ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ‘ಸಪ್ತಪದಿ’ ಯೋಜನೆಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯೋಜನೆ ಜಾರಿಯಾದ ನಂತರ ಇಲ್ಲಿಯವರೆಗೆ ‘ಸಪ್ತಪದಿ’ಯಡಿ 7 ಜೋಡಿಗಳಷ್ಟೇ ದಾಂಪತ್ಯಕ್ಕೆ ಕಾಲಿಟ್ಟಿವೆ.
2019ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ನೇತೃತ್ವದ ಸರ್ಕಾರ ಸಪ್ತಪದಿ ಸಾಮೂಹಿಕ ವಿವಾಹ ಜಾರಿಗೊಳಿಸಿತು. ಮುಜರಾಯಿ ಇಲಾಖೆಗೆ ಒಳಪಟ್ಟ ‘ಎ’ ದರ್ಜೆಯ ದೇವಸ್ಥಾನಗಳಲ್ಲಿ ಸರ್ಕಾರದಿಂದಲೇ ಸಾಮೂಹಿಕ ವಿವಾಹ ಹಮ್ಮಿಕೊಳ್ಳುವುದು ಈ ಯೋಜನೆಯ ಉದ್ದೇಶ.
ವಿವಾಹಕ್ಕೆ ದುಂದುವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿರುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ‘ಸಪ್ತಪದಿ’ ಹೆಸರಿನಲ್ಲಿ ಸಾಮೂಹಿಕ ವಿವಾಹ ಯೋಜನೆ ರೂಪಿಸಿತ್ತು. ಭಕ್ತರು ಭಕ್ತಿಯಿಂದ ದೇಗುಲಕ್ಕೆ ನೀಡಿದ ಹಣವನ್ನು ಭಕ್ತರ ಕಲ್ಯಾಣಕ್ಕಾಗಿಯೇ ಸದ್ಬಳಕೆ ಮಾಡಬೇಕು ಎಂಬುದು ಸರ್ಕಾರದ ವಿಚಾರವಾಗಿತ್ತು.
ಈ ಯೋಜನೆಯಡಿ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದ ಅಶ್ವತ್ಥನಾರಾಯಣ ಸ್ವಾಮಿ ದೇಗುಲವನ್ನು ಸರ್ಕಾರ ಆಯ್ಕೆ ಮಾಡಿದೆ. ದೇವಾಲಯದಲ್ಲಿ ಹಣದ ಕೊರತೆ, ದಾಖಲೆಗಳ ಪರಿಶೀಲನೆಯ ಹೊರೆ, ಜೋಡಿಗಳ ನೋಂದಣಿಗೆ ನಿರಾಸಕ್ತಿ, ಸಿಬ್ಬಂದಿ ಕೊರತೆ ಹೀಗೆ ನಾನಾ ಕಾರಣದಿಂದ ಜಿಲ್ಲೆಯಲ್ಲಿ ಸಪ್ತಪದಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಪ್ತಪದಿ ಯೋಜನೆಯಡಿ ಇಲ್ಲಿಯವರೆಗೆ ವಿದುರಾಶ್ವತ್ಥದಲ್ಲಿ 7 ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಯಾವುದೇ ವಿವಾಹಗಳು ಈ ಯೋಜನೆಯಡಿ ದೇಗುಲದಲ್ಲಿ ನಡೆದಿಲ್ಲ. ಈ ಹಿಂದೆ ಕೆಲವು ವೇಳೆ ಸಾಮೂಹಿಕ ವಿವಾಹಕ್ಕೆ ಹೆಸರು ನೋಂದಣಿಗೆ ಅವಕಾಶ ನೀಡಲಾಗಿತ್ತು. ಆದರೆ ಯಾರೂ ನೋಂದಣಿ ಮಾಡಿಕೊಳ್ಳಲಿಲ್ಲ.
ವಿದುರಾಶ್ವತ್ಥದ ಅಶ್ವತ್ಥನಾರಾಯಣ ಸ್ವಾಮಿ ದೇಗುಲದಲ್ಲಿ 2022ರಲ್ಲಿ ‘ಸಪ್ತಪದಿ’ ಯೋಜನೆಯಡಿ ವಿವಾಹ ಕಾರ್ಯಕ್ರಮವನ್ನು ನಡೆಸಬೇಕಿತ್ತು. ಆದರೆ ದೇಗುಲದ ಹಣವನ್ನು ಕಸವಿಲೇವಾರಿ ಘಟಕ ನಿರ್ಮಾಣಕ್ಕೆ ಬಳಸಿಕೊಂಡ ಪರಿಣಾಮ ಆ ವರ್ಷ ದೇಗುಲದಲ್ಲಿ ‘ಸಪ್ತಪದಿ’ ಯೋಜನೆ ಜಾರಿಯಾಗಲಿಲ್ಲ.
ಜಿಲ್ಲೆಯ ಆರು ತಾಲ್ಲೂಕುಗಳಿಗೆ ಆಯ್ಕೆ ಆಗಿದ್ದು ಮಾತ್ರ ಇದೊಂದೇ ದೇಗುಲ. ಜಿಲ್ಲೆಯ ಯಾವುದೇ ಭಾಗದ ವಧು, ವರ ಸಪ್ತಪದಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡರೆ ಆ ಜೋಡಿ ನಿಗದಿತ ದಿನ ಈ ದೇಗುಲಕ್ಕೆ ಬಂದು ವಿವಾಹ ಆಗಬೇಕು. ಸರ್ಕಾರ ನಿಗದಿ ದಿನ ಈ ‘ಸಪ್ತಪದಿ’ ಯೋಜನೆಯಡಿ ವಿವಾಹ ನಡೆಸಲು ಸೂಚನೆಗಳನ್ನು ನೀಡುತ್ತದೆ. ಆ ಪ್ರಕಾರ ದೇಗುಲಗಳ ಆಡಳಿತಾಧಿಕಾರಿಗಳು ಪ್ರಕಟಣೆ ಸಹ ಹೊರಡಿಸುವರು.
ಯೋಜನೆಯ ಸೌಲಭ್ಯ: ‘ಸಪ್ತಪದಿ ಸಾಮೂಹಿಕ ವಿವಾಹ’ದಡಿ ವಧುವಿಗೆ ₹ 10 ಸಾವಿರ, ವರನಿಗೆ ₹ 5 ಸಾವಿರ ನಗದು, ವಧುವಿಗೆ ₹ 40 ಸಾವಿರ ಮೌಲ್ಯದ ಚಿನ್ನದ ತಾಳಿ ನೀಡಲಾಗುತ್ತದೆ. ಕಂದಾಯ ಇಲಾಖೆಯಿಂದ ₹ 10 ಸಾವಿರ ನಿಶ್ಚಿತ ಠೇವಣಿ ಸೌಲಭ್ಯ ಇದೆ. ಪರಿಶಿಷ್ಟ ಜಾತಿ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ₹ 50 ಸಾವಿರ ನೀಡಲಾಗುತ್ತದೆ. ವಧು ಮತ್ತು ವರನಿಗೆ ಪ್ರೋತ್ಸಾಹ ಧನ, ತಾಳಿ, ಚಿನ್ನದ ಗುಂಡು ಹೀಗೆ ಒಂದು ಜೋಡಿಗೆ ₹ 55,000ವನ್ನು ದೇವಾಲಯದ ನಿಧಿಯಿಂದ ಭರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.