ADVERTISEMENT

ಬಾಗೇಪಲ್ಲಿ: ವಿದ್ಯಾರ್ಥಿಗಳ ಕೊರತೆಯಿಂದ 60 ಗಡಿ ಶಾಲೆಗಳು ಬಂದ್

ಪಿ.ಎಸ್.ರಾಜೇಶ್
Published 7 ಡಿಸೆಂಬರ್ 2021, 6:21 IST
Last Updated 7 ಡಿಸೆಂಬರ್ 2021, 6:21 IST
ಬಾಗೇಪಲ್ಲಿ ತಾಲ್ಲೂಕಿನ ಅಡವಿಕೊತ್ತೂರು ಗ್ರಾಮದಲ್ಲಿ ಸರ್ಕಾರಿ ಶಾಲೆ ಮುಚ್ಚಿರುವುದು
ಬಾಗೇಪಲ್ಲಿ ತಾಲ್ಲೂಕಿನ ಅಡವಿಕೊತ್ತೂರು ಗ್ರಾಮದಲ್ಲಿ ಸರ್ಕಾರಿ ಶಾಲೆ ಮುಚ್ಚಿರುವುದು   

ಬಾಗೇಪಲ್ಲಿ: ಗಡಿ ತಾಲ್ಲೂಕಿನಲ್ಲಿ ಶಾಲೆಗಳಲ್ಲಿ ಶಿಕ್ಷಕರ ಸಮಸ್ಯೆ ತೀವ್ರವಾಗಿಯೇ ಬಾಧಿಸುತ್ತಿದೆ. ತಾಲ್ಲೂಕಿನ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 237 ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿ 41 ಶಿಕ್ಷಕರ ಹುದ್ದೆಗಳು ಖಾಲಿ ಇದೆ.

ತಾಲ್ಲೂಕಿನ 275 ಸರ್ಕಾರಿ ಶಾಲೆಗಳಿವೆ. ಇವುಗಳಲ್ಲಿ ಕಿರಿಯ ಪ್ರಾಥಮಿಕ 179, ಹಿರಿಯ ಪ್ರಾಥಮಿಕ 72 ಹಾಗೂ ಪ್ರೌಢಶಾಲೆ 34 ಇವೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ 713 ಮಂಜೂರಾದ ಹುದ್ದೆಗಳ ಪೈಕಿ 476 ಮಂದಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ 192 ಮಂಜೂರಾದ ಹುದ್ದೆಗಳ ಪೈಕಿ, 151 ಮಂದಿ ಕೆಲಸ ಮಾಡುತ್ತಿದ್ದಾರೆ. ಉಳಿದಂತೆ 41 ಮಂದಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ.

ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಬಾಗೇಪಲ್ಲಿ ತಾಲ್ಲೂಕು ಅತಿ ಹಿಂದುಳಿದಿದೆ. ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಪರಿಣಾತ್ಮಕವಾದ ಶಿಕ್ಷಣ ಅಗತ್ಯವಿದೆ. ಅತಿ ಹಿಂದುಳಿದ, ಗಡಿ ಗ್ರಾಮಗಳು, ತಾಂಡಾಗಳು ಇವೆ. ಕೆಲ ಗ್ರಾಮ, ತಾಂಡಾಗಳಿಗೆ ಕನಿಷ್ಠ ಮೂಲ ಸೌಲಭ್ಯಗಳ ಇಲ್ಲ. ಸಮರ್ಪಕವಾಗಿ ಸಾರಿಗೆ ಸೌಲಭ್ಯ ಇಲ್ಲ. ಮಕ್ಕಳು ಶಾಲೆಗಳಿಗೆ ಹೋಗಲು ಬೆಟ್ಟ ಗುಡ್ಡಗಳ ಕಿಲೋಮೀಟರ್‌ಗಟ್ಟಲೆ ನಡೆಯಬೇಕು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿಯೂ‌‌ ವಿವಿಧ ಹುದ್ದೆಗಳು ಖಾಲಿ ಇದೆ. ತಾಲ್ಲೂಕಿನ ಶಿಕ್ಷಣ ಇಲಾಖೆಯಲ್ಲಿ ಸರ್ಕಾರದಿಂದ ಮಂಜೂರಾದ 19 ಹುದ್ದೆಗಳ ಪೈಕಿ 7 ಮಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಉಳಿದಂತೆ 12 ಹುದ್ದೆಗಳು ಖಾಲಿ ಇದೆ. ಅಧೀಕ್ಷಕರು 2, ಪ್ರಥಮ ದರ್ಜೆ ಸಹಾಯಕರು 3, ದ್ವಿತೀಯ ದರ್ಜೆ ಸಹಾಯಕರು‌ 1, ಶಿಕ್ಷಣ ಸಂಯೋಜಕರು 2, ಚಾಲಕರು 1, ದೈಹಿಕ ಶಿಕ್ಷಣ ಪರಿವೀಕ್ಷಕರ ಒಂದು ಹುದ್ದೆಗಳು ಖಾಲಿ ಇದೆ.

ಮುಚ್ಚಿವೆ 60 ಶಾಲೆಗಳು:2012ರಿಂದ ಇಲ್ಲಿಯವರೆಗೂತಾಲ್ಲೂಕಿನಲ್ಲಿ 60 ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಬಾಗಿಲು ಮುಚ್ಚಿವೆ. ಪೋಷಕರ ಖಾಸಗಿ ಶಾಲೆಗಳ ವ್ಯಾಮೋಹದಿಂದ ಗ್ರಾಮೀಣ ಪ್ರದೇಶದ ಮಕ್ಕಳು ಖಾಸಗಿ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ. ಇದು ಸರ್ಕಾರಿ ಶಾಲೆಗಳು ಮುಚ್ಚಲು ಕಾರಣವಾಗಿದೆ. ತಾಲ್ಲೂಕಿನಲ್ಲಿ ಇದೀಗ ಎಂ.ನಲ್ಲಗುಟ್ಲಪಲ್ಲಿ ಕ್ಲಸ್ಟರ್ ನ ಕೊತ್ತಕೋಟವಾಂಡ್ಲಪಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ದುಗ್ಗಿನಾಯಕನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಮತ್ತೆ ಆರಂಭಿಸಲಾಗಿದೆ.

ಕೃಷಿ ಕೂಲಿಕಾರ್ಮಿಕರು, ಬಡವರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಾರೆ. ಆದರೆ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಮಕ್ಕಳ ಕೊರತೆಯಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಕಡಿವಾಣ ಹಾಕಬೇಕು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು. ಆಂಗ್ಲ ಮಾಧ್ಯಮದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಆರಂಭವಾಗಬೇಕು ಬೇಕು ಎಂದು ತೋಳ್ಳಪಲ್ಲಿರಾಮಾಂಜಿ ತಿಳಿಸಿದರು.

ಸರ್ಕಾರಿ ಶಾಲೆಗಳ ಮೇಲೆ ಪೋಷಕರು ವ್ಯಾಮೋಹ ಬೆಳೆಸಿಕೊಳ್ಳಬೇಕು. ಗಡಿ ತಾಲ್ಲೂಕಿನಲ್ಲಿ ವಿಷಯವಾರು ಶಿಕ್ಷಕರ ಕೊರತೆ ಹೆಚ್ಚಾಗಿದೆ. ವಿಷಯಗಳು ಕಲಿಸಬೇಕಾದ ಶಿಕ್ಷಕರು ಇಲ್ಲದಿರುವುದರಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಂದರೆ ಆಗಿದೆ ಎಂದು ಮುಮ್ಮಡಿವಾರಿಪಲ್ಲಿ ಶ್ರೀನಿವಾಸ್ ತಿಳಿಸಿದರು.

ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ, ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲ. ಮಕ್ಕಳಿಗೆ ವಿಷಯಗಳ ಕಲಿಕೆ ಕಷ್ಟ ಆಗಿದೆ. ಒಬ್ಬ ಶಿಕ್ಷಕರೇ ಎಲ್ಲ ವಿಷಯಗಳನ್ನು ಬೋಧಿಸುತ್ತಾರೆ. ಸರ್ಕಾರ ಕೂಡಲೇ ಕಾಯಂ ಅಥವಾ ಅತಿಥಿ ಶಿಕ್ಷಕರನ್ನು ನೇಮಿಸಬೇಕು ಎಂದು ಪಿಚ್ಚರವಾರಿಪಲ್ಲಿ ಗ್ರಾಮದ ನಾಗಭೂಷಣ್ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.