ADVERTISEMENT

ಚಿಂತಾಮಣಿ: ಜಮೀನು ವಿವಾದ: ಮಕ್ಕಳೊಂದಿಗೆ ಟವರ್ ಏರಿದ!

ಕಂದಾಯ, ಪೊಲೀಸ್ ಅಧಿಕಾರಿಗಳಿಂದ ಮನವೊಲಿಕೆ l ಪ್ರಕರಣ ಸುಖಾಂತ್ಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 5:24 IST
Last Updated 5 ಫೆಬ್ರುವರಿ 2023, 5:24 IST
ಚಿಂತಾಮಣಿ ಹೊರವಲಯದ ಕನಂಪಲ್ಲಿ ಬಳಿಯ ಮೊಬೈಲ್ ಟವರ್ ಏರಿ ಕುಳಿತಿದ್ದ ತಂದೆ ಮತ್ತು ಅವರ ಮೂವರು ಮಕ್ಕಳನ್ನು ಅಗ್ನಿಶಾಮಕದಳದ ಸಿಬ್ಬಂದಿ ಕೆಳಕ್ಕೆ ಇಳಿಸುತ್ತಿರುವುದು
ಚಿಂತಾಮಣಿ ಹೊರವಲಯದ ಕನಂಪಲ್ಲಿ ಬಳಿಯ ಮೊಬೈಲ್ ಟವರ್ ಏರಿ ಕುಳಿತಿದ್ದ ತಂದೆ ಮತ್ತು ಅವರ ಮೂವರು ಮಕ್ಕಳನ್ನು ಅಗ್ನಿಶಾಮಕದಳದ ಸಿಬ್ಬಂದಿ ಕೆಳಕ್ಕೆ ಇಳಿಸುತ್ತಿರುವುದು   

ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲ ಹೋಬಳಿಯ ಕನಂಪಲ್ಲಿ ಗ್ರಾಮದಲ್ಲಿ ಅಧಿಕಾರಿಗಳು ತನ್ನ ಜಮೀನು ವಿವಾದ ಬಗೆಹರಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳೊಂದಿಗೆ ಶನಿವಾರ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ.

ತಾಲ್ಲೂಕಿನ ಮುರುಗಮಲ್ಲ ಹೋಬಳಿಯ ಭೂಮಿಶೆಟ್ಟಿಹಳ್ಳಿ ಗ್ರಾ. ಪಂ ವ್ಯಾಪ್ತಿಯ ಮೂಗಲಮರಿ ಗ್ರಾಮದ ಗಂಗರಾಜು (35) ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಬೆಳಿಗ್ಗೆಯೇ ಟವರ್ ಏರಿದರು. ಇದರಿಂದ ಗ್ರಾಮದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣೆ ಮತ್ತು ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಆತನ ಮನವೊಲಿಸಿ ಟವರ್‌ನಿಂದ ಕೆಳಗೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ADVERTISEMENT

‘ಮೂಗಲಮರಿ ಗ್ರಾಮದ ಸರ್ವೆ ಸಂಖ್ಯೆ 72ರಲ್ಲಿ 8.30 ಎಕರೆ ಜಮೀನಿನಲ್ಲಿ ನನ್ನ ತಂದೆಯ ಅಣ್ಣ-ತಮ್ಮಂದಿರು ಭಾಗವಾಗಿದ್ದು, ನನ್ನ ತಂದೆಗೆ 2.3 ಎಕರೆ ಜಮೀನು ಬಂದಿತ್ತು. ಇದರಲ್ಲಿ 30 ಗುಂಟೆಯನ್ನು ಮಾರಾಟ ಮಾಡಿದ್ದರು. ಆದರೆ, ನನ್ನ ತಂದೆ ದೊಡ್ಡ ನರಸಿಂಹಪ್ಪ ಅವಿದ್ಯಾವಂತರಾದ ಕಾರಣ ಅವರಿಂದ ಗ್ರಾಮದ ಕೃಷ್ಣಪ್ಪ, ರಾಮಣ್ಣ, ನಾರಾಯಣಸ್ವಾಮಿ ಎಂಬುವರು ಅಕ್ರಮವಾಗಿ 16 ಗುಂಟೆ ಜಮೀನು ಬರೆಸಿಕೊಂಡಿದ್ದಾರೆ’ ಎದು ಗಂಗರಾಜು
ಆರೋಪಿಸಿದರು.

‘ಎರಡು ಎಕರೆ ಜಮೀನಿನ ಪಹಣಿ ಮತ್ತು ಮ್ಯುಟೇಷನ್ ನಮ್ಮ ಹೆಸರಿನಲ್ಲಿದೆ. ಅದರಲ್ಲಿ 16 ಗುಂಟೆಯನ್ನು ಅಕ್ರಮಿಸಿಕೊಂಡಿರುವವರು ಪಹಣಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದಾರೆ. ಜಮೀನು ವಿವಾದದ ಬಗ್ಗೆ ನ್ಯಾಯ ಕೋರಿ ಪೊಲೀಸ್ ಠಾಣೆ, ಕಂದಾಯ ಇಲಾಖೆಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಮ್ಮ ದೂರಿನ ಬಗ್ಗೆ ಅಧಿಕಾರಿಗಳು ಸ್ಪಂದಿಸಲಿಲ್ಲ’ ಎಂದು ಗಂಗರಾಜು ದೂರಿದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಕ್ರೋಶಗೊಂಡ ಗಂಗರಾಜು ಮೊಬೈಲ್ ಟವರ್ ಏರಿ ನಮಗೆ ನ್ಯಾಯ ದೊರಕಿಸಿಕೊಡಿ, ಇಲ್ಲವೆ ಸಾಯಲು ಬಿಡಿ ಎಂದು ಬೇಡಿಕೆಯಿಟ್ಟಿದ್ದರು.

ತಹಶೀಲ್ದಾರ್ ರಾಜೇಂದ್ರ ಹಾಗೂ ಇತರೆ ಅಧಿಕಾರಿಗಳು ಗಂಗರಾಜು ಜತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದ ನಂತರ ಆತ್ಮಹತ್ಯೆ ಪ್ರಕರಣ ಸುಖಾಂತ್ಯ ಕಂಡಿದೆ. ಅಗ್ನಿಶಾಮಕ ಠಾಣೆ ಸಿಬ್ಬಂದಿ ಗಂಗರಾಜು ಮತ್ತು ಮಕ್ಕಳನ್ನು ಕೆಳಗೆ ಇಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.