
ಶಿಡ್ಲಘಟ್ಟ: ತಾಲ್ಲೂಕಿನ ಅತಿದೊಡ್ಡ ಕೆರೆ ಮತ್ತು ಜಿಲ್ಲೆಯಲ್ಲೇ ಎರಡನೇ ಅತಿದೊಡ್ಡ ಕೆರೆಯಾಗಿರುವ ಎಸ್. ದೇವಗಾನಹಳ್ಳಿಯ ರಾಮಸಮುದ್ರ ಕೆರೆಯು ಬುಧವಾರ ಭರ್ತಿಯಾಗಿ, ಕೋಡಿ ಹರಿದಿದೆ.
ತಾಲ್ಲೂಕಿನ ಉತ್ತರ ಭಾಗದಲ್ಲಿ ಬೆಟ್ಟ ಗುಡ್ಡಗಳ ಸಾಲಿನ ನಡುವೆ ಸಾಕಷ್ಟು ಕೆರೆಗಳಿದ್ದು, ಅವುಗಳ ಪೈಕಿ ತಲಕಾಯಲಬೆಟ್ಟದ ವೆಂಕಟೇಶ್ವರ ಸಾಗರ ಹಾಗೂ ಎಸ್.ದೇವಗಾನಹಳ್ಳಿಯ ರಾಮಸಮುದ್ರ ಕೆರೆ ಹೊರತುಪಡಿಸಿ ಉಳಿದೆಲ್ಲವೂ ಸಣ್ಣಪುಟ್ಟ ಕೆರೆಗಳೇ ಆಗಿವೆ.
ಮೈಸೂರು ಸಂಸ್ಥಾನದ ಚಾಮರಾಜ ಒಡೆಯರ್ ಅವರ ಕಾಲದಲ್ಲಿ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ಸುಮಾರು 130 ವರ್ಷಗಳ ಹಿಂದೆ ನಿರ್ಮಿಸಿದ್ದ ರಾಮಸಮುದ್ರ ಕೆರೆಯು ಸುಮಾರು 900 ಎಕರೆಯಷ್ಟು ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಈ ಮೂಲಕ ಈ ಕೆರೆಯು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಜೀವನಾಡಿಯಾಗಿದೆ.
ಕೆರೆ ಕೋಡಿ ಹರಿದಿರುವುದರಿಂದ ಹಲವಾರು ಹಳ್ಳಿಗರಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಬೋಯನಹಳ್ಳಿ, ಕೂತನಹಳ್ಳಿ ಮೂಲಕ ಪೆರೇಸಂದ್ರಕ್ಕೆ ಹೋಗುವ ದಾರಿಯಲ್ಲಿ ಈಗ ರಾಮಸಮುದ್ರ ಕೆರೆ ನೀರು ಹರಿದು ಹೋಗುತ್ತಿದೆ. ಎಸ್. ಗುಂಡ್ಲಹಳ್ಳಿ, ಎಸ್.ದೇವಗಾನಹಳ್ಳಿ, ಎರ್ರನಾಗೇನಹಳ್ಳಿ, ಇರಗಪ್ಪನಹಳ್ಳಿ, ಕೊಂಡಪ್ಪಗಾರಹಳ್ಳಿ, ಜರಗಹಳ್ಳಿ, ಗಡಿಮಿಂಚೇನಹಳ್ಳಿ, ಚಾಕಪ್ಪನಹಳ್ಳಿ, ವರದಗಾನಹಳ್ಳಿ, ಎಸ್.ದೇವಗಾನಹಳ್ಳಿ, ಎಸ್.ಕುರುಬರಹಳ್ಳಿ, ನಿಲುವರಾತಹಳ್ಳಿ, ಉಪ್ಪುಕುಂಟಹಳ್ಳಿ, ನಳಪ್ಪನಹಳ್ಳಿ ಸೇರಿದಂತೆ ಇತರ ಗ್ರಾಮಗಳ ಮಧ್ಯೆ ಸಂಪರ್ಕ ಕಡಿತಗೊಂಡಿದೆ.
ಪ್ರತಿದಿನ ತರಕಾರಿ, ಹೂವು ಸೇರಿದಂತೆ ರೈತರು ಬೆಳೆದ ಉತ್ಪನ್ನಗಳನ್ನು ಸಾಗಿಸಲು ಇರುವ ಪ್ರಮುಖ ರಸ್ತೆ ಇದು. ಕೆರೆ ಕೋಡಿ ಬಿದ್ದಿರುವುದರಿಂದ ರಸ್ತೆ ಮುಚ್ಚಿ ಹೋಗಿದೆ. ಅಲ್ಲದೆ, ಎಸ್. ಗುಂಡ್ಲಹಳ್ಳಿ ಗ್ರಾಮಸ್ಥರು ಈಗ ತಮ್ಮ ಹೊಲ ಗದ್ದೆಗಳಿಗೆ ತೆರಳಲು ಆಗುತ್ತಿಲ್ಲ. ಇಲ್ಲಿ ಸೇತುವೆ ನಿರ್ಮಾಣ ಮಾಡಬೇಕು ಎಂದು ಎಸ್. ಗುಂಡ್ಲಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೋಡಿ ಹರಿದ ಹಳೇಹಳ್ಳಿ ಕೆರೆ
ತಾಲ್ಲೂಕಿನ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳೇಹಳ್ಳಿಕೆರೆ ಕೋಡಿ ಬಿದ್ದಿದೆ. ತಲಕಾಯಲಬೆಟ್ಟದ ಹಿಂಭಾಗದಲ್ಲಿ ಬಿದ್ದ ನೀರು ಹರಿದು ಕರಿಯಪ್ಪನಹಳ್ಳಿ ಕೆರೆಗೆ ಹೋಗುತ್ತದೆ. ಅದು ತುಂಬಿದ ಬಳಿಕ ಹಳೇಹಳ್ಳಿಕೆರೆಗೆ ಹರಿಯುತ್ತದೆ. ಅಲ್ಲಿಂದ ಶೆಟ್ಟಿಕೆರೆ ಚೇಳೂರು ಮೂಲಕ ಕಂದುಕೂರು ಕೆರೆಗೆ ಹರಿಯುತ್ತದೆ.
ಆರು ವರ್ಷಗಳ ಹಿಂದೆ ಹಳೇಹಳ್ಳಿ ಕೆರೆ ತುಂಬಿ ಹರಿದಿತ್ತು. ಇದೀಗ ಮತ್ತೆ ಕೋಡಿ ಹರಿದಿರುವುದು ಸಂತಸ ತಂದಿದೆ. ಕೆರೆಯಲ್ಲಿರುವ ಜಾಲಿ ಮರಗಳನ್ನು ತೆರವುಗೊಳಿಸಬೇಕು. ಹೂಳು ಎತ್ತಬೇಕು. ಆಗ ಹೆಚ್ಚು ನೀರನ್ನು ಕೆರೆಯಲ್ಲಿ ಶೇಖರಿಸಬಹುದು. ಬೇಸಿಗೆಯಲ್ಲಿ ಕುರಿಗಳು ಮೇಯಿಸಲು ಅನುಕೂಲವಾಗಲಿದೆ ಎಂದು ಹಳೇಹಳ್ಳಿಯ ಎಚ್.ಬಿ.ಕೃಷ್ಣಾ ರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.