ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನವು ಏಪ್ರಿಲ್ ಮೊದಲ ಅಥವಾ ಎರಡನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ. ಸಮ್ಮೇಳನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈಗಾಗಲೇ ಆರಂಭಿಕ ಸಿದ್ಧತೆಗಳನ್ನು ಸಹ ನಡೆಸಿದೆ.
ಜಿಲ್ಲಾ ಕನ್ನಡ ಭವನದ ಕಾಮಗಾರಿ ಮಾರ್ಚ್ ಅಂತ್ಯಕ್ಕೆ ವೇಳೆಗೆ ಪೂರ್ಣವಾಗಲಿದೆ. ಕನ್ನಡ ಭವನ ಉದ್ಘಾಟನೆಯ ತರುವಾಯ ಸಮ್ಮೇಳನವನ್ನು ಇಲ್ಲಿಯೇ ನಡೆಸಲು ಸಹ ಆಲೋಚಿಸಲಾಗಿದೆ. ಒಂದು ವೇಳೆ ಕನ್ನಡ ಭವನ ಉದ್ಘಾಟನೆ ಈ ವೇಳೆಗೆ ಸಾಧ್ಯವಾಗದಿದ್ದರೆ ನಗರ ಎಸ್‌ಜೆಸಿಐಟಿ ಸಭಾಂಗಣದಲ್ಲಿ ಕನ್ನಡದ ಹಬ್ಬ ನಡೆಯಲಿದೆ.
2023ರ ಮಾರ್ಚ್ 4ರಂದು ನಗರದ ನಂದಿ ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ 9ನೇ ಸಾಹಿತ್ಯ ಸಮ್ಮೇಳನ ನಡೆದಿತ್ತು. ಲೇಖಕ ಎಸ್.ಷಡಕ್ಷರಿ ಅಧ್ಯಕ್ಷರಾಗಿದ್ದರು. 2024ರಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನ ಸಾಧ್ಯವಾಗಿರಲಿಲ್ಲ. ಈಗ 10ನೇ ಸಾಹಿತ್ಯ ಸಮ್ಮೇಳನವನ್ನು ಏಪ್ರಿಲ್‌ನಲ್ಲಿ ನಡೆಸಲು ಜಿಲ್ಲಾ ಕಸಾಪ ಮುಂದಾಗಿದೆ.
ಮಾರ್ಚ್‌ನಲ್ಲಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಇರುತ್ತವೆ. ಆದ ಕಾರಣ ಮಾರ್ಚ್‌ನಲ್ಲಿ ಸಮ್ಮೇಳನ ನಡೆಸಲು ಸಮಸ್ಯೆ ಆಗಲಿದೆ. ಏಪ್ರಿಲ್ 14ರವರೆಗೆ ಶಾಲಾ, ಕಾಲೇಜುಗಳು ಇರುತ್ತವೆ. ಆ ಕಾರಣದಿಂದ ಏಪ್ರಿಲ್ 10ರ ವೇಳೆಗೆ ಸಮ್ಮೇಳನ ನಡೆಸಿದರೆ ಒಳಿತು ಎನ್ನುವ ಅಭಿಪ್ರಾಯ ಕಸಾಪ ಪದಾಧಿಕಾರಿಗಳು ಮತ್ತು ಗಣ್ಯರಿಂದ ವ್ಯಕ್ತವಾಗಿದೆ.
ಸಮ್ಮೇಳನದ ನಡೆಸುವ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ ಹಾಗೂ ಪದಾಧಿಕಾರಿಗಳು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾಡಳಿತ ಹಾಗೂ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳ ಜೊತೆ ಚರ್ಚೆ ಸಹ ನಡೆಸಿದ್ದಾರೆ. ಜನಪ್ರತಿನಿಧಿಗಳಿಂದ ಸಹಕಾರದ ಭರವಸೆಯೂ ದೊರೆತಿದೆ.
ಅನುದಾನದ ಚಿಂತೆ: ಜಿಲ್ಲಾ ಮಟ್ಟದ ಸಮ್ಮೇಳನ ನಡೆಸಲು ಸರ್ಕಾರವು ₹ 5 ಲಕ್ಷ ಅನುದಾನ ನೀಡುತ್ತದೆ. ಆದರೆ ಈ ಬಾರಿ ಆ ಹಣ ಬಿಡುಗಡೆ ಕಷ್ಟ ಸಾಧ್ಯ. ಆದ್ದರಿಂದ ಸಮ್ಮೇಳನಕ್ಕೆ ಅನುದಾನದ ಚಿಂತೆಯೂ ಕಾಡುತ್ತಿದೆ. ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಸಮ್ಮೇಳನ ನಡೆಸಲು ತಗುಲುವ ಖರ್ಚು ವೆಚ್ಚಗಳ ನಿಭಾವಣೆ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಕಾರಣದಿಂದ ಸಮ್ಮೇಳನಕ್ಕೆ ಹೆಜ್ಜೆ ಇಡಲಾಗಿದೆ.
ಕನ್ನಡ ಭವನ ಉದ್ಘಾಟನೆಯಾದ ತರುವಾಯ ಸಮ್ಮೇಳನ ನಡೆದರೆ ಹೊಸ ಭವನ ನೋಡಲು ಜನರು ಸಹ ಬರುತ್ತಾರೆ ಎನ್ನುವ ನಿರೀಕ್ಷೆ ಸಹ ಇದೆ. ಭವನವು ಜಿಲ್ಲಾ ಮಟ್ಟದ ಕಾರ್ಯಕ್ರಮದ ಮೂಲಕ ಕಾರ್ಯಾರಂಭ ಮಾಡಬೇಕು ಎನ್ನುವ ಆಸೆಯೂ ಸಚಿವರದ್ದಾಗಿದೆ.
ಸಚಿವರು ಮತ್ತು ಆದಿಚುಂಚನಗಿರಿ ಮಠದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಕನ್ನಡ ಭವನ ಉದ್ಘಾಟನೆ ಆಗದಿದ್ದರೆ ಎಸ್‌ಜೆಸಿಐಟಿಯಲ್ಲಿ ಸಮ್ಮೇಳನ ಮಾಡಿ ಎಂದು ಸ್ವಾಮೀಜಿ ಅವರು ತಿಳಿಸಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ ತಿಳಿಸಿದರು.
ಕನ್ನಡ ಭವನ ನಿರ್ಮಾಣವಾಗುತ್ತದೆ. ಅಲ್ಲಿಯೇ ಸಮ್ಮೇಳನ ಮಾಡೋಣ. ನಮ್ಮಿಂದ ಸಾಧ್ಯವಿರುವ ನೆರವು ನೀಡುವುದಾಗಿಯೂ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ. ಕನ್ನಡ ಭವನದಲ್ಲಿ ಕಾರ್ಯಕ್ರಮ ನಡೆದರೆ ವೇದಿಕೆ, ಮೈಕ್ ಇತ್ಯಾದಿಗಳಿಗೆ ವೆಚ್ಚವೂ ಕಡಿಮೆ ಆಗುತ್ತದೆ. ಅನುಕೂಲವಾಗುತ್ತದೆ ಎಂದರು.
ಪ್ರಕ್ರಿಯೆ ಆರಂಭ
ಶಿಡ್ಲಘಟ್ಟದಲ್ಲಿ 14ರಂದು ಬಾಗೇಪಲ್ಲಿಯಲ್ಲಿ 19 ಮತ್ತು ಗುಡಿಬಂಡೆಯಲ್ಲಿ ಮಾರ್ಚ್ ಮೊದಲ ವಾರ ತಾಲ್ಲೂಕು ಮಟ್ಟದ ಸಮ್ಮೇಳನ ಸಹ ನಡೆಯಲಿದೆ. ಆ ನಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಏಪ್ರಿಲ್‌ನಲ್ಲಿ ನಡೆಸಲು ಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ ತಿಳಿಸಿದರು. ಜಿಲ್ಲಾ ಸಮ್ಮೇಳನದ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ. ಎಲ್ಲರ ಸಹಕಾರದಲ್ಲಿ ಮುಂದುವರಿಯಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.