ಗುಡಿಬಂಡೆ: ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕೋರೇನಹಳ್ಳಿ ಗ್ರಾಮಸ್ಥರಿಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಖಾಲಿ ನಿವೇಶನಗಳ ಹಕ್ಕು ಪತ್ರಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಈ ವರ್ಷದ ಅಂತ್ಯದ ಒಳಗೆ ಗುಡಿಬಂಡೆ ತಾಲ್ಲೂಕಿನ ಎಲ್ಲ ಹಳ್ಳಿ, ಪಟ್ಟಣ ವ್ಯಾಪ್ತಿಯ ನಿವೇಶನರಹಿತರಿಗೆ 4 ಸಾವಿರ ಉಚಿತ ನಿವೇಶನಗಳನ್ನು ನೀಡಲಾಗುವುದು’ ಎಂದು ಭರವಸೆ ನೀಡಿದರು.
ತಾಲ್ಲೂಕಿನ ಕೊಂಡರೆಡ್ಡಿಹಳ್ಳಿ ಗ್ರಾಮಸ್ಥರಿಗೆ ಹಕ್ಕುಪತ್ರ ವಿತರಣೆ ಮಾಡುತ್ತಿದ್ದ ಸ್ಥಳಕ್ಕೆ ಬಂದಿದ್ದ ಕೋರೇನಹಳ್ಳಿ ಗ್ರಾಮಸ್ಥರು ತಮಗೂ ಉಚಿತ ನಿವೇಶನ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಇದನ್ನು ಪರಿಗಣಿಸಿ, ಈಗ ಕೋರೇನಹಳ್ಳಿ ಗ್ರಾಮದ 26 ಫಲಾನುಭವಿಗಳಿಗೆ ಉಚಿತ ನಿವೇಶನದ ಹಕ್ಕುಪತ್ರಗಳನ್ನು ವಿತರಣೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಕಡೇಹಳ್ಳಿ ಗ್ರಾಮದಲ್ಲಿ ನಿವೇಶನ ಹಕ್ಕು ಪತ್ರ ನೀಡಲು ಕೆಲವು ತೊಡುಕುಗಳಿದ್ದು, ಅವುಗಳನ್ನು ಪರಿಹರಿಸಿ, ಶೀಘ್ರವೇ ಹಕ್ಕುಪತ್ರ ನೀಡಲಾಗುವುದು ಎಂದರು.
ತಹಶೀಲ್ದಾರ್ ಸಿಗ್ಬತುಲ್ಲಾ ಮಾತನಾಡಿ, ಬಡವರಿಗೆ ನಿವೇಶನ ನೀಡಲು ಜಾಗ ಗುರುತಿಸಿ ಹಸ್ತಾಂತರ ಮಾಡುವಂತೆ ಶಾಸಕರು ತಿಳಿಸಿದ್ದಾರೆ. ಈ ಪ್ರಕಾರ ಈಗಾಗಲೇ 80ಕ್ಕೂ ಹೆಚ್ಚು ಜಮೀನು ಗುರುತಿಸಲಾಗಿದೆ. ಫಲಾನುಭವಿಗಳಿಗೆ ಶೀಘ್ರವೇ ನಿವೇಶನ ಕಲ್ಪಿಸಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗಮಣಿ ಮಾತನಾಡಿದರು.
ಈ ಸಂಧರ್ಬದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಜಿ.ಎನ್.ಆದಿರೆಡ್ಡಿ, ಕೆ.ಡಿ.ಪಿ. ಸದಸ್ಯ ರಘುನಾಥರೆಡ್ಡಿ, ಪ್ರಕಾಶ್, ಪಿಡಿಒ ಮಮತ ಸೇರಿದಂತೆ ಮುಂತಾದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.