ADVERTISEMENT

ಗುಡಿಬಂಡೆ: ಶಿಥಿಲಗೊಂಡ ಶಾಲಾ ಕಟ್ಟಡದಲ್ಲೇ ಪಾಠ, ಅಧಿಕಾರಿಗಳ ಜಾಣ ಕುರುಡು ಪ್ರದರ್ಶನ

ಜೆ.ವೆಂಕಟರಾಯಪ್ಪ
Published 21 ಜನವರಿ 2023, 5:18 IST
Last Updated 21 ಜನವರಿ 2023, 5:18 IST
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ 157 ವರ್ಷಗಳ ಹಳೇ ಕಟ್ಟಡದಲ್ಲಿ ಒಂದು ಕಡೆ ಬಿಇಒ ಕಚೇರಿ ಮತ್ತು ಶಾಲೆ ಇದೆ (ಎಡಚಿತ್ರ). ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 285 ವಿದ್ಯಾರ್ಥಿಗಳಿದ್ದು ಚಿಕ್ಕಜಾಗದಲ್ಲಿ ಪ್ರಾರ್ಥನೆ ಮಾಡುತ್ತಿರುವುದು
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ 157 ವರ್ಷಗಳ ಹಳೇ ಕಟ್ಟಡದಲ್ಲಿ ಒಂದು ಕಡೆ ಬಿಇಒ ಕಚೇರಿ ಮತ್ತು ಶಾಲೆ ಇದೆ (ಎಡಚಿತ್ರ). ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 285 ವಿದ್ಯಾರ್ಥಿಗಳಿದ್ದು ಚಿಕ್ಕಜಾಗದಲ್ಲಿ ಪ್ರಾರ್ಥನೆ ಮಾಡುತ್ತಿರುವುದು   

ಗುಡಿಬಂಡೆ: ದೀಪದ ಕೆಳಗೆ ಕತ್ತಲು ಎನ್ನುವಂತೆ ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕರ್ನಾಟಕ ಪಬ್ಲಿಕ್‌ ಶಾಲೆ ಒಂದೇ ಕಟ್ಟಡದಲ್ಲಿದ್ದರೂ, ಶಾಲೆ ಮೂಲ ಸೌಕರ್ಯವಿಲ್ಲದೆ ನಲುಗಿದೆ. ಶಿಥಿಲಗೊಂಡಿರುವ ಕಟ್ಟಡದಲ್ಲೇ ಮಕ್ಕಳು ಪಾಠ ಕೇಳಬೇಕಾದ ದುಸ್ಥಿತಿ ಇದೆ.

157 ವರ್ಷಗಳ ಇತಿಹಾಸ ಹೊಂದಿದ್ದ ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆ 2017–18ರಿಂದ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಮೇಲ್ದರ್ಜೆಗೊಂಡಿದೆ. 1ರಿಂದ 7ನೇ ತರಗತಿ ವರೆಗೆ 285 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಥಿಲಗೊಂಡಿರುವ ಕಟ್ಟಡದಲ್ಲೇ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಶಿಕ್ಷಕರ ಕೊರತೆ ಸೇರಿದಂತೆ ಮೂಲ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಇದೇ ಕಟ್ಟಡದಲ್ಲಿ ಬಿಇಒ ಕಚೇರಿ ಕೂಡ ನಡೆಯುತ್ತಿದ್ದು, ಶಿಕ್ಷಣ ಅಧಿಕಾರಿಗಳು ಎಲ್ಲವನ್ನು ನೋಡಿಕೊಂಡು ಜಾಣಮೌನ ವಹಿಸಿದ್ದಾರೆ.

ADVERTISEMENT

ನೂತನವಾಗಿ ನಿರ್ಮಾಣವಾಗಿರುವ ಕೆಲ ಕೊಠಡಿಗಳ ಹೊರತುಪಡಿಸಿ ಶಾಲೆಯ ಶೇ 80 ರಷ್ಟು ಕೊಠಡಿಗಳು ಶಿಥಿಲಾವ್ಯಸ್ಥೆ ತಲುಪಿವೆ. ಮಳೆಗಾಲದಲ್ಲಿ ಸೋರುತ್ತವೆ. ಇದರಿಂದ ತರಗತಿ ನಡೆಸುವುದೇ ಕಷ್ಟವಾಗುತ್ತದೆ. ‌ಮಳೆಗಾಲ ಬರುವ ಮುನ್ನ ಶಾಲಾ ಕಟ್ಟಡ ದುರಸ್ತಿ ಆಗಬೇಕು ಎನ್ನುವುದು ಶಿಕ್ಷರು ಮತ್ತು ಪೋಷಕರ ಒತ್ತಾಯ.

ಆಟದ ಮೈದಾನ ಇಲ್ಲದೆ ಮಕ್ಕಳು ಕ್ರೀಡೆ ಚಟುವಟಿಕೆ ನಡೆಸುವುದು ಕಷ್ಟವಾಗಿದೆ. ಡೆಸ್ಕ್‌ಗಳ ಕೊರತೆಯಿಂದ ವಿದ್ಯಾರ್ಥಿಗಳು ಇಕ್ಕಟ್ಟಿನಲ್ಲಿ ಕುಳಿತುಕೊಳ್ಳಬೇಕು. ಇಲ್ಲವೆ ನೆಲದ ಮೇಲೆ ಕುಳಿತುಕೊಂಡು ಪಾಠ ಕೇಳುವ ದುಸ್ಥಿತಿ ಇದೆ.

ಶಾಲೆಯಲ್ಲಿರುವ 285 ಮಕ್ಕಳಿಗೆ ಇರುವುದು ಕೇವಲ ನಾಲ್ಕು ಶೌಚಾಲಯ. ಇದರಿಂದ ಮಕ್ಕಳು ಶೌಚಾಕ್ಕೂ ಪರದಾಡಬೇಕಿದೆ.

1865ರಲ್ಲಿ ಈ ಶಾಲೆ ನಿರ್ಮಾಣ ಆಗಿತ್ತು. ಮೊದಲಿಗೆ ನಾಲ್ಕು ಕೊಠಡಿಗಳಿದ್ದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಂತೆ ಕೊಠಡಿಗಳನ್ನು ಹೆಚ್ಚಿಸಲಾಯಿತು. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಿದ ಪರಿಣಾಮ ಬಾಡಿಗೆ ಕಟ್ಟಡದಲ್ಲಿದ್ದ ಬಿಇಒ ಕಚೇರಿಯನ್ನು 2005ರಲ್ಲಿ ಶಾಲೆಯ ನಾಲ್ಕು ಕಟ್ಟಡದಲ್ಲಿ ಆರಂಭಿಸಲಾಯಿತು.

ಉಳಿದ ಹಳೇ ಕಟ್ಟಡದ ಜೊತೆಗೆ ಸಿಆರ್‌ಪಿ ಕೇಂದ್ರ, ಹೊಸದಾಗಿ ಶೌಚಾಲಯ, ಐದು ಕೊಠಡಿ ನಿರ್ಮಾಣ ಮಾಡಲಾಯಿತು. 2017-18ರಲ್ಲಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಬದಲಾಯಿತು. ಆಗ 5ರಿಂದ 7 ತರಗತಿಯನ್ನೂ 8ನೇ ತರಗತಿವರೆಗೂ ವಿಸ್ತರಣೆ ಮಾಡಲಾಯಿತು. ಇದರಿಂದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿ ಹಾಗೂ ಶಿಕ್ಷಕರು ಇಲ್ಲದೆ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ ಸಮೀಪವೇ ಇರುವ ಶಿಕ್ಷಣ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಜಾಣ ಕುರುಡರಾಗಿದ್ದಾರೆ.

ಬಿಇಒ ಕಚೇರಿಗೆ ಸ್ವಂತ ಕಟ್ಟಡ ಇಲ್ಲದೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಯುತ್ತಿದೆ. ಈ ಬಗ್ಗೆ ಡಿಡಿಪಿಐ ಮತ್ತು ಶಾಸಕರ ಗಮನಕ್ಕೂ ತರಲಾಗಿದೆ. ಹಲವು ಬಾರಿ ಸ್ವಂತ ಕಟ್ಟಡ ಅಥವಾ ನಿವೇಶನಕ್ಕೆ ಹಾಗೂ ಶಾಲಾ ಸಮಸ್ಯೆ ಬಗೆಹರಿಸಲು ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ಸ್ಪಂದನೆ ದೊರೆತಿಲ್ಲ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಮುನೇಗೌಡ ತಿಳಿಸಿದರು.

ಹಾಲಿ ಕಟ್ಟಡ 157 ವರ್ಷಗಳ ಹಳೆಯದಾಗಿದ್ದು ಶಿಥಿಲಾವಸ್ಥೆಯಲ್ಲಿದೆ. ಮಳೆಗಾಲದಲ್ಲಿ ಸೊರುತ್ತಿದೆ. ಕಚೇರಿ ಕಡತಗಳು, ಕಂಪ್ಯೂಟರ್‌ಗಳಿಗೂ ಹಾನಿಯಾಗುತ್ತಿದೆ. ಬೇರೊಂದು ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಪಬ್ಲಿಕ್‌ ಶಾಲೆಯ 8ನೇ ತರಗತಿಯ ಇಂಗ್ಲಿಷ್‌, ವಿಜ್ಞಾನ, ಗಣಿತ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳಿಗೆ ಸರ್ಕಾರಿ ಪ್ರೌಢಶಾಲೆಗೆ ಕಳುಹಿಸಲಾಗುತ್ತಿದೆ. ನಾಲ್ಕು ವರ್ಷದಿಂದ ಇದೆ ಕಥೆಯಾಗಿದೆ.

2022-23ಕ್ಕೆ ಆಂಗ್ಲ, ವಿಜ್ಞಾನ, ಗಣಿತ, ಹಿಂದಿ, ಶಿಕ್ಷಕರ ಹುದ್ದೆ ಮಂಜೂರಾತಿ ಆಗಿದೆ. ಆದರೆ ಇನ್ನೂ ಶಿಕ್ಷಕರ ಭರ್ತಿ ಅಗಿಲ್ಲ. ಇದರ ಜತೆಗೆ ಎಲ್‌ಕೆಜಿ, ಯುಕೆಜಿ ಆರಂಭವಾಗಿ ಆರು 6 ವರ್ಷ ಕಳೆದರೂ ಇನ್ನೂ ಕಾಯಂ ಶಿಕ್ಷಕರ ನೇಮಕವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.