ಚಿಕ್ಕಬಳ್ಳಾಪುರ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಜಂಟಿ ಕ್ರಿಯಾ ಸಮಿತಿಯು ಆ.5ರಂದು ಕರೆ ನೀಡಿರುವ ಸಾರಿಗೆ ಮುಷ್ಕರದ ವಿಚಾರವಾಗಿ ಜಿಲ್ಲೆಯ ಸಾರಿಗೆ ನೌಕರರು ಸೋಮವಾರ (ಆ.4) ರಾತ್ರಿಯವರೆಗೂ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ.
ಜಿಲ್ಲೆಯ ಸಾರಿಗೆ ನೌಕರರು ಮತ್ತು ಸಂಘಟನೆಗಳು ರಾಜ್ಯ ಮುಖಂಡರು ಕೈಗೊಳ್ಳುವ ನಿರ್ಧಾರಕ್ಕೆ ಎದುರು ನೋಡುತ್ತಿದ್ದರು. ಆದರೆ ರಾತ್ರಿ ಪಾಳಿಯ ಸಾರಿಗೆ ಸಿಬ್ಬಂದಿ ಕರ್ತವ್ಯ ಹಾಜರಾಗಿದ್ದರು. ರಾಜ್ಯದ ಬೇರೆ ಬೇರೆ ಭಾಗಗಳಿಗೆ ರಾತ್ರಿಯೂ ಬಸ್‌ಗಳು ಚಿಕ್ಕಬಳ್ಳಾಪುರದಿಂದ ಸಂಚರಿಸಿದವು.
‘ನಾವು ಕೆಲಸಕ್ಕೆ ಹಾಜರಾಗಿದ್ದೇವೆ. ಮಂಗಳವಾರ ಬಹಳಷ್ಟು ಸಿಬ್ಬಂದಿ ಕೆಲಸ ಮಾಡುವ ಸಾಧ್ಯತೆ ಇದೆ. ನಮ್ಮ ಸಂಘಟನೆಯ ಮುಖಂಡರು ಯಾವ ತೀರ್ಮಾನ ಕೈಗೊಳ್ಳುವರೊ ನೋಡಬೇಕು’ ಎಂದು ಕೆಎಸ್‌ಆರ್‌ಟಿಸಿ ನಿರ್ವಾಹಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಅಧಿಕಾರಿಗಳ ವಲಯದಲ್ಲಿಯೂ ಗೊಂದಲ: ಮುಷ್ಕರದ ಬಗ್ಗೆ ಅಧಿಕಾರಿಗಳಿಗೆ ರಾತ್ರಿ 9.30ರವರೆಗೂ ಯಾವ ಖಚಿತತೆಯೂ ಇರಲಿಲ್ಲ. ಬೇರೆ ಜಿಲ್ಲೆಯಗಳಲ್ಲಿ ಯಾವ ರೀತಿಯ ಸ್ಥಿತಿ ಇರುತ್ತದೆಯೊ ಅದನ್ನು ನೋಡಿಕೊಂಡು ಇಲ್ಲಿನ ನೌಕರರು ಮುಂದುವರಿಯುವ ಸಾಧ್ಯತೆ ಇದೆ. ಆದರೆ ಮಂಗಳವಾರ ಕೆಲಸಕ್ಕೆ ಬರುವುದಾಗಿ ಬಹಳಷ್ಟು ಸಿಬ್ಬಂದಿ ತಿಳಿಸಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದರು.
ಪರ್ಯಾಯ ವ್ಯವಸ್ಥೆ: ಮತ್ತೊಂದು ಕಡೆ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ ನೋಂದಾಯಿಸಲಾಗಿರುವ ಮಜಲು ವಾಹನಗಳು, ಒಪ್ಪಂದದ ವಾಹನಗಳು, ಖಾಸಗಿ ಸೇವಾ ವಾಹನಗಳು ಮತ್ತು ಶಾಲಾ ವಾಹನಗಳು ಸೇರಿದಂತೆ ಒಟ್ಟು 1059 ವಾಹನಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಮುನ್ನೆಚ್ಚರಿಕೆ ಕ್ರಮವಾಗಿ ವ್ಯವಸ್ಥೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.