯಿತಿಯ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಯ ಅಧ್ವಾನಗಳ ಬಗ್ಗೆ ಕಾವೇರಿದ ಚರ್ಚೆ ನಡೆಯಿತು.

ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಮುಂದೆ ಶಾಸಕರಾದ ಎಸ್‌.ಎನ್.ಸುಬ್ಬಾರೆಡ್ಡಿ, ಬಿ.ಎನ್. ರವಿಕುಮಾರ್ ತಮ್ಮ ತಾಲ್ಲೂಕು ವ್ಯಾಪ್ತಿಯಲ್ಲಿ ಎದುರಾಗಿರುವ ಬಸ್‌ಗಳ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಯಲುವಳ್ಳಿ ರಮೇಶ್, ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜು, ನಂದಿ ಕ್ರಾಸ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಮೇಲ್ಸೇತುವೆಯಲ್ಲಿ ಸಾಗುತ್ತವೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ ಎಂದರು.

ADVERTISEMENT

ಆಗ ಸಚಿವರು, ಶನಿವಾರ ಸಂಜೆ ಬೆಂಗಳೂರಿನಿಂದ ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಗೆ ಬರುವ ಮತ್ತು ಸೋಮವಾರ ತಾಲ್ಲೂಕು ಕೇಂದ್ರಗಳಿಂದ ಬೆಂಗಳೂರಿಗೆ ಹೊರಡುವ ಬಸ್‌ಗಳಲ್ಲಿ ಜನರು ತುಂಬಿ ತುಳುಕುವರು. ಎಷ್ಟೊ ಸಮಯ ಬಸ್‌ಗಳು ದೊರೆಯುತ್ತಿಲ್ಲ. ಈ ದಿನಗಳಲ್ಲಿ ಸಾರ್ವಜನಿರ ಓಡಾಟಕ್ಕೆ ಮತ್ತಷ್ಟು ಬಸ್‌ಗಳು ಅಗತ್ಯ ಎಂದು ಹೇಳಿದರು. 

‘ನೀವು ಕಚೇರಿಯಲ್ಲಿ ಕುಳಿತು ಆಡಳಿತ ನಡೆಸುವುದಕ್ಕಿಂತ ಜನರ ಬಳಿ ಹೋಗಿ ಸಮಸ್ಯೆ ತಿಳಿಯಬೇಕು. ಎಷ್ಟು ಘಟಕಗಳಿಗೆ ನೀವು ಭೇಟಿ ನೀಡಿದ್ದೀರಿ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಯನ್ನು ಸಚಿವರು ‍ಪ್ರಶ್ನಿಸಿದರು.

ಶಾಸಕ ಸುಬ್ಬಾರೆಡ್ಡಿ, ಕೋವಿಡ್ ಪೂರ್ವದಲ್ಲಿ ಸಂಚರಿಸುತ್ತಿದ್ದ ಎಲ್ಲ ಮಾರ್ಗಗಳಲ್ಲಿ ಈಗ ಬಸ್‌ಗಳು ಓಡಾಡುತ್ತಿಲ್ಲ. ಶಾಲೆ, ಕಾಲೇಜು ಅವಧಿಯಲ್ಲಿ ಬಾಗೇಪಲ್ಲಿಯಿಂದ ಚೇಳೂರು ಮಾರ್ಗದಲ್ಲಿ ಖಾಸಗಿ ಬಸ್‌ಗಳು ಹೆಚ್ಚು ಸಂಚರಿಸುತ್ತವೆ. ಈ ಅವಧಿಯಲ್ಲಾದರೂ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಬೇಕು ಎಂದರು.

ಪೆರೇಸಂದ್ರ ಕ್ರಾಸ್‌ನಿಂದ ಗುಡಿಬಂಡೆಗೆ ಮತ್ತು ಅಲ್ಲಿಂದ ಬಾಗೇಪಲ್ಲಿಗೆ ನಿಯಮಿತವಾಗಿ ಸಂಚರಿಸಲು ಹೊಸ ಬಸ್ ವ್ಯವಸ್ಥೆ ಮಾಡಬೇಕು ಎಂದರು. ಚಿಕ್ಕಬಳ್ಳಾಪುರ ವಿಭಾಗದಲ್ಲಿ ಹೆಚ್ಚು ಆದಾಯ ನೀಡುತ್ತಿರುವುದು ಶಿಡ್ಲಘಟ್ಟ ತಾಲ್ಲೂಕು. ಶಾಲೆ ಅವಧಿಯಲ್ಲಿ ಇಲ್ಲಿ ಬಸ್‌ಗಳ ಸಂಚಾರಕ್ಕೆ ಅನುಕೂಲ ಮಾಡಬೇಕು ಎಂದು ರವಿಕುಮಾರ್ ಸಹ ಧ್ವನಿಗೂಡಿಸಿದರು.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ‘ಸಮಸ್ಯೆಗಳನ್ನು ಪರಿಹರಿಸಲಾಗುವುದು. ಮಾರ್ಚ್ ವೇಳೆಗೆ 49 ಬಸ್‌ಗಳು ಗುಜರಿ ಸೇರಲಿವೆ’ ಎಂದರು.

ರಾಜ್ಯದ ಸರ್ಕಾರಿ ವಸತಿ ಶಾಲೆಗಳಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಹಾಗೂ ಉತ್ತಮ ಕಲಿಕಾ ವಾತಾವರಣದಿಂದ ಪೋಷಕರು ತಮ್ಮ ಮಕ್ಕಳನ್ನು ವಸತಿ ಶಾಲೆಗಳಿಗೆ ಸೇರಿಸಲು ಇಚ್ಛಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ವಸತಿ ಶಾಲೆ ತೆರೆಯುವುದು ಉತ್ತಮ ಎಂದು ಹೇಳಿದರು. 

ಜಿಲ್ಲೆಯ 28 ಹೋಬಳಿಗಳ ಪೈಕಿ ನಾಲ್ಕು ಹೋಬಳಿಗಳಲ್ಲಿ ಮಾತ್ರ ವಸತಿ ಶಾಲೆಗಳನ್ನು ತೆರೆಯುವುದು ಬಾಕಿ ಇದೆ. ಈ ನಾಲ್ಕು ಹೋಬಳಿಗಳಲ್ಲೂ ಪರಿಶೀಲಿಸಿ ವಸತಿ ಶಾಲೆಗಳನ್ನು ತೆರೆಯಲು ಸ್ಥಳಾವಕಾಶದ ಬಗ್ಗೆ ವಿವರ ಪಡೆದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. 

ಬಾಲಕಿಯರು ವ್ಯಾಸಂಗ ಮಾಡುತ್ತಿರುವ ಎಲ್ಲ ವಸತಿ ಶಾಲೆಗಳಲ್ಲಿ ಮಹಿಳಾ ವಾರ್ಡನ್‌ಗಳನ್ನು ನೇಮಿಸುವ ನಿಟ್ಟಿನಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

24ರಂದು ಶಿಡ್ಲಘಟ್ಟ ತಾಲ್ಲೂಕಿನಗೆ ಮುಖ್ಯಮಂತ್ರಿ ಭೇಟಿ ನೀಡಲಿದ್ದು ₹2,000 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಈ ಪೈಕಿ ಸುಮಾರು ₹1,400 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ₹600 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ  ನೆರವೇರಿಸಲಿದ್ದಾರೆ ಎಂದು ಹೇಳಿದರು.

ಅಂದು 3000 ಕಟ್ಟಡ ಕಾರ್ಮಿಕರಿಗೆ ಗಾರೆ ಕೆಲಸದ ಕಿಟ್‌ಗಳ ವಿತರಣೆ ಸೇರಿದಂತೆ ಸರ್ಕಾರದ ವಿವಿಧ ಸವಲತ್ತುಗಳು ಹಾಗೂ ಮಂಜೂರಾತಿ ಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

 ಸಮಾಜ ಕಲ್ಯಾಣ ಇಲಾಖೆಯಡಿ ಕಾಲೊನಿಗಳಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳ ವೇಳೆ ಸೋಲಾರ್ ಲೈಟ್‌ಗಳನ್ನು ಅಳವಡಿಸಬಾರದು. ಅವು ಬೇಗ ದುರಸ್ತಿಗೆ ಬರುತ್ತವೆ. ಒಂದು ವೇಳೆ ಅಳವಡಿಸಿದರೆ ಅದು ನಿಮ್ಮ ಮತ್ತು ಗುತ್ತಿಗೆದಾರರ ನಡುವಿನ ಹೊಂದಾಣಿಕೆಯಾಗುತ್ತದೆ ಎಂದು ಹೇಳಿದರು. 

ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್, ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪ ವಿಭಾಗಾಧಿಕಾರಿ ಡಿ.ಎಚ್ ಅಶ್ವಿನ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅತಿಕ್ ಪಾಷಾ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

ಶಿಕ್ಷಕರ ಕಾರ್ಯವೈಖರಿಗೆ ಅಸಮಾಧಾನ

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಮೆರಿಟ್ ಆಧಾರದ ಮೇಲೆ ಆಯ್ಕೆಯಾಗಿ ಪ್ರತಿಭಾನ್ವಿತ ಶಿಕ್ಷಕರು ಉಪನ್ಯಾಸಕರು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೂ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬರುತ್ತಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು. ಶಿಕ್ಷಕರು ಉಪನ್ಯಾಸಕರು ಸಕ್ರಿಯವಾಗಿ ಬೋಧನಾ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಆದರೆ ಆ ರೀತಿಯಲ್ಲಿ ಆಗುತ್ತಿಲ್ಲ. ಬೇರೆ ಬೇರೆ ವ್ಯವಹಾರಗಳು ಮತ್ತು ರಾಜಕೀಯ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾವ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿದೆ. ಫಲಿತಾಂಶ ಉತ್ತಮವಾಗಿದೆಯೊ ಅಲ್ಲಿಗೆ ಬೇರೆ ಶಾಲೆಗಳ ಶಿಕ್ಷಕರನ್ನು ಕರೆದುಕೊಂಡು ಹೋಗಿ ಅಲ್ಲಿನ ಮಾದರಿಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಡಿಡಿಪಿಐ ಅವರಿಗೆ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.