ADVERTISEMENT

ಭೂ ವಿವಾದ: ‘ಮಾರ್ಗಸೂಚಿ’ ಪಾಲಿಸಿ

ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 5:53 IST
Last Updated 15 ಜುಲೈ 2022, 5:53 IST
ಡಿ.ಎಲ್. ನಾಗೇಶ್
ಡಿ.ಎಲ್. ನಾಗೇಶ್   

ಚಿಕ್ಕಬಳ್ಳಾಪುರ:‘ಭೂ ವಿವಾದಗಳ ಪರಿಹಾರ ವಿಚಾರವಾಗಿ ಪೊಲೀಸ್ ಪ್ರಧಾನ ಕಚೇರಿಯಿಂದ ಸುತ್ತೋಲೆ ಮತ್ತು ಮಾರ್ಗಸೂಚಿಗಳಿವೆ. ಆ ಮಾರ್ಗಸೂಚಿ ಅನ್ವಯ ಅಧಿಕಾರಿಗಳು ವ್ಯವಹರಿಸಬೇಕು. ಸಮಸ್ಯೆ ಪರಿಹರಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್ ಸೂಚಿಸಿದ್ದಾರೆ.

ನೂತನ ಎಸ್‌.ಪಿ ಅವರು ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ವಿವಿಧ ವಿಷಯ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

ಅಂತರರಾಜ್ಯ ಅಪರಾಧ ಪ್ರಕರಣಗಳಿಗೆ ಕಡಿವಾಣ, ಮತ್ತಷ್ಟು ಜನಸ್ನೇಹಿಯಾಗಿ ಇಲಾಖೆಯನ್ನು ರೂಪಿಸುವ ವಿಚಾರಗಳು ಅವರ ಮಾತಿನಲ್ಲಿ ಇಣುಕಿತು.

ADVERTISEMENT

ಸಮಸ್ಯೆಗಳನ್ನು ಹೊತ್ತು ಸಾರ್ವಜನಿಕರು ಎಸ್‌.ಪಿ ಅವರನ್ನು ಭೇಟಿ ಆಗುತ್ತಿದ್ದಾರೆ. ಇವುಗಳಲ್ಲಿ ಬಹಳಷ್ಟು ಮಂದಿ ಸಿವಿಲ್ ಪ್ರಕರಣಗಳ ವಿವಾದಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

‘ಜಿಲ್ಲೆಯಲ್ಲಿ ಪ್ರಮುಖವಾಗಿ ಸಿವಿಲ್ ಪ್ರಕರಣಗಳು ಹೆಚ್ಚುತ್ತಿವೆ. ಈ ಪ್ರಕರಣದ ವಿಚಾರವಾಗಿ ಪೊಲೀಸರಿಗೆ ಸಂಬಂಧವಿಲ್ಲ ಎಂದರೂ ಗಲಾಟೆ, ಹೊಡೆದಾಟಗಳು ಸಂಭವಿಸಿದಾದ ನಮ್ಮ ಪಾತ್ರ ಇರುತ್ತದೆ. ಭೂವಿವಾದ ಪರಿಹಾರ ವಿಚಾರವಾಗಿ ಕಾನೂನಾತ್ಮಕವಾಗಿ ಮತ್ತು ಪೊಲೀಸ್ ಪ್ರಧಾನ ಕಚೇರಿಯಿಂದ ಕೆಲವು ಮಾರ್ಗಸೂಚಿಗಳು ಇವೆ. ಆ ಆಧಾರದಲ್ಲಿದಾಖಲೆಗಳನ್ನು ಪರಿಶೀಲಿಸಿ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ’ ಎಂದು ತಿಳಿಸಿದರು.

ನಿರ್ಲಕ್ಷ್ಯ ತೋರಿದರೆ ಕ್ರಮ: ‘ಚಿಕ್ಕಬಳ್ಳಾಪುರ ಜಿಲ್ಲೆಯು ಬೆಂಗಳೂರಿಗೆ ಸಮೀಪವಿದೆ. ಬೆಂಗಳೂರಿನ ಅಪರಾಧ ಚಟುವಟಿಕೆಗಳ ಪರಿಣಾಮ ಮತ್ತು ಪ್ರಭಾವ ಜಿಲ್ಲೆಯ ಮೇಲೂ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು.

ಅಪರಾಧ ಚಟುವಟಿಕೆ ಕುರಿತು ಸಾರ್ವಜನಿಕರು ಮತ್ತು ನಮ್ಮದೇ ಆದ ಮೂಲಗಳಿಂದ ಮಾಹಿತಿ ಕಲೆ ಹಾಕಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದರೆ ಅವರ ಮೇಲೆ ಶಿಸ್ತುಕ್ರಮ ಜರುಗಿಸಲಾಗು ವುದು. ಈ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ ಎಂದರು.

ಠಾಣೆಗಳಲ್ಲಿ ಸ್ಪಂದಿಸುವುದಿಲ್ಲ. ಅವಾಚ್ಯವಾಗಿ ಮಾತನಾಡುತ್ತಾರೆ. ವರ್ತನೆ ಸರಿ ಇಲ್ಲ ಎನ್ನುವ ದೂರುಗಳು ಸಹ ಬರುತ್ತವೆ. ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಇಂತಹ ಧೋರಣೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸಾರ್ವಜನಿಕರು ಠಾಣೆಗಳಿಗೆ ಬಂದಾಗ ಕೂರಿಸಿ ಮಾತನಾಡಬೇಕು. ಕುಡಿಯಲು ನೀರು ಇಟ್ಟಿರಬೇಕು. ಪ್ರತಿ ಠಾಣೆಗಳಲ್ಲಿ ರಿಜಿಸ್ಟಾರ್‌ಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.

ಜನರ ಸಮಸ್ಯೆ ಏನು ಎನ್ನುವುದನ್ನು ಕೇಳಿಸಿಕೊಳ್ಳಬೇಕು. ಸಮಸ್ಯೆಯು ಇಲಾಖೆ ವ್ಯಾಪ್ತಿಯಿಂದ ಹೊರಗಿನದ್ದಾಗಿದ್ದರೆ ಯಾರನ್ನು ಭೇಟಿ ಮಾಡಬೇಕು, ಯಾವ ರೀತಿ ಮುಂದಿನ ಹೆಜ್ಜೆ ಇಡಬೇಕು ಎಂದು ಮಾರ್ಗದರ್ಶನವನ್ನು ಸಿಬ್ಬಂದಿ ನೀಡಬೇಕು ಎಂದು ಸೂಚಿಸಿದರು.

ಸಮಸ್ಯೆಗಳ ಪರಿಹಾರ: ನಾಲ್ಕರಿಂದ ಐದು ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿವಿಲ್ ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುತ್ತದೆ. ನಾನು ಬರುವ ಮುನ್ನವೇ ಈ ಪ್ರಕ್ರಿಯೆಗಳು ನಡೆದಿವೆ. ನಿತ್ಯ ಇಬ್ಬರಾದರೂ ಇಲಾಖೆಯ ಸಿಬ್ಬಂದಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಭೇಟಿ ಮಾಡುತ್ತಿದ್ದಾರೆ. ನಮ್ಮ ಮಟ್ಟದಲ್ಲಿ ಪರಿಹಾರವಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಪರಿಹಾರ ಸಾಧ್ಯವಿಲ್ಲದ ಸಮಸ್ಯೆಗಳಿಗೆ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ. ಕಾನೂನು ಪ್ರಕಾರವೇ ಸಿಬ್ಬಂದಿಯ ಕುಂದುಕೊರತೆ ಪರಿಹರಿಸಲಾಗುವುದು ಎಂದು ತಿಳಿಸಿದರು.

‘ನಾನು ಎರಡು ಠಾಣೆಗಳನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲಾ ಠಾಣೆಗಳಿಗೂ ಭೇಟಿ ನೀಡಿದ್ದೇನೆ. ನಿಮ್ಮ ಕುಂದುಕೊರತೆಗಳು ಇದ್ದರೆ ಹೇಳಿ ಎಂದಿದ್ದೇನೆ’ ಎಂದರು.

‘112’ ಅನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳ ಬೇಕಾಗಿದೆ.ಸಣ್ಣಪುಟ್ಟ ಗಲಾಟೆಗಳು, ಅಪಘಾತ,ಅಕ್ರಮ ಮದ್ಯ ಮಾರಾಟ, ಜೂಜು ಹೀಗೆ ವಿವಿಧ ಅಕ್ರಮಗಳ ಬಗ್ಗೆ 112ಗೆ ಮಾಹಿತಿ ನೀಡಬಹುದು. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ 112ರ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.