ADVERTISEMENT

ಎತ್ತಿನಹೊಳೆಗೆ ಡ್ಯಾಂ: ಸಿ.ಎಂಗೆ ಮನವಿ

ಗಂಗಾ ಕಲ್ಯಾಣ; 103 ಫಲಾನುಭವಿಗಳಿಗೆ ಮಂಜೂರಾತಿ ಪತ್ರ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 4:09 IST
Last Updated 8 ಸೆಪ್ಟೆಂಬರ್ 2021, 4:09 IST
ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಡಾ.ಕೆ.ಸುಧಾಕರ್ ಮಂಜೂರಾತಿ ಆದೇಶ ಪ್ರತಿಗಳನ್ನು ವಿತರಿಸಿದರು
ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಡಾ.ಕೆ.ಸುಧಾಕರ್ ಮಂಜೂರಾತಿ ಆದೇಶ ಪ್ರತಿಗಳನ್ನು ವಿತರಿಸಿದರು   

ಚಿಕ್ಕಬಳ್ಳಾಪುರ: ಬೈರಗೊಂಡ್ಲು ಜಲಾಶಯಕ್ಕೆ ಭೂಸ್ವಾಧೀನ ಸಂಬಂಧ ಕೊರಟಗೆರೆ ರೈತರು ಹೆಚ್ಚಿನ ಪರಿಹಾರ ಕೇಳುತ್ತಿದ್ದಾರೆ. ಅಷ್ಟು ಪರಿಹಾರ ಹಣ ನೀಡಲು ಸಾಧ್ಯವಿಲ್ಲ. ಆದ್ದರಿಂದ ದೊಡ್ಡಬಳ್ಳಾಪುರದಲ್ಲಿ ನಾಲ್ಕು ಟಿಎಂಸಿ ಅಡಿ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಭಾಗದಲ್ಲಿ ಎರಡು ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಬೆಂಗಳೂರಿನ ಸರ್ಕಾರಿ ವಸತಿ ಗೃಹದಲ್ಲಿ ಮಂಗಳವಾರ ಮಂಜೂರಾತಿ ಆದೇಶ ಪ್ರತಿಗಳನ್ನು ವಿತರಿಸಿ ಮಾತನಾಡಿದರು.

ನಂದಿ ಅಥವಾ ಕಸಬಾ ಭಾಗದಲ್ಲಿ ಎತ್ತಿನಹೊಳೆ ನೀರು ಸಂಗ್ರಹಕ್ಕೆ ಜಲಾಶಯ ನಿರ್ಮಿಸಬಹುದು. ಇದರಿಂದ ಅಂತರ್ಜಲ ಸಹ ವೃದ್ಧಿಯಾಗುತ್ತದೆ. ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಸಹ ನಡೆಯುತ್ತಿದೆ ಎಂದು ಹೇಳಿದರು.

ADVERTISEMENT

ಎಚ್‌.ಎನ್.ವ್ಯಾಲಿಯಿಂದ ನೀರು ತರುವ ಪರಿಶ್ರಮ ಹೋರಾಟ ಅಪಾರವಾದುದು. ಆದರೆ ನೀರು ತಂದ ನಂತರ ಅದಕ್ಕೆ ನಾನಾ ಅಪ್ಪಂದಿರು ಎನ್ನುವಂತೆ ಆಗಿದೆ. ಈ ಯೋಜನೆಯಿಂದ ನಂದಿ ಭಾಗಕ್ಕೆ ನೀರು ಕೊಡಬಾರದು ಎಂದಲ್ಲ. ಆದರೆ ಭೌಗೋಳಿಕ ಸಾಧ್ಯತೆಗಳನ್ನು ಆಧರಿಸಿ ನೀರು ಹರಿಸಲಾಗುತ್ತಿದೆ ಎಂದು ಹೇಳಿದರು.

ಒಟ್ಟು 103 ಮಂದಿ ಫಲಾನುಭವಿಗಳಿಗೆ ಕೊಳವೆಬಾವಿ ಕೊರೆಸಲು ಆದೇಶ ಪತ್ರ ನೀಡಲಾಗಿದೆ. ಒಬ್ಬ ಅತಿ ಸಣ್ಣ ರೈತನ ಜೀವನದಲ್ಲಿ ಕೊಳವೆಬಾವೆ ಅತ್ಯಂತ ದೊಡ್ಡದ್ದಾಗುತ್ತದೆ. ಆತನ ಬದುಕು ಕಟ್ಟಿಕೊಡುತ್ತದೆ ಎಂದರು.

‘ನಾನು ಸಣ್ಣ ಹುಡುಗನಿಂದ ಕೊಳೆವೆಬಾವಿ ಕೊರೆಯಿಸಲು ರೈತರು ಕಷ್ಟಪಡುವುದನ್ನು ನೋಡಿದ್ದೇವೆ. ಕೊಳವೆ ಬಾವಿ ಹಾಕಿಸಿದರೆ ನೀರು ಬರುತ್ತದೆಯೊ ಇಲ್ಲವೊ ಎನ್ನುವ ಖಾತರಿ ಸಹ ಇಲ್ಲ’ ಎಂದರು.

‘ಅನೇಕ ವರ್ಷಗಳಿಂದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಅಂತರ್ಜಲ ಮಟ್ಟ ಕುಸಿದಿದೆ. ನನ್ನ ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದೀರಿ. ಜನರ ಬದುಕು ಕಟ್ಟಿಕೊಡುವ ವ್ಯವಸ್ಥೆ ಆಗಬೇಕು. ಕೆಲವೇ ವರ್ಷಗಳಲ್ಲಿ ಕಠಿಣ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ’ ಎಂದು ಹೇಳಿದರು.

ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಮಸ್ವಾಮಿ, ಮರಳುಕುಂಟೆ ಕೃಷ್ಣಮೂರ್ತಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.