ADVERTISEMENT

ಐಟಿಐ ಉಪನ್ಯಾಸಕರ ಕೊರತೆ

ಕಾಲೇಜಿಗೆ 16 ಹುದ್ದೆಗಳು ಮಂಜೂರು l ಮೂವರು ಕಾರ್ಯ ನಿರ್ವಹಣೆ

ಪಿ.ಎಸ್.ರಾಜೇಶ್
Published 18 ಜನವರಿ 2021, 2:01 IST
Last Updated 18 ಜನವರಿ 2021, 2:01 IST
ಸರ್ಕಾರಿ ಐಟಿಐ ಕಾಲೇಜು ಕಟ್ಟಡ
ಸರ್ಕಾರಿ ಐಟಿಐ ಕಾಲೇಜು ಕಟ್ಟಡ   

ಬಾಗೇಪಲ್ಲಿ: ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿಗೆ ಸರ್ಕಾರದಿಂದ ಮಂಜೂರಾದ 16 ಹುದ್ದೆಗಳ ಪೈಕಿ ಕೇವಲ 3 ಮಂದಿ ತರಬೇತಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಪ್ರಾಯೋಗಿಕ ಹಾಗೂ ತರಗತಿಗಳು ಇಲ್ಲದೇ ತೀವ್ರ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ-7ರ ಅಗ್ನಿಶಾಮಕ ಠಾಣೆ ಮುಂದೆ ಸರ್ಕಾರಿ ಐಟಿಐ ಕಾಲೇಜು ಇದೆ. 5 ಏಕರೆ ಪ್ರದೇಶದಲ್ಲಿ ಸುವ್ಯವಸ್ಥಿತವಾಗಿ ಕಾಲೇಜಿಗೆ ಸ್ವಂತ ಕಟ್ಟಡವೂ ಇದೆ. ಕಾಲೇಜಿನಲ್ಲಿ 2 ಫಿಟ್ಟರ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕ್ ವಿಭಾಗಗಳು ಇವೆ. ಫಿಟ್ಟರ್ ವಿಭಾಗದಲ್ಲಿ 36 ವಿದ್ಯಾರ್ಥಿಗಳ ಪೈಕಿ ಮೊದಲನೇ ವರ್ಷದ 20 ಹಾಗೂ ದ್ವಿತೀಯ ವರ್ಷದ 16 ವಿದ್ಯಾರ್ಥಿಗಳು ಇದ್ದಾರೆ. ಎಲೆಕ್ಟ್ರಾನಿಕ್, ಮೆಕ್ಯಾನಿಕ್ ವಿಭಾಗದಲ್ಲಿ 44 ವಿದ್ಯಾರ್ಥಿಗಳ ಪೈಕಿ ಮೊದಲನೇ ವರ್ಷದ 24 ಹಾಗೂ ದ್ವಿತೀಯ ವರ್ಷದ 20 ವಿದ್ಯಾರ್ಥಿಗಳು ಇದ್ದಾರೆ.

ಮಂಜೂರಾದ ಹುದ್ದೆಗಳ ಪೈಕಿ ಕಾಯಂ ಆಗಿ ಕೇವಲ ಇಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ 14 ಹುದ್ದೆಗಳ ಪೈಕಿ ತರಬೇತಿ ಅಧಿಕಾರಿ 1, ಕಿರಿಯ ತರಬೇತಿ ಅಧಿಕಾರಿಗಳು 6, ಕಚೇರಿ ಅಧೀಕ್ಷಕರು 1, ಪ್ರಥಮದರ್ಜೆ ಸಹಾಯಕರು 1, ದ್ವಿತೀಯದರ್ಜೆ ಸಹಾಯಕರು 1, ಟೈಪಿಸ್ಟ್ 1, ಕಾರ್ಯಾಗಾರ ಸಹಾಯಕರು 2 ಹಾಗೂ 3 ‘ಡಿ’ ಗ್ರೂಪ್ ನೌಕರರ ಹುದ್ದೆಗಳು ಖಾಲಿ ಇದೆ.

ADVERTISEMENT

ಕಳೆದ 10 ವರ್ಷಗಳಿಂದ ಕಾಲೇಜಿಗೆ ಕಾಯಂ ಪ್ರಾಂಶುಪಾಲರು ಇಲ್ಲ. ಕಿರಿಯ ಅಧಿಕಾರಿಗಳೇ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಶಿಡ್ಲಘಟ್ಟದ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಅವರು ವಾರದಲ್ಲಿ 2 ದಿನಗಳು ಮಾತ್ರ ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರು ಅತಿಥಿ ಉಪನ್ಯಾಸಕರು ತರಗತಿಗಳನ್ನು ನಿರ್ವಹಿಸುತ್ತಿದ್ದಾರೆ.

ಕಾಲೇಜಿನ ಮುಂದೆ ವಿಶಾಲವಾದ ಹೊರಾಂಗಣ ಹಾಗೂ ಗಿಡ-ಮರಗಳನ್ನು ಬೆಳೆಸಲಾಗಿದೆ. ತರಗತಿಗಳಿಗೆ ಹಾಗೂ ಪ್ರಾಯೋಗಿಕ ಕೊಠಡಿಗಳು ಇವೆ. ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ಹಾಗೂ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಲಭ್ಯ ಇದೆ. ಆದರೆ ಕಾಲೇಜಿನಲ್ಲಿ ಕೈಗಾರಿಕಾ ಶಿಕ್ಷಣ ಬೋಧಿಸುವ ಹಾಗೂ ಸಿಬ್ಬಂದಿಯ ಹುದ್ದೆಗಳು ಖಾಲಿ ಇದೆ. ‌

ಸರ್ಕಾರ ಕಾಲೇಜಿಗೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಸಿಬ್ಬಂದಿ ಕೊರತೆಯಿಂದ ಗುಣಾತ್ಮಕ ಹಾಗೂ ಪೂರಕವಾದ ಶಿಕ್ಷಣವು ಸಿಗುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪ.

‘ರಿಯಾಯಿತಿ ಬಸ್‌ಪಾಸ್ ಇದ್ದರೂ, ಕೆಲವು ಸಾರಿಗೆ ಬಸ್ ನಿರ್ವಾಹಕರು ಪ್ರಯಾಣಿಸಲು ಬಿಡುವುದಿಲ್ಲ. ಚಾಲಕರು ಬಸ್‌ಗಳನ್ನು ನಿಲ್ಲಿಸುವುದಿಲ್ಲ. ವಿದ್ಯಾರ್ಥಿನಿಲಯಗಳು ಆರಂಭವಾಗಿಲ್ಲ. ಗ್ರಾಮೀಣ ಪ್ರದೇಶಗಳಿಂದ ಕಾಲೇಜಿಗೆ ಬಂದರೂ, ಒಂದೆಡೆ ಬೋಧಕರು ಇಲ್ಲದೇ ಪಾಠಗಳು ಇಲ್ಲ. ಮತ್ತೊಂದೆಡೆ ಕಾಲೇಜಿಗೆ ಹೋಗಿಬರಲು ಹರಸಾಹಸಪಡುವಂತಾಗಿದೆ. ಕ್ಯಾಂಟೀನ್ ವ್ಯವಸ್ಥೆ ಇಲ್ಲ’ ಎಂದು ವಿದ್ಯಾರ್ಥಿಗಳಾದ ದೇವರಾಜಪಲ್ಲಿ ಲೋಕೇಶ್, ನರವಾಲ ಪಲ್ಲವಿ, ಸಾಯಿಕುಮಾರ್ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.