
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ ಮತ್ತು ಗೌರಿಬಿದನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗಾರಿಕೀಕರಣಕ್ಕೆ ದೊಡ್ಡ ಮಟ್ಟದ ಪ್ರಯತ್ನಗಳು ನಡೆದಿವೆ. ಈಗಾಗಲೇ ಪ್ರಾಥಮಿಕ ಹೆಜ್ಜೆಗಳನ್ನೂ ಇಡಲಾಗಿದೆ. ಆದರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಶೂನ್ಯ ಸ್ಥಿತಿ ಎನ್ನುವಂತಿದೆ.
1984–85ರಲ್ಲಿ ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿ 69 ಎಕರೆಗಳಲ್ಲಿ ಕೈಗಾರಿಕಾ ಪ್ರದೇಶ ತಲೆಎತ್ತಿದೆ. ಆ ತರುವಾಯ ಕೈಗಾರಿಕೆಗಳೇ ಚಿಕ್ಕಬಳ್ಳಾಪುರಕ್ಕೆ ಕಾಲಿಟ್ಟಿಲ್ಲ.
ಡಾ.ಕೆ. ಸುಧಾಕರ್ ಶಾಸಕರಾಗಿದ್ದ ವೇಳೆ ಮಂಚೇನಹಳ್ಳಿ ತಾಲ್ಲೂಕಿನಲ್ಲಿ ಕೈಗಾರಿಕೆಗಳಿಗಾಗಿ ಎರಡು ಸಾವಿರ ಎಕರೆ ಜಮೀನು ಗುರುತಿಸಿದ್ದರು. ಆದರೆ ಇಷ್ಟು ಪ್ರಮಾಣದ ಸರ್ಕಾರಿ ಜಮೀನು ಒಂದೇ ಕಡೆ ಲಭ್ಯವಾಗದೆ ಚದುರಿದ ರೀತಿಯಲ್ಲಿ ಇತ್ತು. ಈ ಸರ್ಕಾರಿ ಜಮೀನು ಮತ್ತು ವಶಕ್ಕೆ ಪಡೆಯಬೇಕಾದ ಜಮೀನುಗಳ ಕುರಿತು ಆಡಳಿತದಲ್ಲಿ ಚರ್ಚೆಗಳು ನಡೆದಿದ್ದವು. ಈ ಸಂಬಂಧ ಯೋಜನೆಗಳು ತಯಾರಾಗುವ ಹಂತದಲ್ಲಿಯೇ ವಿಧಾನಸಭೆ ಚುನಾವಣೆ ಬಂದಿತು. ಸುಧಾಕರ್ ಸೋಲು ಅನುಭವಿಸಿದರು. ಆ ನಂತರ ಮಂಚೇನಹಳ್ಳಿ ಕೈಗಾರಿಕೀಕರಣದ ಬಗ್ಗೆ ಮಾತುಗಳೇ ಗೌಣವಾದವು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಕೈಗಾರಿಕೆಗಳ ವಿಚಾರವಾಗಿ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣದಿಂದಲೇ ಕೈಗಾರಿಕೀಕರಣದ ವಿಚಾರದಲ್ಲಿ ಚಿಕ್ಕಬಳ್ಳಾಪುರಕ್ಕೆ ಹಿನ್ನಡೆಯಾಗುತ್ತಿದೆ ಎನ್ನುವ ಮಾತು ಪ್ರಜ್ಞಾವಂತರಲ್ಲಿದೆ.
ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಪ್ರಯತ್ನದ ಫಲವಾಗಿ ಜಿಲ್ಲೆಯಲ್ಲಿ ಕೈಗಾರಿಕೀಕರಣಕ್ಕೆ ದೊಡ್ಡ ಹೆಜ್ಜೆ ಇಡಲಾಗಿದೆ. ರಾಷ್ಟ್ರೀಯ ಹಬ್ಬಗಳ ವೇದಿಕೆಗಳಲ್ಲಿಯೂ ಸಚಿವರು ಈ ವಿಚಾರವನ್ನು ಒತ್ತಿ ಹೇಳುವರು.
ಚಿಕ್ಕಬಳ್ಳಾಪುರ ಹೊರತುಪಡಿಸಿ ಜಿಲ್ಲೆಯ ಉಳಿದ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗಾರಿಕೀಕರಣದ ಯೋಜನೆಗಳು ಜರುಗುತ್ತಿವೆ. ಜಿಲ್ಲೆಯಲ್ಲಿ ಕೈಗಾರಿಕೀಕರಣಕ್ಕೆ 7,856.37 ಎಕರೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. 2,278.10 ಎಕರೆಯನ್ನು ಕರ್ನಾಟಕ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಸ್ವಾಧೀನಕ್ಕೆ ಪಡೆಯಲಾಗಿದೆ. ಈ ಜಮೀನುಗಳ ಮಾಲೀಕರಿಗೆ ಪರಿಹಾರ ವಿತರಣೆ ಸಹ ಪ್ರಗತಿಯಲ್ಲಿದೆ.
ಅಂತಿಮ ಅಧಿಸೂಚನೆ ಮತ್ತು ಪ್ರಾಥಮಿಕ ಅಧಿಸೂಚನೆ ಸೇರಿ ಜಿಲ್ಲೆಯಲ್ಲಿ 10,134 ಎಕರೆಯು ಕೈಗಾರಿಕೀಕರಣದ ಹಂತದಲ್ಲಿ ಇವೆ. ಪ್ರಾಥಮಿಕ ಅಧಿಸೂಚನೆಯ ಹಂತದಲ್ಲಿರುವ ಈ ಯೋಜನೆಗಳು ಯಾವುದೇ ಅಡೆತಡೆಗಳು ಇಲ್ಲದೆ ಜಾರಿಯಾದರೆ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಕೈಗಾರಿಕಾ ಬೆಳವಣಿಗಳು ಆಗಲಿವೆ. ಆ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ ಎನ್ನುವ ಆಶಾವಾದ ಗರಿಗೆದರಿದೆ.
ಹೀಗೆ ಸಾವಿರಾರು ಎಕರೆಯಲ್ಲಿ ಕೈಗಾರಿಕೀಕರಣದ ಪ್ರಯತ್ನಗಳು ನಡೆದರೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕೈಗಾರಿಕಾ ಯೋಜನೆಗಳ ಮಾತುಗಳೇ ಕೇಳಿ ಬರುತ್ತಿಲ್ಲ.
ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲಾ ಕೇಂದ್ರಗಳ ಆಸುಪಾಸಿನಲ್ಲಿ ಕೈಗಾರಿಕೀಕರಣವು ವೇಗವಾಗಿ ಬೆಳೆಯುತ್ತಿದೆ. ಆದರೆ, ಚಿಕ್ಕಬಳ್ಳಾಪುರ ಮಾತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಗೌರಿಬಿದನೂರು ತಾಲ್ಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶ ಈಗಾಗಲೇ ಅಭಿವೃದ್ಧಿ ಹೊಂದಿದೆ. ಇಲ್ಲಿ ಸರ್ಕಾರ ಮೂರನೇ ಹಂತದ ಘಟಕ ವಿಸ್ತರಣೆಗೆ ಹೆಜ್ಜೆ ಇಟ್ಟಿದೆ.
ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಬಾಗೇಪಲ್ಲಿಯಲ್ಲಿ ಈ ಹಿಂದೆ ಕೈಗಾರಿಕೀಕರಣಕ್ಕೆ ನಡೆದ ಪ್ರಯತ್ನಗಳು ವಿಫಲವಾಗಿದ್ದವು. 15 ವರ್ಷಗಳ ಹಿಂದೆ ಇಲ್ಲಿ ಕೈಗಾರಿಕೆಗಳಿಗಾಗಿ ಭೂಮಿ ಗುರುತಿಸಲಾಗಿತ್ತು. ಆದರೆ, ಯೋಜನೆಗಳ ಕಾರ್ಯಗತವಾಗಿರಲಿಲ್ಲ. ಈಗ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕೈಗಾರಿಕೀಕರಣಕ್ಕೆ ಜಮೀನು ಗುರುತಿಸಲಾಗಿದೆ
ಶಿಡ್ಲಘಟ್ಟ ತಾಲ್ಲೂಕಿನ ಜಂಗಮ ಕೋಟೆ ಹೋಬಳಿಯಲ್ಲಿ ಜಮೀನು ಗುರುತಿಸಲಾಗಿದೆ. ಈ ಹೋಬಳಿ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಮೀಪವಿದೆ. ಅಮರಾವತಿ ಬಳಿಯೇ ಬೆಂಗಳೂರು ಉತ್ತರ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ ಶಂಕು ಸ್ಥಾಪನೆ ನಡೆದಿದೆ. ಈ ಎಲ್ಲ ಬೆಳವಣಿಗೆಗಳು ಕೃಷಿಯೇ ಪ್ರಧಾನವಾಗಿರುವ ಶಿಡ್ಲಘಟ್ಟ ತಾಲ್ಲೂಕಿನ ಆರ್ಥಿಕ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ.
ಚಿಕ್ಕಬಳ್ಳಾಪುರದಲ್ಲಿ ಈ ಹಿಂದಿನಿಂದಲೂ ದ್ರಾಕ್ಷಿ ರಸ ತಯಾರಿಕಾ ಘಟಕ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎನ್ನುವ ಕೂಗಿದೆ. ಜಿಲ್ಲೆಯ ಈಗ ಕೈಗಾರಿಕೀಕರಣಕ್ಕೆ ದೊಡ್ಡ ಪ್ರಯತ್ನಗಳು ನಡೆದಿದ್ದರೆ ಚಿಕ್ಕಬಳ್ಳಾಪುರದಲ್ಲಿ ‘ಚಿಕ್ಕ’ ಪ್ರಯತ್ನಗಳು ಸಾಧ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.