ADVERTISEMENT

ಒಗ್ಗಟ್ಟಿನ ಹೋರಾಟ ಮುಂದುವರೆಯಲಿ- ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಎಂ.ಎ.ಬೇಬಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 5:00 IST
Last Updated 30 ನವೆಂಬರ್ 2021, 5:00 IST
ಬಾಗೇಪಲ್ಲಿಯ ಡಾ.ಎಚ್.ಎನ್.ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಿಪಿಎಂನ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಎಂ.ಎ.ಬೇಬಿ ಮಾತನಾಡಿದರು
ಬಾಗೇಪಲ್ಲಿಯ ಡಾ.ಎಚ್.ಎನ್.ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಿಪಿಎಂನ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಎಂ.ಎ.ಬೇಬಿ ಮಾತನಾಡಿದರು   

ಬಾಗೇಪಲ್ಲಿ: ದೇಶದ ಕೃಷಿ, ಕೂಲಿಕಾರ್ಮಿಕರ, ಸಂಘಟನೆಗಳ ಒಗ್ಗಟ್ಟಿನ ಶಕ್ತಿ ಇರುವುದರಿಂದ ಕೇಂದ್ರ ಸರ್ಕಾರ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದೆ. ದೇಶದಲ್ಲಿ ಸಂಘಟಿತ ಹೋರಾಟಗಳು ಮುಂದುವರೆದು, ದೇಶದಲ್ಲಿನ ಭ್ರಷ್ಟ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೊಲಗಿಸಬೇಕು ಎಂದು ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಎಂ.ಎ.ಬೇಬಿ ಹೇಳಿದರು.

ಪಟ್ಟಣದ ಡಾ.ಎಚ್.ಎನ್.ವೃತ್ತದಲ್ಲಿ ಸಿಪಿಎಂನ 18ನೇ ಜಿಲ್ಲಾ ಸಮ್ಮೇಳನದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಒಂದು ವರ್ಷದಿಂದ ದೆಹಲಿಯ ರೈತರ ಹೋರಾಟಗಳಲ್ಲಿ 700 ರೈತರು ಹುತಾತ್ಮರಾಗಿದ್ದಾರೆ. ಕೃಷಿಕೂಲಿಕಾರ್ಮಿಕರ ಹೋರಾಟಗಳಲ್ಲಿ ಶಕ್ತಿ ಇದೆ ಎಂದು ಭಾವಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿರುವುದು ರೈತರ ಹೋರಾಟಕ್ಕೆ ಸಂದ ಜಯ ಆಗಿದೆ ಎಂದರು.

ADVERTISEMENT

ರೈತರ ಹೋರಾಟದಿಂದ ನರೇಂದ್ರಮೋದಿ ಅವರಿಗೆ ನಡುಕ ಹೆಚ್ಚಾಗಿದೆ. ಇದರಿಂದ ದೇಶದಲ್ಲಿ ಬಿಜೆಪಿಗೆ ಸೋಲಿನ ಶಕೆ ಉಂಟಾಗುತ್ತದೆ. ಕೇಂದ್ರ ಸರ್ಕಾರಕ್ಕೆ ರೈತರ ಹೋರಾಟಗಳು ಎಚ್ಚರಿಕೆ ಸಂದೇಶ ನೀಡಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಕೂಡಲೇ
ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸಬೇಕು. ಜನಸಾಮಾನ್ಯರ ಪರ ಯೋಜನೆಗಳನ್ನು ಜಾರಿ ಮಾಡಬೇಕು
ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಏಜೆಂಟರಂತೆ ವರ್ತಿಸುತ್ತಿದೆ. ಅಂಬಾನಿ, ಅದಾನಿಯಂತಹ ಶ್ರೀಮಂತರ ಸಾಲ ಮನ್ನಾ ಮಾಡುವ ಸರ್ಕಾರಗಳಿಗೆ, ಕೃಷಿ, ಕೂಲಿಕಾರ್ಮಿಕರ ಸಾಲ ಮನ್ನಾ ಮಾಡಲು ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು. ಕೋವಿಡ್ ಸಂದರ್ಭದಲ್ಲಿ ಸಿಪಿಎಂ ನೇತೃತ್ವದ ಕೇರಳ ಸರ್ಕಾರ ಜನರಿಗೆ 50 ಅಗತ್ಯ ವಸ್ತುಗಳನ್ನು ನೀಡಿದೆ. ಜೀವನ ನಿರ್ವಹಣೆ
ಭತ್ಯೆ ನೀಡಿರುವುದು ದೇಶಕ್ಕೆ ಮಾದರಿ ಆಗಿದೆ. ಇದರಿಂದ ಅಲ್ಲಿನ ಜನರು ಎಲ್‌ಡಿಎಫ್ ನೇತೃತ್ವದ
ಸರ್ಕಾರವನ್ನು 2ನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನರ ವಿಶ್ವಾಸ ಪಡೆದು, ಕ್ಷೇತ್ರದಲ್ಲಿ ವಿಧಾನಸಭಾ ಕ್ಷೇತ್ರ, ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮತ್ತೆ ಕೆಂಬಾವುಟ ಹಾರಿಸಬೇಕು ಎಂದು ಕರೆ ನೀಡಿದರು.

ಸಿಪಿಎಂನ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದೇಶದಲ್ಲಿ ಅಸಮಾನತೆ, ಜಾತಿಪದ್ಧತಿಗಳು ಜೀವಂತ ಇವೆ. ಜನತಾಪ್ರಭುತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ಅಪರೇಷನ್ ಕಮಲದ ಹೆಸರಿನಲ್ಲಿ ಶಾಸಕರು ತಮ್ಮನ್ನು ತಾವೇ ಮಾರಾಟ ಮಾಡಿಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ. ಸಾಲ ಮನ್ನಾ ಮಾಡದ ಹಾಗೂ ಜನರಿಗೆ ಆಹಾರ, ಶಿಕ್ಷಣ, ಆರೋಗ್ಯ ಕಲ್ಪಿಸದ ಸರ್ಕಾರಗಳು, ಕಾರ್ಪೊರೇಟ್
ಕಂಪನಿಗಳ ಮಾಲೀಕರ ಏಜೆಂಟರಂತೆ ವರ್ತಸುತ್ತಿವೆ ಎಂದರು.

ಬಹಿರಂಗ ಸಭೆಗೆ ಮುನ್ನ ಪಟ್ಟಣದ ಕಾರ್ಪೊರೇಷನ್ ಬ್ಯಾಂಕಿನಿಂದ ಸುಂದರಯ್ಯ ಭವನ, ಮುಖ್ಯರಸ್ತೆಯಲ್ಲಿ ಡಾ.ಎಚ್.ಎನ್.ವೃತ್ತದವರೆಗೂ ಸಿಪಿಎಂ ಮುಖಂಡರು, ಕಾರ್ಯಕರ್ತರು ಕೆಂಬಾವುಟಗಳನ್ನು ಹಿಡಿದು ಮೆರವಣಿಗೆ ನಡೆಸಿದರು.

ಸಿಪಿಎಂನ ರಾಜ್ಯ ಸಮಿತಿ ಸದಸ್ಯ ಉಮೇಶ್, ವರಲಕ್ಷ್ಮಮ್ಮ, ಎಚ್.ಪಿ.ಲಕ್ಷ್ಮಿನಾರಾಯಣ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಜಯರಾಮರೆಡ್ಡಿ, ಸಮ್ಮೇಳನದ ಸ್ವಾಗತಿ ಸಮಿತಿ ಗೌರವಾಧ್ಯಕ್ಷ ಡಾ.ಅನಿಲ್ ಕುಮಾರ್, ಖಜಾಂಚಿ ಮಂಜುನಾಥ ರೆಡ್ಡಿ, ತಾಲ್ಲೂಕು ಕಾರ್ಯದರ್ಶಿ ಮಹಮದ್ಅಕ್ರಂ, ಮುಖಂಡ ಎಂ.ಪಿ.ಮುನಿವೆಂಕಟಪ್ಪ, ಎಂ.ಎನ್.ರಘುರಾಮರೆಡ್ಡಿ, ಬಿ.ಎನ್.ಮುನಿಕೃಷ್ಣಪ್ಪ, ಶ್ರೀರಾಮನಾಯಕ್, ಅಶ್ವತಪ್ಪ, ರಾಮಪ್ಪ, ಬಿ.ಆಂಜನೇಯರೆಡ್ಡಿ, ಸಾವಿತ್ರಮ್ಮ, ಶೋಭಾರಾಣಿ, ಸುಜಾತಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.