ADVERTISEMENT

ಗ್ರಾಮಗಳಲ್ಲಿ ಕೆರೆ, ಸ್ಮಶಾನ, ಗೋಮಾಳಗಳ ಒತ್ತುವರಿಯನ್ನು ತಡೆಗಟ್ಟಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2023, 16:11 IST
Last Updated 25 ಅಕ್ಟೋಬರ್ 2023, 16:11 IST
ಚಿಂತಾಮಣಿಯಲ್ಲಿ ಬುಧವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು
ಚಿಂತಾಮಣಿಯಲ್ಲಿ ಬುಧವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು   

ಚಿಂತಾಮಣಿ: ತಾಲ್ಲೂಕಿನಲ್ಲಿ ಸ್ಮಶಾನಗಳು ಮತ್ತು ಕೆರೆ ಒತ್ತುವರಿಯನ್ನು ತೆರವುಗೊಳಿಸುವ ಬಗ್ಗೆ ಕ್ರಮಕೈಗೊಳ್ಳದ ಕಂದಾಯ ಅಧಿಕಾರಿಗಳು ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ಮುಂದೆ ಧರಣಿ ಕುಳಿತರು.

ತಾಲ್ಲೂಕಿನಾದ್ಯಂತ ಅನೇಕ ಗ್ರಾಮಗಳಲ್ಲಿ ಕೆರೆ, ಸ್ಮಶಾನ, ಗೋಮಾಳ ಒತ್ತುವರಿಯಾಗಲು ಕಂದಾಯ ಅಧಿಕಾರಿಗಳೇ ಕಾರಣ. ಅವರ ಭ್ರಷ್ಟಾಚಾರ, ನಿಷ್ಕ್ರಿಯತೆಯಿಂದ ಸರ್ಕಾರಿ ಜಮೀನುಗಳು ಯಥೇಚ್ಚವಾಗಿ ಕಬಳಿಕೆಯಾಗುತ್ತಿವೆ. ಸರ್ಕಾರಿ ಆಸ್ತಿಗಳನ್ನು ಕಾಪಾಡುವ ಹೊಣೆಗಾರಿಕೆ, ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಲಂಚದ ಆಸೆಗಾಗಿ ಪರೋಕ್ಷವಾಗಿ ಭೂಗಳ್ಳರೊಂದಿಗೆ ಶಾಮೀಲಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ADVERTISEMENT

ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಕೆರೆ, ಸ್ಮಶಾನ, ಗೋಮಾಳಗಳ ಒತ್ತುವರಿ ತೆರವುಗೊಳಿಸಬೇಕು. ಭೂಗಳ್ಳರೊಂದಿಗೆ ಶಾಮೀಲಾಗಿರುವ ಭ್ರಷ್ಟ ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಪ್ರತಿಭಟನಾರಾರರು ಎಚ್ಚರಿಸಿದರು.

ತಹಶೀಲ್ದಾರ್ ಸುದರ್ಶನ ಯಾದವ್ ಮನವಿ ಸ್ವೀಕರಿಸಿದರು. ಕೆಆರ್‌ಎಸ್ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಖಯ್ಯೂಮ್, ಪದಾಧಿಕಾರಿಗಳಾದ ಶಿವಾರೆಡ್ಡಿ, ಎಸ್.ಎ.ಶಬ್ಬೀರ್ ಪಾಷಾ, ವಿಶ್ವನಾಥ್, ಜೆ.ನಾಗರಾಜ್, ರಿಯಾಜ್ ಪಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.