ADVERTISEMENT

ಗೌರಿಬಿದನೂರು | ಬಯಲು, ಗೋದಾಮಿನಲ್ಲೇ ಮಕ್ಕಳಿಗೆ ಪಾಠ!

ಎ.ಎಸ್.ಜಗನ್ನಾಥ್
Published 4 ಡಿಸೆಂಬರ್ 2023, 8:01 IST
Last Updated 4 ಡಿಸೆಂಬರ್ 2023, 8:01 IST
ಡಿ.ಪಾಳ್ಯ ದಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದಾಗಿ ರಂಗಮಂದಿರದಲ್ಲಿ ಕಲಿಯುತ್ತಿರುವ ಮಕ್ಕಳು
ಡಿ.ಪಾಳ್ಯ ದಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದಾಗಿ ರಂಗಮಂದಿರದಲ್ಲಿ ಕಲಿಯುತ್ತಿರುವ ಮಕ್ಕಳು   

ಗೌರಿಬಿದನೂರು: ತಾಲ್ಲೂಕಿನ ದಾರಿನಾಯಕನ ಪಾಳ್ಯದಲ್ಲಿನ (ಡಿ. ಪಾಳ್ಯ) ಕರ್ನಾಟಕ ಪಬ್ಲಿಕ್ ಶಾಲೆಗಾಗಿ ನೂತನ ಕಟ್ಟಡ ನಿರ್ಮಿಸಲಾಗಿದ್ದರೂ, ಜನಪ್ರತಿನಿಧಿಗಳಿಂದ ಉದ್ಘಾಟನೆಯಾಗಾದ ಕಾರಣ, ಶಾಲೆಯ ಮಕ್ಕಳು ಬಯಲು, ಗೋದಾಮು, ರಂಗಮಂದಿರಗಳಲ್ಲಿ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಏಕೈಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಸುಮಾರು 100 ವರ್ಷಗಳಷ್ಟು ಹಳೆಯದಾಗಿದ್ದು, ಕೆಲ ವರ್ಷಗಳ ಹಿಂದೆಯಷ್ಟೇ ಈ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಶಾಲೆಯು ಹಳೆಯದಾಗಿದ್ದರಿಂದ ನೂತನ ಕಟ್ಟಡ ಮಂಜೂರಾಗಿದೆ. 

ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು ₹ 66.74 ಲಕ್ಷ ಅನುದಾನದಲ್ಲಿ ನಾಲ್ಕು ಕೊಠಡಿಗಳ ಸುಸಜ್ಜಿತವಾದ ಕಟ್ಟಡವು ನಾಲ್ಕು ತಿಂಗಳ ಹಿಂದೆಯಷ್ಟೇ ಪೂರ್ಣವಾಗಿದೆ. ಆದರೆ, ಈ ಕೊಠಡಿಗಳಿಗೆ ಉದ್ಘಾಟನೆಯ ಭಾಗ್ಯ ದೊರೆಯದ ಕಾರಣ ಶಾಲಾ ಮಕ್ಕಳ ನಿತ್ಯ ಕಲಿಕೆಯು ಮರದಡಿ, ರಂಗಮಂದಿರ, ಅಡುಗೆ ಕೋಣೆ, ಆಟದ ಮೈದಾನ ಇಲ್ಲವೇ ಆಹಾರ ಧಾನ್ಯ ದಾಸ್ತಾನು ಕೊಠಡಿ, ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳಲ್ಲಿ ನಡೆಯುತ್ತಿವೆ. ದಾಖಲೆಗಳಲ್ಲಿ ಹೈಟೆಕ್ ಆಗಿರುವ ಶಾಲೆಯು ವಾಸ್ತವದಲ್ಲಿ ಬೇರೆಯ ಸ್ಥಿತಿಯನ್ನೇ ತೋರುತ್ತಿದೆ. 

ADVERTISEMENT

ಪ್ರಸ್ತುತ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ  ಎಲ್‌ಕೆಜಿ ಮತ್ತು ಯುಕೆಜಿ ಸೇರಿದಂತೆ ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೆ ಒಟ್ಟು 540 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಒಂದನೇ ತರಗತಿಯಲ್ಲಿ 41, ಎರಡರಲ್ಲಿ 56, ಮೂರರಲ್ಲಿ 53, ನಾಲ್ಕರಲ್ಲಿ 48, ಐದರಲ್ಲಿ 56, ಆರರಲ್ಲಿ 75, ಏಳರಲ್ಲಿ 53, ಎಂಟರಲ್ಲಿ 95, ಸೇರಿದಂತೆ ಒಟ್ಟು 478 ವಿದ್ಯಾರ್ಥಿಗಳು ಹಾಗೂ ಎಲ್‌ಕೆಜಿಯಲ್ಲಿ 25 ಮತ್ತು ಯುಕೆಜಿಯಲ್ಲಿ 37 ಸೇರಿದಂತೆ ಒಟ್ಟು 540 ವಿದ್ಯಾರ್ಥಿಗಳಿದ್ದಾರೆ.

ಎಲ್‌ಕೆಜಿ ಮತ್ತು ಯುಕೆಜಿ ಹೊರತುಪಡಿಸಿ ಉಳಿದ ಎಲ್ಲ ತರಗತಿಗಳು‌ ಕೂಡ ಪ್ರತ್ಯೇಕವಾಗಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿದ್ದಾರೆ. ಇವರಿಗೆ ನಿತ್ಯ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ‌ಕಲಿಸಲು 15 ಶಿಕ್ಷಕರಿದ್ದಾರೆ. ಆದರೆ ಮಕ್ಕಳ ಕಲಿಕೆಗೆ ಕೊಠಡಿಗಳ ಕೊರತೆ ಎದುರಾಗಿದೆ.

‘ತರಗತಿ ಕೊಠಡಿಗಳ ಸಮಸ್ಯೆಯಿಂದಾಗಿ ಒಂದೊಂದು ‌ಕೊಠಡಿಯಲ್ಲಿ ಎರಡು ತರಗತಿಗಳ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಜತೆಗೆ ಅಡುಗೆ ಕೋಣೆ, ರಂಗಮಂದಿರ, ಪ್ರಯೋಗಶಾಲೆ, ಕ್ಲಸ್ಟರ್ ಸಂಪನ್ಮೂಲ ಕೇಂದ್ರ, ಆಹಾರ ಸಾಮಗ್ರಿಗಳ ದಾಸ್ತಾನು ‌ಕೊಠಡಿ ಎಲ್ಲವನ್ನೂ ಬಳಕೆ ಮಾಡಿಕೊಂಡು ಮಕ್ಕಳಿಗೆ ಪಾಠ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನೂತನ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಸಿಗದ ಕಾರಣ ಅದನ್ನು ಬಳಕೆ ಮಾಡುತ್ತಿಲ್ಲ’ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಎಸ್.ದಯಾನಂದ ರೆಡ್ಡಿ.

‘ಶಾಲಾ ಆವರಣದಲ್ಲಿ ನಿತ್ಯ ನಡೆಯುವ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಜವಾಬ್ದಾರಿ ಅಲ್ಲಿನ ಶಿಕ್ಷಕರದ್ದಾಗಿರುತ್ತದೆ. ಬೋಧನೆಯ ಜತೆಗೆ ಮಕ್ಕಳಲ್ಲಿ ಶಿಸ್ತು, ಸಂಯಮ ಕಲಿಸಿ ಅವರ ರಕ್ಷಣೆ ಮಾಡುವ ಹೊಣೆಗಾರಿಕೆ ಇರುತ್ತದೆ. ಉತ್ತಮ ಆರೋಗ್ಯದ ದೃಷ್ಟಿಯಿಂದ ತರಗತಿ ಕೊಠಡಿಗಳ ವಸ್ತುಸ್ಥಿತಿಗಳ ಬಗ್ಗೆ ಗಮನಿಸಬೇಕಾಗಿದೆ. ಜತೆಗೆ ಆಹಾರ ಸಾಮಗ್ರಿಗಳನ್ನು ದಾಸ್ತಾನು ಮಾಡುವ ಅಕ್ಷರ ದಾಸೋಹದ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಆಹಾರ ದಾಸ್ತಾನು, ಅಡುಗೆ ಕೋಣೆ, ಧಾನ್ಯಗಳ ಗುಣಮಟ್ಟ ಎಲ್ಲವನ್ನೂ ಪರಿಶೀಲನೆ ಮಾಡಬೇಕಾಗಿದೆ’ ಎನ್ನುತ್ತಾರೆ ಕ್ಷೇತ್ರ ಸಮನ್ವಯಾಧಿಕಾರಿ ಜಿ.ಗಂಗರೆಡ್ಡಿ.

‘ಡಿ.ಪಾಳ್ಯದಲ್ಲಿನ ಸರ್ಕಾರಿ ಶಾಲೆಗೆ ಶತಮಾನದ ಇತಿಹಾಸವಿದೆ. ತಾಲ್ಲೂಕಿನಲ್ಲಿಯೇ ಮೊದಲ ಪಬ್ಲಿಕ್ ಶಾಲೆ ಎಂಬ ಹೆಗ್ಗಳಿಕೆ ಇದೆ. ಆದರೆ ಇಲ್ಲಿನ ಶಿಕ್ಷಕರ ಮತ್ತು ಇಲಾಖೆಯ ನಿರ್ಲಕ್ಷ್ಯದಿಂದಾಗಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣವಾಗದಿರುವುದು ಬೇಸರದ ಸಂಗತಿಯಾಗಿದೆ. ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದರೂ ಕೂಡ ಅವುಗಳ ಸಮರ್ಪಕ ಸದ್ಬಳಕೆ ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಮಕ್ಕಳ ಭವಿಷ್ಯಗಳು ನಿರೀಕ್ಷಿತ ಮಟ್ಟದಲ್ಲಿ ರೂಪುಗೊಳ್ಳುತ್ತಿಲ್ಲ. ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಇಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಬೇಕಾಗಿದೆ’ ಎನ್ನುತ್ತಾರೆ ಸ್ಥಳೀಯ ಪೋಷಕರು.

ಬೀಗದ ಕೈ ನೀಡಲಾಗಿದೆ

ನಾಲ್ಕು ತಿಂಗಳ ಹಿಂದೆಯೇ ‌ಕಾಮಗಾರಿ ಪೂರ್ಣಗೊಳಿಸಿ ಕೊಠಡಿಗಳನ್ನು ಮಕ್ಕಳ ಕಲಿಕೆಗೆ ಬಳಕೆ ಮಾಡಿಕೊಳ್ಳುವಂತೆ ಕೊಠಡಿಗಳ ಕೀ ಗಳನ್ನು ಶಾಲೆಯ ಶಿಕ್ಷಕರಿಗೆ ನೀಡಲಾಗಿದೆ. ಜತೆಗೆ ಕಟ್ಟಡದ ಉದ್ಘಾಟನೆಗೆ ಸ್ಥಳೀಯ ಶಾಸಕರು ಮತ್ತು ಮಂತ್ರಿಗಳ ಸಮಯಕ್ಕೆ ಕಾಯುತ್ತಿದ್ದು ಅವರು ದಿನಾಂಕ ನಿಗದಿಪಡಿಸಿದ ಕೂಡಲೇ ಕಟ್ಟಡದ ಉದ್ಘಾಟನೆ ಮಾಡಲಾಗುವುದು. ಅಲ್ಲಿಯವರೆಗೂ ಅದನ್ನು ಬಳಕೆ ಮಾಡಿಕೊಳ್ಳಲು ಯಾವುದೇ ಸಮಸ್ಯೆಯಿಲ್ಲ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಎಇಇ ಪ್ರಕಾಶ್.

ಮೇಲಧಿಕಾರಿ ಜೊತೆ ಚರ್ಚಿಸಿ ತೀರ್ಮಾನ

ಶಾಲೆಯಲ್ಲಿ ಮಕ್ಕಳ ಅಗತ್ಯಕ್ಕೆ ಅನುಸಾರವಾಗಿ ನೂತನ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಸ್ಥಳೀಯ ಜನಪ್ರತಿನಿಧಿಗಳು ಉದ್ಘಾಟನೆಗೆ ಕಾಲಾವಕಾಶ ನೀಡದ ಕಾರಣ ತಡವಾಗುತ್ತಿದೆ. ಮಕ್ಕಳ ಕಲಿಕೆಯ ದೃಷ್ಟಿಯಿಂದ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ನೂತನ ಕಟ್ಟಡವನ್ನು ಉದ್ಘಾಟನೆಗೂ ಮುನ್ನವೇ ಬಳಕೆ ಮಾಡಿಕೊಳ್ಳಲು ಅನುಮತಿ ಪಡೆಯಲಾಗುವುದು ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಶ್ರೀನಿವಾಸಮೂರ್ತಿ.

ಗೋದಾಮಿನಲ್ಲಿ ಪಾಠ: ಅಪಾಯದಲ್ಲಿ ಮಕ್ಕಳ ಜೀವ

ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯ ಸಾಮಗ್ರಿಗಳನ್ನು ಸರಬರಾಜು ಮಾಡಿ ಅವುಗಳ ನಿರ್ವಹಣೆ ಮತ್ತು ಸದ್ಬಳಕೆ ಬಗ್ಗೆ ಜಾಗೃತಿ ವಹಿಸಬೇಕಾಗಿರುವ ಸ್ಥಳೀಯ ಅಕ್ಷರ ದಾಸೋಹ ಅಧಿಕಾರಿಗಳ ಕರ್ತವ್ಯ. ಆದರೆ ಈ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರತಿ ತಿಂಗಳು ಶಾಲೆಗಳಿಗೆ ಸರಬರಾಜಾಗುವ ಆಹಾರ ಧಾನ್ಯಗಳನ್ನು ಶಾಲೆಯ ತರಗತಿ ಕೊಠಡಿಗಳಲ್ಲಿ ಅವೈಜ್ಞಾನಿಕವಾಗಿ ದಾಸ್ತಾನು ಮಾಡಲಾಗುತ್ತಿದೆ. ಇದರಿಂದ ಅನಾಹುತ ಸಂಭವಿಸಿದರೆ ಮಕ್ಕಳ ಜೀವಕ್ಕೆ ಕಂಟಕವಾಗಲಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಆಹಾರ ಧಾನ್ಯಗಳ ಸರಬರಾಜು ಸಂಗ್ರಹಣೆ ಮತ್ತು ದಾಸ್ತಾನು ಬಗ್ಗೆ ನಿಗಾ ವಹಿಸಬೇಕಾಗಿದೆ ಎನ್ನುತ್ತಾರೆ ಮಕ್ಕಳ ಪೋಷಕರು.

ಡಿ.ಪಾಳ್ಯ ದಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದಾಗಿ ಆಹಾರ ಧಾನ್ಯಗಳ ದಾಸ್ತಾನು ಕೊಠಡಿಯಲ್ಲಿ ಮಕ್ಕಳ ಆಟ ಪಾಠ.
ಡಿ.ಪಾಳ್ಯ ದಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ.
ಡಿ.ಪಾಳ್ಯ ದಲ್ಲಿನ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಲೋಕೋಪಯೋಗಿ ‌ಇಲಾಖೆಯ ವತಿಯಿಂದ ‌ನಿರ್ಮಾಣವಾಗಿ ಉದ್ಘಾಟನೆ ಭಾಗ್ಯ ದೊರೆಯದೆ ಇರುವ ಸುಸಜ್ಜಿತ ಕಟ್ಟಡ
ಆತಂಕದಲ್ಲಿ ಮಕ್ಕಳ ಕಲಿಕೆ
ತರಗತಿ ಕೊಠಡಿಗಳ ಕೊರತೆಯಿಂದಾಗಿ ಶಾಲಾ ಆವರಣದ ಮರದಡಿಯಲ್ಲಿ ಮಕ್ಕಳ ಕಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.